ಬೆಂಗಳೂರು, ಜ.13- ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರ ಆರೋಗ್ಯದ ದೃಷ್ಟಿಯಿಂದ ಕಾಂಗ್ರೆಸ್ ನಾಯಕರು ಕಳೆದ ಐದು ದಿನಗಳಿಂದ ಆರಂಭಿಸಿದ್ದ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. ರಾಮನಗರದಿಂದ ಇಂದು ಬೆಳಗ್ಗೆ 8.30ರಿಂದ ಪಾದಯಾತ್ರೆ ಆರಂಭವಾಗಬೇಕಿತ್ತು. ಆದರೆ ಕಾಂಗ್ರೆಸ್ ಹೈಕಮಾಂಡ್‍ನ ಸೂಚನೆ, ಪೊಲೀಸರ ಅಡ್ಡಿ, ನ್ಯಾಯಾಲಯದ ವಿಚಾರಣೆ, ಹಲವು ಅನುಮತಿಗಳು ರದ್ದುಗೊಂಡಿದ್ದರಿಂದ ಪಾದಯಾತ್ರೆ ಹಿಂದೆ ತೆಗೆದುಕೊಳ್ಳಲಾಗಿದೆ.
ಇದಕ್ಕೂ ಮುನ್ನಾ ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ದ್ರವನಾರಾಯಣ್, ಮುಖಂಡರಾದ ರಮೇಶ್ ಕುಮಾರ್, ಕೆ.ಎಚ್.ಮುನಿಯಪ್ಪ, ಬಿ.ಕೆ.ಹರಿಪ್ರಸಾದ್, ಚಲುವರಾಯಸ್ವಾಮಿ ಮತ್ತಿತರ ನೇತೃತ್ವದಲ್ಲಿ ರಾಮನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದೀರ್ಘ ಸಮಾಲೋಚನೆ ನಡೆಯಿತು. ಸಭೆಯಲ್ಲಿ ಪರಿಸ್ಥಿತಿಯ ಬಗ್ಗೆ ಬೇರೆ ಬೇರೆ ಅಭಿಪ್ರಾಯಗಳು ಕೇಳಿ ಬಂದವು. ಆದರೆ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪಾದಯಾತ್ರೆಯನ್ನು ಮೊಟಕುಗೊಳಿಸುವುದು ಸೂಕ್ತ, ಮೂರನೆ ಅಲೆ ತಗ್ಗಿದ ಬಳಿಕ ಮತ್ತೆ ರಾಮನಗರದಿಂದಲೇ ನೀರಿಗಾಗಿ ನಡಿಗೆ ಆರಂಭಿಸಲು ನಿರ್ಧರಿಸಲಾಗಿದೆ.
ಸಭೆಯ ನಿರ್ಧಾರಗಳನ್ನು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು. ಮೇಕೆದಾಟು ಕುಡಿಯುವ ನೀರಿನ ಯೋಜನೆ ಆರಂಭಿಸಲು ಒತ್ತಾಯಿಸಿ ಕಾಂಗ್ರೆಸ್ ವತಿಯಿಂದ ಎಲ್ಲಾ ನಾಯಕರು ಜನವರಿ 9ರಿಂದ ಪಾದಯಾತ್ರೆ ಆರಂಭಿಸಿದ್ದೇವು. ನಮ್ಮ ಪಕ್ಷದ ಮುಖಂಡರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಸಚಿವರು, ಶಾಸಕರು ಸೇರಿ ಎಲ್ಲರೂ ಉತ್ಸಾಹದಿಂದ ಭಾಗವಸಿದ್ದರು. ಎರಡು ತಿಂಗಳ ಹಿಂದೆ ಪಾದಯಾತ್ರೆ ನಡೆಸುವ ನಿರ್ಧಾರವನ್ನು ನಾವು ಕೈಗೊಂಡಾಗ ಕೋವಿಡ್ ಮೂರನೇ ಅಲೆ ಪ್ರಾರಂಭವಾಗಿರಲಿಲ್ಲ.
ಈ ನಡುವೆ ಬೆಳಗಾವಿ ವಿಧಾನ ಮಂಡಲ ಅವೇಶನ ಕೂಡ ನಡೆಯಿತು. ಸಂಗಮದಿಂದ ರಾಮನಗರದವರೆಗೂ ಯಶಸ್ವಿ ಪಾದಯಾತ್ರೆ ನಡೆದಿದೆ. ಇವತ್ತು ರಾಮನಗರದಿಂದ ಆರಂಭವಾಗಿ ಬೆಂಗಳೂರು ನಗರಕ್ಕೆ ಮೈಸೂರು ಬೆಂಗಳೂರು ರಾಷ್ಟ್ರೀಯ ಹೆದ್ಧಾರಿಯಲ್ಲಿ ನಡೆಯಬೇಕಿತ್ತು ಎಂದರು.ಮೂರನೇ ಅಲೆ ವೇಗವಾಗಿ ಹರಡುತ್ತಿದೆ. ನಿನ್ನೆ 15 ಸಾವಿರ ಜನರಿಗೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ. ನಮ್ಮದು ರಾಜಕೀಯ ಪಕ್ಷ ನಮಗೆ ನಮ್ಮದೆ ಆದ ಜವಾಬ್ದಾರಿ ಇದೆ.
ಕೊರೊನಾ ವೇಗವಾಗಿ ಹರಡಲು ಕಾಂಗ್ರೆಸ್ ಕಾರಣ ಅಲ್ಲ. ಬಿಜೆಪಿಯವರೇ ಕಾರಣ. ಮೂರನೆ ಅಲೆ ಶುರುವಾದ ಮೇಲೂ ಮುಖ್ಯಮಂತ್ರಿ ಯಾವ ಸಭೆಯನ್ನು ನಿಲ್ಲಿಸಲಿಲ್ಲ. ಜನವರಿ 6ರಂದು ವಿಧಾನ ಪರಿಷತ್‍ಗೆ ಆಯ್ಕೆಯಾದ ನೂತನ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ಅಂದು ಮುಖ್ಯಮಂತ್ರಿಯಾದಿಯಾಗಿ, ಸಚಿವರು, ವಿಧಾನ ಪರಿಷತ್ ಸಭಾಪತಿ ಸೇರಿ ನಾಲ್ಕೈದು ಸಾವಿರ ಮಂದಿ ಸೇರಿದ್ದರು. ಆಳಂದದಲ್ಲಿ ಸುಭಾಷ್ ಗುತ್ತಿಗೆದಾರರು, ಶಾಸಕರಾದ ರೇಣುಕಾಚಾರ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.
ಗೃಹ ಸಚಿವ ಅರಗಜ್ಞಾನೇಂದ್ರ ಅವರ ಕ್ಷೇತ್ರದಲ್ಲಿ ಜಾತ್ರೆ ಮಾಡಲು ಅವಕಾಶ ನೀಡಲಾಗಿದೆ. ಮೂರನೆ ಅಲೆ ಶುರುವಾದ ಮೇಲೆ ಈ ಎಲ್ಲಾ ಕಾರ್ಯಕ್ರಮಗಳು ನಡೆದಿವೆ. ಆದರೆ ಜನರಿಗಾಗಿ ಹೋರಾಟ ಮಾಡುತ್ತಿದ್ದ ನಮ್ಮ ಮೇಲೆ ಕೇಸು ಹಾಕಿದ್ದಾರೆ. ಸರ್ಕಾರ ನಿಷ್ಪಕ್ಷಪಾತವಾಗಿಲ್ಲ. ಸೊಂಕು ತಡೆಯುವ ಪ್ರಾಮಾಣಿಕ ಪ್ರಯತ್ನ ನಡೆಸಿಲ್ಲ ಎಂದು ಆರೋಪಿಸಿದರು.
ನಮ್ಮ ಪಾದಯಾತ್ರೆ ಮೊಕಟುಗೊಳಿಸುವ ಸಲುವಾಗಿ ದಿನಕ್ಕೊಂದು ಆದೇಶ ನೀಡುತ್ತಿದ್ದಾರೆ. ನಮಗೆ ನೋಟಿಸ್ ನೀಡಿದ್ದಾರೆ. ಇದಕ್ಕೆಲ್ಲಾ ನಾವು ಹೆದರಲ್ಲ, ನಮಗೆ ಜನರ ಹಿತ ಮುಖ್ಯ. ಪಾದಯಾತ್ರೆಯಿಂದ ರಾಜ್ಯದಲ್ಲಿ ಸೋಂಕು ಹೆಚ್ಚಾಗಿಲ್ಲ. ದೇಶದಲ್ಲಿ, ವಿಶ್ವದಲ್ಲೇ ಸೋಂಕು ಹೆಚ್ಚಾಗುತ್ತಿದೆ. ನಮಗೆ ರಾಜ್ಯದ ಜನರ ಆರೋಗ್ಯದ ಬಗ್ಗೆ ಕಾಳಜಿ ಇದೆ. ಅದಕ್ಕಾಗಿ ನಮ್ಮಿಂದ ಸೋಂಕು ಹೆಚ್ಚಾಗಬಾರದು ಎಂಬ ಕಾರಣಕ್ಕೆ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದೇವು. ಸರ್ಕಾರದ ಆದೇಶಗಳಿಗೆ ಅಥವಾ ಕೇಸಿಗೆ ಹೆದರಿಲ್ಲ. ಜನರ ಆರೋಗ್ಯದ ದೃಷ್ಟಿಯಿಂದ, ರೋಗ ಉಲ್ಭಣಕ್ಕೆ ನಾವು ಕಾರಣಕರ್ತರು ಎಂಬ ಭಾವನೆ ಬರಬಾರದು ಎಂಬ ಕಾರಣಕ್ಕೆ ಪಾದಯಾತ್ರೆಯನ್ನು ನಿಲ್ಲಿಸುತ್ತಿದ್ದೇವೆ ಎಂದು ಘೋಷಿಸಿದರು.
ಪಾದಯಾತ್ರೆ ಇನ್ನೆರಡು ದಿನ ಬಿಟ್ಟು ಬೆಂಗಳೂರಿಗೆ ತಲುಪಬೇಕಿತ್ತು. 19ರಂದು ರ್ಯಾಲಿ ಕೊನೆಯಾಗುತ್ತಿತ್ತು, ಕೊನೆಯ ದಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಲಕ್ಷಾಂತರ ಜನ ಸೇರುತ್ತಿದ್ದರು. ಅದರಿಂದ ಸೋಂಕು ಹೆಚ್ಚಾಗಬಾರದು ಎಂಬ ಕಾರಣಕ್ಕೆ ಈ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿದ್ದೇವೆ.
ಕೊರೊನಾ ಅಲೆ ಕಡಿಮೆಯಾಗಿ, ನಿರ್ಬಂಧಗಳು ಸಡಿಲಗೊಂಡ ಮೇಲೆ ಮತ್ತೆ ಇಲ್ಲಿಂದಲೇ ಪಾದಯಾತ್ರೆ ಆರಂಭಿಸುತ್ತೇವೆ. ಕಾರ್ಯಕರ್ತರು ಉತ್ಸಾಹದಿಂದ ಪಾದಯಾತ್ರೆಯಲ್ಲಿ ಭಾಗವಹಿಸಲು ಬಂದಿದ್ದರು, ಅವರು ಉತ್ಸಾಹ ಕಳೆದಕೊಳ್ಳಬಾರದು. ಮುಂದೆ ಇಲ್ಲಿಂದಲೇ ಯಾತ್ರೆ ಆರಂಭವಾಗಲಿದೆ, ನಿಗದಿಯಂತೆ ನ್ಯಾಷನಲ್ ಕಾಲೇಜು ಮೈದಾನದಲ್ಲೇ ಅಂತ್ಯಗೊಳ್ಳಲಿದೆ. ಸದ್ಯಕ್ಕೆ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದರು.
