ಬೆಂಗಳೂರು, ಮಾ.3- ಮೇಕೆದಾಟು ಯೋಜನೆಯ ಶೀಘ್ರ ಅನುಷ್ಠಾನಕ್ಕಾಗಿ ಕಾಂಗ್ರೆಸ್‍ನಿಂದ ಆರಂಭಿಸಲಾದ ಪಾದಯಾತ್ರೆಯ ಕೊನೆ ದಿನವಾದ ಇಂದು ಹೋರಾಟ ತೀವ್ರ ಸ್ವರೂಪಕ್ಕೆ ತಲುಪಿತು. ನಿನ್ನೆ ಸಂಜೆ ನಗರದ ಅರಮನೆ ಮೈದಾನಕ್ಕೆ ತಲುಪಿದ ಪಾದಯಾತ್ರೆ ಇಂದು ಬೆಳಗ್ಗೆ ಅಲ್ಲಿಂದ ಶುರುವಾಗಿ ಕಾವೇರಿ ಥಿಯೇಟರ್ ಮೂಲಕ ಸ್ಯಾಂಕಿಟ್ಯಾಂಕ್, ಮಲ್ಲೇಶ್ವರಂನ 18ನೇ ಕ್ರಾಸ್ ಮೂಲಕ ಮಾರ್ಗೊಸಾ ರಸ್ತೆಯಲ್ಲಿ ಹಾದು ಕೆ.ಸಿ.ಜನರಲ್ ಆಸ್ಪತ್ರೆ, ಶೇಷಾದ್ರಿಪುರಂ ಲಿಂಕ್ ರಸ್ತೆ, ರಾಜೀವ್‍ಗಾಂಧಿ ಪ್ರತಿಮೆ, ಫ್ಲಾಟ್‍ಫಾರಂ ರಸ್ತೆ ಮೂಲಕ ಸಂಗೊಳ್ಳಿ ರಾಯಣ್ಣ ಪ್ರತಿಮೆ ಬಳಿ ತಲುಪಿದೆ.
ಅಲ್ಲಿಂದ ಮೆಜೆಸ್ಟಿಕ್ ಮೂಲಕ ಕಾಟನ್‍ಪೇಟೆ ಮುಖ್ಯರಸ್ತೆ, ಬ್ರಿಯಾಂಡ್ ಸರ್ಕಲ್, ರಾಯಣ್ಣ ಸರ್ಕಲ್, ಚಾಮರಾಜಪೇಟೆಯ ಈದ್ಗಾ ಮೈದಾನದಿಂದ ನ್ಯಾಷನಲ್ ಕಾಲೇಜು ಆಟದ ಮೈದಾನದವರೆಗೂ ನಡೆಯಲಿದೆ. ಸಂಜೆ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಾವಿರಾರು ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿ ಮೇಕೆದಾಟು ಯೋಜನೆಯ ಶೀಘ್ರ ಅನುಷ್ಠಾನಕ್ಕೆ ಒತ್ತಾಯಿಸಲಿದ್ದಾರೆ.
ಪಾದಯಾತ್ರೆ ಯುದ್ದಕ್ಕೂ ಕಾಂಗ್ರೆಸ್‍ನ ಬಾವುಟಗಳು ಮತ್ತು ನಾಯಕರ ಪ್ಲೆಕ್ಸ್, ಬ್ಯಾನರ್‍ಗಳು ರಾರಾಜಿಸಿದ್ದವು. ಸಂಚಾರಿ ಎಲ್‍ಇಡಿ ಡಿಸ್‍ಪ್ಲೇಗಳ ಮೂಲಕ ಆಯಕಟ್ಟಿನ ಕೇಂದ್ರಗಳಲ್ಲಿ ಪಾದಯಾತ್ರೆಯ ನೇರ ದೃಶ್ಯಗಳನ್ನು ಪ್ರಸಾರ ಮಾಡಲಾಯಿತು. ನಾಯಕರು ಅಲ್ಲಲ್ಲಿ ಕಿರು ಸಭೆಗಳನ್ನು ಉದ್ದೇಶಿಸಿ ಮಾತನಾಡಿ, ಪಾದಯಾತ್ರೆಯ ಉದ್ದೇಶಗಳ ಕುರಿತು ಜನರಿಗೆ ಮನವರಿಕೆ ಮಾಡಿಕೊಟ್ಟರು.
ಬಿಸಿಲಿನ ಝಳದಿಂದ ಹೋರಾಟಗಾರರು ಬಸವಳಿಯಬಾರದು ಎಂಬ ಕಾರಣಕ್ಕಾಗಿ ಎಳನೀರು, ಹಣ್ಣಿನ ರಸ ಸೇರಿದಂತೆ ಹಲವು ತಂಪು ಪಾನೀಯಾಗಳನ್ನು ಪೂರೈಸಲಾಗಿತ್ತು. ಪಾದಯಾತ್ರೆಯುದ್ದಕ್ಕೂ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿ ಜನ ಸಾಮಾನ್ಯರು ಪರದಾಡಿದರು.
ಸಮಾರೋಪ ಸಮಾರಂಭದಲ್ಲಿ ಕಾಂಗ್ರೆಸ್ ನಾಯಕರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಸರ್ಕಾರ ಪಾದಯಾತ್ರೆ ಆರಂಭದ ದಿನದಿಂದಲೂ ಮೇಕೆದಾಟು ಯೋಜನೆ ವಿಳಂಬಕ್ಕೆ ಕಾಂಗ್ರೆಸ್ ಕಾರಣ ಎಂದು ಆರೋಪ ಮಾಡುತ್ತಿದೆ.
ಆರಂಭದಲ್ಲಿ ಅನಾಮಧೇಯ ಜಾಹೀರಾತು ನೀಡಲಾಯಿತು. ಅನಂತರ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರ ಹೆಸರಿನಲ್ಲಿ ಜಾಹೀರಾತು ನೀಡಲಾಯಿತು. ಪದೇ ಪದೇ ಜಲಸಂಪನ್ಮೂಲ ಸಚಿವರು ಪತ್ರಿಕಾಗೋಷ್ಠಿ ನಡೆಸಿ ಕಾಂಗ್ರೆಸ್ ಪಾದಯಾತ್ರೆಯನ್ನು ರಾಜಕೀಯ ಪ್ರೇರಿತ ಎಂದು ತಿರುಗೇಟು ನೀಡುವ ಪ್ರಯತ್ನ ಮಾಡಿದರು. ಇದೆಲ್ಲದಕ್ಕೂ ಕಾಂಗ್ರೆಸ್ ನಾಯಕರು ಸಮಾರೋಪ ಸಮಾರಂಭದಲ್ಲಿ ತೀವ್ರ ವಾಗ್ದಾಳಿಯ ಮೂಲಕ ಪ್ರತ್ಯುತ್ತರಿಸಿದ್ದಾರೆ.
ಡಬ್ಬಲ್ ಇಂಜಿನ್ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯದ ಅಭಿವೃದ್ಧಿ ವೇಗವಾಗಲಿದೆ ಎಂದು ಜನರನ್ನು ದಾರಿ ತಪ್ಪಿಸಿ ಮತ ಕೇಳಲಾಯಿತು. ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಈವರೆಗೂ ಮೇಕೆದಾಟು ಯೋಜನೆಯ ಬಗ್ಗೆ ಗಂಭೀರ ಪ್ರಯತ್ನ ಮಾಡಿಲ್ಲ.
ಕೇಂದ್ರ ಜಲ ಆಯೋಗದಲ್ಲೂ ಈ ಬಗ್ಗೆ ಚರ್ಚೆಗಳಾಗಿಲ್ಲ. ಕಾವೇರಿ ನೀರು ಪ್ರಾಧಿಕಾರದ ಸಭೆಯಲ್ಲೂ ವಿಷಯ ಪ್ರಸ್ತಾಪಿಸಲಾಗಿಲ್ಲ. ರಾಜಕೀಯ ಕಾರಣಕ್ಕಾಗಿ ಆರೋಪ ಮಾಡುತ್ತಾ ಜವಾಬ್ದಾರಿಯಿಂದ ನುಣುಚಿಕೊಳ್ಳಲಾಗುತ್ತಿದೆ ಎಂದು ಕಾಂಗ್ರೆಸಿಗರು ಕಿಡಿಕಾರಿದರು.
# ಒಗ್ಗಟ್ಟು ಪ್ರದರ್ಶನ:
ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಪ್ರಬಲ ಪೈಪೋಟಿ ಇದೆ. ಇದರ ಹೊರತಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಆರಂಭಿಸಿದ ಮೇಕೆದಾಟು ಪಾದಯಾತ್ರೆಗೆ ಅಭೂತ ಪೂರ್ವ ಬೆಂಬಲ ವ್ಯಕ್ತವಾಗಿದೆ.
ಪ್ರತಿ ದಿನ ಸಾವಿರಾರು ಜನ ಪಾದಯಾತ್ರೆಯೊಂದಿಗೆ ಹೆಜ್ಜೆ ಹಾಕಿದ್ದಾರೆ. ಪಕ್ಷ ಭೇದ ಮರೆತು ಹಲವಾರು ನಾಯಕರು ಭಾಗವಹಿಸುವುದರ ಜತೆಗೆ ಸಂಘ-ಸಂಸ್ಥೆಗಳು, ಚಿತ್ರರಂಗದವರು ಪಾದಯಾತ್ರೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಂಗ್ರೆಸ್‍ನಲ್ಲಿ ಗುಂಪುಗಾರಿಕೆ ಮರೆತು ಎಲ್ಲರೂ ಒಟ್ಟಾಗಿ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.
ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಕರಾವಳಿ ಹಾಗೂ ಹಳೆ ಮೈಸೂರು ಭಾಗ ಸೇರಿದಂತೆ ಎಲ್ಲಾ ದಿಕ್ಕುಗಳ ನಾಯಕರು ಕಾವೇರಿ ವಿಷಯದಲ್ಲಿ ಒಟ್ಟಾಗಿ ಹೋರಾಟ ಮಾಡಿದ್ದು ತೀವ್ರ ಪರಿಣಾಮ ಬೀರಿದೆ. ಪಕ್ಷದ ಸಂಘಟನಾತ್ಮಕ ದೃಷ್ಟಿಯಿಂದಲೂ ಇದು ಸಂಚಲನ ಮೂಡಿಸಿದೆ. ಮುಂದಿನ ಹಂತದಲ್ಲಿ ಮಹದಾಯಿಗಾಗಿ ಪಾದಯಾತ್ರೆ ನಡೆಸುವ ಕುರಿತು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ.
