ಬೆಂಗಳೂರು, ಜ.7- ಮೇಕೆದಾಟು ಯೋಜನೆಗೆ ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ವತಿಯಿಂದ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಮೇಕೆದಾಟು ಚಲೋ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಿಂದ ರಾಮನಗರ ಮಾರ್ಗವಾಗಿ ಮೇಕೆದಾಟುವಿಗೆ ಹಲವು ವಾಹನಗಳಲ್ಲಿ ಮೆರವಣಿಗೆ ಮೂಲಕ ಸಾಗಿದ ಕಾರ್ಯಕರ್ತರು ಮೇಕೆದಾಟು ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್ ಅವರು, ಮೇಕೆದಾಟು ಯೋಜನೆ ಬಗ್ಗೆ ನಾವು ನಿರಂತರವಾಗಿ ವರ್ಷಾನುಗಟ್ಟಲೆ ಹೋರಾಟ ಮಾಡುತ್ತಲೇ ಬಂದಿದ್ದೇವೆ. ಯಾವುದೇ ಸರ್ಕಾರಗಳು ಈ ಯೋಜನೆ ಜಾರಿ ಮಾಡುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಎಲ್ಲ ರಾಜಕೀಯ ಪಕ್ಷಗಳು ಕೇವಲ ರಾಜಕಾರಣದ ದೃಷ್ಟಿಯಲ್ಲೇ ಯೋಜನೆಯನ್ನು ನೋಡುತ್ತಿವೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಕರ್ನಾಟಕವನ್ನು ಕಡೆಗಣಿಸಿದೆ. ಈ ಯೋಜನೆ ಸಂಬಂಧ ರೂಪಿಸಿದ ಡಿಪಿಆರ್‍ಅನ್ನು ಮೂಲೆಗುಂಪು ಮಾಡಿದ ತಮಿಳುನಾಡು ಸರ್ಕಾರಕ್ಕೆ ಪರೋಕ್ಷ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದರು. ಕೂಡಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರ್ವಪಕ್ಷಗಳ ಸಭೆ ಕರೆದು ಈ ಬಗ್ಗೆ ಚರ್ಚಿಸಿ ಪ್ರಧಾನಿ ಬಳಿ ನಿಯೋಗ ಕೊಂಡೊಯ್ಯಬೇಕು ಎಂದು ಅವರು ಹೇಳಿದರು.
ಎಲ್ಲ ಸಂಸದರು ಈ ಯೋಜನೆ ಸಂಬಂಧ ಕೇಂದ್ರ ಸರ್ಕಾರದ ಮೇಲೆ ತೀವ್ರ ಒತ್ತಡ ತರಬೇಕು. ಇಲ್ಲದಿದ್ದರೆ ಅವರ ವಿರುದ್ಧವೂ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಈ ಯೋಜನೆಯನ್ನು ಜಾರಿಗೊಳಿಸಬೇಕು. ಅದನ್ನು ಮಾಡದೆ ಈಗ ಪಾದಯಾತ್ರೆ ಮಾಡುತ್ತಿದೆ ಎಂದು ಹೇಳಿದರು.
