ಕನಕಪುರ, ಜ.12- ಕೋವಿಡ್ ಸೋಂಕು ನಿಯಂತ್ರಿಸುವ ಸಲುವಾಗಿ ಸರ್ಕಾರ ರ್ಯಾಲಿ, ಪ್ರತಿಭಟನೆ ನಿಷೇಧಿಸಿದ್ದರೂ ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ಮುಖಂಡರ ವಿರುದ್ಧ ಮೂರನೆ ಎಫ್‍ಐಆರ್ ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಮೇಕೆದಾಟು ಯೋಜನೆಯ ಅನುಷ್ಠಾನ ಕುರಿತಂತೆ ಹಮ್ಮಿಕೊಂಡಿರುವ ಪಾದಯಾತ್ರೆಯ ಆಯೋಜಕರಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ 64 ಮಂದಿ ವಿರುದ್ಧ ಕನಕಪುರ ಟೌನ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸರ್ಕಾರದ ಆದೇಶ ಉಲ್ಲಂಘಿಸಿ ಸಭೆ, ಪಾದಯಾತ್ರೆ ನಡೆಸಿದ ಆರೋಪದ ಮೇಲೆ ಕನಕಪುರ ತಹಸೀಲ್ದಾರ್ ವಿಶ್ವನಾಥ್ ಅವರು ಕನಕಪುರ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಈ ಮೊದಲು ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಚಿತ್ರನಟರಾದ ದುನಿಯಾ ವಿಜಯ್, ಸಾಧುಕೋಕಿಲಾ ಸೇರಿ 31 ಜನರ ವಿರುದ್ಧ ಮೊದಲನೆ ಎಫ್‍ಐಆರ್ ಸಾತನೂರಿನಲ್ಲಿ ದಾಖಲಾಗಿತ್ತು.
ಮೊನ್ನೆ ದೊಡ್ಡಾಲಹಳ್ಳಿಯಿಂದ ಕನಕಪುರದವರೆಗೆ ಪಾದಯಾತ್ರೆ ನಡೆಸಿದ 41 ಕಾಂಗ್ರೆಸ್ ಮುಖಂಡರ ವಿರುದ್ಧ ಸಾತನೂರಿನಲ್ಲಿ ಮತ್ತೊಂದು ಎಫ್‍ಐಆರ್ ದಾಖಲಾಗಿದೆ. ಈ ದೂರಿನಲ್ಲೂ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಹೆಸರು ಇದೆ.
ಇದೀಗ ಕನಕಪುರದಲ್ಲಿ ಮೂರನೆ ಎಫ್‍ಐಆರ್ ದಾಖಲಾಗಿದ್ದು, ನಿನ್ನೆ ಬೆಳಗ್ಗೆ 11 ಗಂಟೆಗೆ ಗುಂಪು ಸೇರಿ ಕನಕಪುರ ತಾಲ್ಲೂಕಿನಲ್ಲಿ ಸರ್ಕಾರದ ಮಾರ್ಗಸೂಚಿ ಪಾಲಿಸದೆ, ಸಾಮಾಜಿಕ ಅಂತರ ಪಾಲಿಸದೆ, ಮಾಸ್ಕ್ ಧರಿಸದೆ ಪಾದಯಾತ್ರೆ ಮಾಡಿ ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡಿರುತ್ತಾರೆಂದು ತಹಸೀಲ್ದಾರ್ ವಿಶ್ವನಾಥ್ ಅವರು ಕನಕಪುರ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನಲ್ಲಿ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್, ಸಿದ್ದರಾಮಯ್ಯ, ರವಿ, ಧೃವನಾರಾಯಣ್, ಪ್ರಿಯಾಂಕ್ ಖರ್ಗೆ, ಈಶ್ವರ್ ಖಂಡ್ರೆ, ತನ್ವೀರ್ ಸೇಠ್, ಅನಿಲ್ ಚಿಕ್ಕಮಾಧು, ಮಂಜುನಾಥ್, ಹುಣಸೂರು, ಸಲೀಂ ಅಹಮ್ಮದ್, ಡಾ.ಎಚ್.ಸಿ.ಮಹದೇವಪ್ಪ, ಲಕ್ಷ್ಮಿನಾರಾಯಣ, ಯತೀಂದ್ರ ಸಿದ್ದರಾಮಯ್ಯ, ಸುನಿಲ್ ಘೋಷ್, ನಲಪಾಡ್ ಹ್ಯಾರಿಸ್, ಕೋನಪ್ಪರೆಡ್ಡಿ, ಮರಿಗೌಡ, ಡಾ.ಎಚ್.ಡಿ.ರಂಗನಾಥ್, ಬಿ.ಕೆ.ಸೋಮಶೇಖರ್, ಮುಖ್ಯಮಂತ್ರಿಚಂದ್ರು ಸೇರಿದಂತೆ ಒಟ್ಟು 64 ಮಂದಿ ಹಾಗೂ ಇತರರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.
