ಬೆಂಗಳೂರು, ಮಾ.3- ಕಾಂಗ್ರೆಸ್‍ನ ಪಾದಯಾತ್ರೆ ಸಮಾರೋಪ ಸಮಾರಂಭಕ್ಕೆ ಸುಮಾರು 50 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಸುಮಾರು ಒಂಭತ್ತು ದಿನಗಳ ಪಾದಯಾತ್ರೆ ಕನಕಪುರ ತಾಲ್ಲೂಕು ಮೇಕೆದಾಟುವಿನಿಂದ ಆರಂಭಗೊಂಡು ಎರಡು ಹಂತಗಳಲ್ಲಿ ನಡೆದಿದ್ದು, ಇಂದು ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅಂತ್ಯಗೊಳ್ಳಲಿದೆ.
ನಗರದ ಮಲ್ಲೇಶ್ವರಂ, ಶಿವಾಜಿನಗರ, ಗಾಂಧಿನಗರ, ಚಾಮರಾಜಪೇಟೆ, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಪಾದಯಾತ್ರೆಗೆ ಸುಮಾರು ಐದು ಸಾವಿರಕ್ಕೂ ಹೆಚ್ಚು ಮಂದಿ ಹೆಜ್ಜೆ ಹಾಕಿದರು.
ನ್ಯಾಷನಲ್ ಕಾಲೇಜು ಮೈದಾನದಲ್ಲಿನ ಸಮಾರೋಪ ಸಮಾರಂಭದಲ್ಲಿ 50 ಸಾವಿರ ಕುರ್ಚಿಗಳನ್ನು ಹಾಕಲಾಗಿತ್ತು. ಸುಮಾರು ಒಂದು ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆಯನ್ನು ಕಾಂಗ್ರೆಸ್ ನಾಯಕರು ವ್ಯಕ್ತಪಡಿಸಿದರು.
ಕಾರ್ಯಕರ್ತರಿಗೆ ಚಾಮರಾಜಪೇಟೆಯ ಈದ್ಗಾ ಮೈದಾನ ಸೇರಿದಂತೆ ಹಲವಾರು ಕಡೆಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಮಾರೋಪ ಸಮಾರಂಭದ ನೇರ ಪ್ರಸಾರಕ್ಕೆ ಹಲವು ಕಡೆ ಎಲ್‍ಇಡಿಗಳನ್ನು ಸ್ಥಾಪಿಸಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪ್ರಕಾರ, ಇದು ಐತಿಹಾಸಿಕ ಪಾದಯಾತ್ರೆಯಾಗಿದ್ದು, ಪಕ್ಷಾತೀತ ಹಾಗೂ ಎಲ್ಲ ಸಂಘ-ಸಂಸ್ಥೆಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿವೆ. ಸರ್ಕಾರದ ಮೇಲೆ ಒತ್ತಡ ಹೇರಲು ನಡೆಸಿದ ಒಂಬತ್ತು ದಿನಗಳ ಹೋರಾಟ ಯಶಸ್ವಿಯಾಗಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‍ಸಿಂಗ್ ಸುರ್ಜೆವಾಲಾ, ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್ ಸೇರಿದಂತೆ ರಾಜ್ಯದ ಎಲ್ಲ ನಾಯಕರು, 12 ರಾಜ್ಯಗಳ ಯುವ ಕಾಂಗ್ರೆಸ್ ಅಧ್ಯಕ್ಷರು ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
