ಕನಕಪುರ, ಮಾ. 7- ಮೇಕೆದಾಟು ಅಣೆಕಟ್ಟು ನಿರ್ಮಾಣದ ವಿಷಯದಲ್ಲಿ ಕೇಂದ್ರ ನೀರಾವರಿ ಸಚಿವ ಶೇಖಾವತ್‍ರವರು ಎರಡು ರಾಜ್ಯಗಳು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಿ ಎಂದು ಹೇಳುತ್ತಿರುವುದು ಆಶಾಸ್ಪದವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವರ ಹೇಳಿಕೆಗೆ ನಮ್ಮ ಮುಖ್ಯಮಂತ್ರಿಗಳು ಮೌನ ವಹಿಸಿರುವುದು ಯಾವ ನ್ಯಾಯ ಇವರ ಕೈಯಲ್ಲಿ ಮೇಕೆದಾಟು ವಿಚಾರವನ್ನು ಬಗೆಹರಿಸಲಾಗದಿದ್ದಲ್ಲಿ ರಾಜೀನಾಮೆಯನ್ನು ನೀಡಲಿ ಎಂದು ಆಗ್ರಹಿಸಿದರು.
ತಮಿಳುನಾಡು ಸರ್ಕಾರ ಮೇಕೆದಾಟು ವಿಚಾರದಲ್ಲಿ ಯಾವುದೇ ಸಂಧಾನಕ್ಕೂ ಬರುವುದಿಲ್ಲ ಹಾಗಾಗಿ ಈ ವಿಚಾರ ಮತ್ತಷ್ಟು ಜಟಿಲವಾಗಲಿದೆ. ಕೇಂದ್ರ ಸರ್ಕಾರವೇ ಮಧ್ಯೆ ನಿಂತು ಬಗೆಹರಿಸುವುದಲ್ಲದೇ ಪರಿಸರ ಇಲಾಖೆಯಿಂದ ಅನುಮತಿ ಪಡೆದು ಯೋಜನೆಗೆ ಸಹಕಾರ ನೀಡಬೇಕು. ಇದನ್ನು ಮಾಡದೇ ಹೋದಲ್ಲಿ ಇವರು ಅಸಮರ್ಥರೆಂದು ತಿಳಿಯಬೇಕಾಗುತ್ತದೆ ಎಂದು ತಿಳಿಸಿದರು.
