ಬೆಂಗಳೂರು, ಫೆ.23- ಮೇಕೆದಾಟು ಯೋಜನೆ ಶೀಘ್ರ ಆರಂಭಕ್ಕೆ ಒತ್ತಾಯಿಸಿ ಮರು ಆರಂಭಗೊಳ್ಳುತ್ತಿರುವ ಪಾದಯಾತ್ರೆ ಮಾರ್ಚ್ 3ಕ್ಕೆ ಬೆಂಗಳೂರಿನಲ್ಲಿ ಅಂತ್ಯವಾಗಲಿದೆ. ಫೆ.27ರಂದು ಬೆಳಗ್ಗೆ 9 ಗಂಟೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಧಾನ ಮಂಡಲದ ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್, ಮಾಜಿ ಮುಖ್ಯಮಂತ್ರಿಗಳಾದ ವೀರಪ್ಪ ಮೊಯ್ಲಿ ಸೇರಿದಂತೆ ಅನೇಕ ನಾಯಕರು ಭಾಗವಹಿಸಲಿದ್ದಾರೆ.
ಪಾದಯಾತ್ರೆ ಯಶಸ್ಸಿಗೆ ಪಣ ತೊಟ್ಟಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿನ್ನೆ ಮಂಡ್ಯ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಮುಖಂಡರ ಜೊತೆ ಚರ್ಚೆ ನಡೆಸಿದರು. ಮೊದಲ ದಿನದ ಪಾದಯಾತ್ರೆಯಲ್ಲಿ ಮಂಡ್ಯದಿಂದ 20 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಮಾರನೆ ದಿನ ತುಮಕೂರು ಜಿಲ್ಲೆಯ ಕಾರ್ಯಕರ್ತರು ಪಾದಯಾತ್ರೆಗೆ ಜೊತೆಯಾಗಲಿದ್ದಾರೆ. ಡಿ.ಕೆ.ಶಿವಕುಮಾರ್ ಇಂದು ತುಮಕೂರಿನಲ್ಲಿ ಜಿಲ್ಲಾ ನಾಯಕರ ಜೊತೆ ಸಮಾಲೋಚನೆ ನಡೆಸಿ, ಪಾದಯಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸೂಚನೆ ನೀಡಿದ್ದಾರೆ.
ಈ ಬಾರಿ ರಾಜ್ಯದ ಯಾವುದೇ ಜಿಲ್ಲೆಯಿಂದಲಾದರೂ ಕಾರ್ಯಕರ್ತರು, ಅಭಿಮಾನಿಗಳು, ಮುಖಂಡರು ಪಾದಯಾತ್ರೆಯಲ್ಲಿ ಭಾಗವಹಿಸಬಹುದು ಎಂದು ಸೂಚನೆ ನೀಡಲಾಗಿದೆ. ಈ ಮೊದಲು 10 ದಿನಗಳ ಪಾದಯಾತ್ರೆಯನ್ನು ಸಂಘಟಿಸಲಾಗಿತ್ತು. ಮೊದಲ ಹಂತದಲ್ಲಿ ಜನವರಿ 9ರಿಂದ 12ರವರೆಗೆ ಪಾದಯಾತ್ರೆ ನಡೆದಿತ್ತು. ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದ ಕಾರಣಕ್ಕೆ ಹೈಕೋರ್ಟ್‍ಗೆ ಪಾದಯಾತ್ರೆ ಕುರಿತು ಸಲ್ಲಿಸಲಾದ ತಕರಾರು ಅರ್ಜಿಯ ವಿಚಾರಣೆ ಆರಂಭಿಸಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಾದಯಾತ್ರೆಯನ್ನು ಅರ್ಧಕ್ಕೆ ಕೈ ಬಿಟ್ಟಿತ್ತು.
ಅಂದು ರಾಮನಗರದಲ್ಲಿ ಸ್ಥಗಿತಗೊಳ್ಳಲಾದ ಪಾದಯಾತ್ರೆಯನ್ನು ಎರಡನೇ ಬಾರಿ ಅಲ್ಲಿಂದಲೇ ಆರಂಭಿಸಲಾಗುತ್ತಿದೆ. ಹತ್ತು ದಿನಗಳ ಬದಲಿಗೆ ಪಾದಯಾತ್ರೆ ಅವ 9 ದಿನಕ್ಕೆ ಕಡಿತವಾಗಿದೆ. ಮಾರ್ಚ್ 4ರಂದು ವಿಧಾನಮಂಡಲ ಅವೇಶನ ಆರಂಭವಾಗುವುದರಿಂದ ಹಿಂದಿನ ದಿನವೇ ಪಾದಯಾತ್ರೆಯನ್ನು ಕೊನೆಗೊಳಿಸಲಾಗುತ್ತಿದೆ. ದಿನಕ್ಕೆ 10 ರಿಂದ 15 ಕಿಲೋ ಮೀಟರ್ ನಷ್ಟು ದೂರಕ್ಕೆ ನಾಯಕರು ನಡೆಯಲಿದ್ದಾರೆ. ಅದಕ್ಕಾಗಿ ಈಗಾಗಲೇ ಪೂರ್ವ ತಯಾರಿ ಕೂಡ ನಡೆಸಿದ್ದಾರೆ.
