ಬೆಂಗಳೂರು,ಮಾ.1- ಮೇಕೆದಾಟು ಯೋಜನೆ ಬಗ್ಗೆ ಕಾಂಗ್ರೆಸ್ ಪಕ್ಷದ ನಾಯಕರು ಮಾತನಾಡುವ ನೈತಿಕತೆಯನ್ನೇ ಕಳೆದುಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಅಧಿಕಾರದಲ್ಲಿದ್ದಾಗ ಈ ಯೋಜನೆ ಬಗ್ಗೆ ಏನನ್ನೂ ಮಾಡದವರು ಈಗ ಯೋಜನೆ ಅನುಷ್ಠಾನಕ್ಕಾಗಿ ಪಾದಯಾತ್ರೆ ಹೊರಟಿರುವುದು ಹಾಸ್ಯಾಸ್ಪದ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ಸಿಗರಿಗೆ ಇದರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಕಿಡಿಕಾರಿದರು.
ನೀವು ಅಧಿಕಾರದಲ್ಲಿದ್ದಾಗ ಯೋಜನೆಯನ್ನು ಏಕೆ ಅನುಷ್ಠಾನ ಮಾಡಲಿಲ್ಲ. ಆವಾಗ ನಿಮಗೆ ಈ ಯೋಜನೆಯ ಮಹತ್ವ ಗೊತ್ತಿರಲಿಲ್ಲವೇ. ನಿಮಗೆ ಬದ್ದತೆ ಇದ್ದರೆ ಯೋಜನೆಯನ್ನು ಅನುಷ್ಠಾನ ಮಾಡುತ್ತಿದ್ದೀರಿ. ಈಗ ರಾಜಕೀಯಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದೀರಿ ಎಂದು ವ್ಯಂಗ್ಯವಾಡಿದರು.
ಯೋಜನೆ ಅನುಷ್ಠಾನಕ್ಕಾಗಿ ಕಡೆಪಕ್ಷ ವಿಸ್ತೃತ ಯೋಜನಾ ವರದಿ(ಡಿಪಿಆರ್) ಮಾಡದವರು ಈಗ ನಮಗೆ ಬದ್ದತೆ ಬಗ್ಗೆ ಪಾಠ ಮಾಡುತ್ತಿದ್ದಾರೆ. ನಮಗೆ ಬದ್ದತೆ ಇರುವುದರಿಂದಲೇ ಯೋಜನೆಯನ್ನು ಅನುಷ್ಠಾನಗೊಳಿಸಲು ಪ್ರಯತ್ನ ಮುಂದುವರೆಸಿದ್ದೇವೆ. ನಾವು ಅವರಿಂದ ಕಲಿಯಬೇಕಾದ್ದು ಏನೂ ಇಲ್ಲ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್‍ನವರು ಅಧಿಕಾರದಲ್ಲಿದ್ದಾಗ ವಿರೋಧ ಪಕ್ಷದವರ ಮೇಲೆ ಎಷ್ಟೆಷ್ಟು ಎಫ್‍ಐಆರ್ ಹಾಕಿದ್ದಾರೆ ಎಂಬುದು ನಮಗೂ ಗೊತ್ತು. ಕಾನೂನು ಎಲ್ಲರಿಗೂ ಎಂಬುದನ್ನು ಡಿ.ಕೆ.ಶಿವಕುಮಾರ್ ತಿಳಿದುಕೊಳ್ಳಬೇಕು. ವಿರೋಧ ಪಕ್ಷದವರ ಮೇಲೆ ಹಾಕುವಾಗ ನಿಮಗೆ ಕಾನೂನಿನ ಜ್ಞಾನ ಗೊತ್ತಿರಲಿಲ್ಲವೇ ಎಂದು ಪ್ರಶ್ನಿಸಿದರು.
ಪ್ರತಿಭಟನೆ ನಡೆಸುವ ವೇಳೆ ಕಾನೂನು ಉಲ್ಲಂಘಿಸಿದರೆ ನಿಯಮಗಳ ಪ್ರಕಾರವೇ ಕ್ರಮ ತೆಗೆದುದಕೊಳ್ಳುತ್ತೇನೆ. ವಾಸ್ತಾಂಶವನ್ನು ಅರ್ಥ ಮಾಡಿಕೊಂಡು ಮಾತನಾಡಬೇಕು. ಜನರು ಎಲ್ಲವನ್ನೂ ನೋಡುತ್ತಿದ್ದಾರೆ ಎಂದು ಕಿಡಿಕಾರಿದರು. ಗೃಹ ಸಚಿವ ಅರಗಜ್ಞಾನೇಂದ್ರ ನಾಲಾಯಕ್ ಎಂಬ ಡಿ.ಕೆ.ಶಿವಕುಮಾರ್ ಆರೋಪಕ್ಕೆ ತಿರುಗೇಟು ನೀಡಿದ ಬೊಮ್ಮಾಯಿ, ಅವರು ಮಂತ್ರಿಯಾದವರು. ಇನ್ನೊಬ್ಬರ ಬಗ್ಗೆ ಮಾತನಾಡುವಾಗ ಯೋಚಿಸಿ ಮಾತನಾಡಬೇಕು. ಈ ರೀತಿ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಚಿವ ಈಶ್ವರಪ್ಪನವರ ಮೇಲೆ ಪ್ರಕರಣ ದಾಖಲಿಸಿ ಎಂದು ಹೇಳಲು ಡಿ.ಕೆ.ಶಿವಕುಮಾರ್ ಯಾರು? ಮಾತನಾಡುವಾಗ ಎಚ್ಚರಿಕೆ ಇರಬೇಕು. ಯಾವುದೋ ವಿಷಯವನ್ನು ಇನ್ಯಾವುದೋ ವಿಷಯಕ್ಕೆ ಜೋಡಿಸುವುದು ಸರಿಯಲ್ಲ. ಏನೇ ಮಾತನಾಡಿದರೂ ಬದ್ದತೆಯಿಂದ ಮಾತನಾಡಬೇಕೆಂದು ತಿರುಗೇಟು ನೀಡಿದರು.
ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆಯಿಂದ ಯಾರಿಗೂ ಉಪಯೋಗವಿಲ್ಲ. ಸಾರ್ವಜನಕರಿಗೆ ತೊಂದರೆ ಕೊಟ್ಟು ಸಂಚಾರ ದಟ್ಟಣೆ ಸೃಷ್ಟಿಸಿ ತೊಂದರೆ ಮಾಡುತ್ತಿದ್ದಾರೆ. ಇದರಿಂದ ಎಲ್ಲರಿಗೂ ಕಿರಿಕಿರಿ. ರಾಜಕೀಯ ಇಚ್ಛಾಶಕ್ತಿಯಿಂದ ಬೆಂಗಳೂರು ಜನತೆಗೆ ತೊಂದರೆ ಕೊಡುತ್ತಿದ್ದಾರೆ ಎಂದು ದೂರಿದರು.
ಒಂದಲ್ಲ, ಎರಡಲ್ಲ ಮೂರು ಬಾರಿ ಪಾದಯಾತ್ರೆ ಮಾಡುತ್ತಿದ್ದಾರೆ. ನಗರದ ಯಾವುದೋ ಒಂದು ಕಡೆ ಸಂಚಾರ ದಟ್ಟಣೆಯಾದರೆ ಎಷ್ಟು ಸಮಸ್ಯೆಯಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಈಗ ಎಲ್ಲ ಕಡೆ ಟ್ರಾಫಿಕ್ ಸಮಸ್ಯೆಯಾಗುತ್ತಿದೆ. ಫ್ರೀಡಂಪಾರ್ಕ್‍ವರೆಗೂ ಬಂದು ತಮ್ಮ ಪಾದಯಾತ್ರೆಯನ್ನು ಮುಂದುವರೆಸಬಹುದಿತ್ತು. ನ್ಯಾಷನಲ್ ಮೈದಾನಕ್ಕೆ ಹೋಗುವ ಅಗತ್ಯವೇನಿದೆ ಎಂದು ಪ್ರಶ್ನಿಸಿದರು.
ಕೇವಲ ರಾಜಕೀಯ ಕಾರಣ ಮತ್ತು ತಮ್ಮ ಸ್ವಹಿತಕ್ಕಾಗಿ ನಡೆಸುತ್ತಿರುವ ಪಾದಯಾತ್ರೆ ಇದಾಗಿದೆ. ಇದರಲ್ಲಿ ಯಾವುದು ಕೂಡ ಸ್ಪಷ್ಟತೆ ಇಲ್ಲ. ನಾವು ಮೇಕೆದಾಟು ಯೋಜನೆಯನ್ನು ನಮ್ಮ ಅಧಿಕಾರ ಅವಧಿಯಲ್ಲಿ ಅನುಷ್ಠಾನ ಮಾಡಿಯೇ ತೀರುತ್ತೇವೆ ಎಂದು ಹೇಳಿದರು.
ಉಕ್ರೇನ್‍ನಲ್ಲಿ ಸಿಲುಕಿಕೊಂಡಿರುವ ಕರ್ನಾಟಕದ ವಿದ್ಯಾರ್ಥಿಗಳನ್ನು ವಾಪಸ್ ಕರೆತರುವ ಪ್ರಯತ್ನ ಮುಂದುವರೆದಿದೆ. ಇಂದು ಬೆಳಗ್ಗೆ ಮುಂಬೈಗೆ 7ನೇ ವಿಮಾನ ಬಂದಿದೆ. ಅಲ್ಲಿ ಕನ್ನಡಿಗರನ್ನು ಕರ್ನಾಟಕಕ್ಕೆ ಕಳುಹಿಸಿಕೊಡಲು ಇಬ್ಬರು ಅಧಿಕಾರಿಗಳನ್ನು ನೇಮಿಸಿದ್ದೇವೆ. ಇನ್ನೊಂದು ಕಡೆ ದೆಹಲಿಯಲ್ಲೂ ನಿಯೋಜನೆ ಮಾಡಲಾಗಿದೆ ಎಂದರು.
ಇಂದು ಬೆಳಗ್ಗೆ ವಿದೇಶಾಂಗ ಕಾರ್ಯದರ್ಶಿ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದೇವೆ. ಎಲ್ಲಿ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೋ ಅವರನ್ನು ರಕ್ಷಣೆ ಮಾಡಿ ಸುರಕ್ಷಿತವಾಗಿ ಕರೆತರಲು ಮನವಿ ಮಾಡಲಾಗಿದೆ. ಅವರಿಗೆ ಊಟ-ಉಪಚಾರ ಹಾಗೂ ಅವರು ಇರುವ ಸ್ಥಳ ಸೇರಿದಂತೆ ಪ್ರತಿಯೊಂದು ವಿಷಯಗಳನ್ನು ಹಂಚಿಕೊಂಡಿದ್ದೇವೆ ಎಂದು ಹೇಳಿದರು.
