ಬೆಂಗಳೂರು,ಮಾ.2-ಪಾದಯಾತ್ರೆಯ ಯಶಸ್ಸನ್ನು ಸಹಿಸಲಾಗದೆ ಬಿಜೆಪಿ ಹಲವು ಹುನ್ನಾರಗಳನ್ನು ನಡೆಸಿದ್ದು, ಅಪಪ್ರಚಾರ ನಡೆಸುತ್ತಿದೆ ಎಂದು ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ. ಬಿಟಿಎಂ ಲೇಔಟ್‍ನಲ್ಲಿಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹಮ್ಮದ್ ಮತ್ತಿತರರು ಸರ್ಕಾರದ ಧೋರಣೆಗಳನ್ನು ಖಂಡಿಸಿದರು.
ಡಿ.ಕೆ.ಶಿವಕುಮಾರ್ ಅವರು, ಪಾದಯಾತ್ರೆಗೆ ರಾಜ್ಯದ ಮೂಲೆ ಮೂಲೆಗಳಿಂದ ಜನರು ಬರುತ್ತಿದ್ದಾರೆ. ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಾಳೆ ಸಮಾರೋಪ ಸಮಾರಂಭಗೊಳ್ಳಲಿದೆ. ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಸರ್ವ ಜನಾಂಗಗಳು, ಎಲ್ಲಾ ಪಕ್ಷಗಳಿಗೂ ಅವಕಾಶ ಮಾಡಿಕೊಟ್ಟಿದ್ದೇವೆ. ಬಹಳಷ್ಟು ಮಂದಿ ಪಕ್ಷಾತೀತವಾಗಿ ಭಾಗವಹಿಸಿದ್ದಾರೆ. ಪಾದಯಾತ್ರೆಯಲ್ಲಿ ಭಾಗವಹಿಸಿದವರು ಇತಿಹಾಸದಲ್ಲಿ ಉಳಿಯುತ್ತಾರೆ ಎಂದರು.
ರಾಮಲಿಂಗಾರೆಡ್ಡಿ ಅವರು, ಮೇಕೆದಾಟು ಯೋಜನೆಗಾಗಿ ನಮ್ಮ ಸರ್ಕಾರ ಯೋಜನೆ ರೂಪಿಸಿ ಅಂಗೀಕಾರ ಪಡೆದುಕೊಂಡಿತ್ತು. ಪರಿಸರ ಇಲಾಖೆಯಿಂದ ಅನುಮತಿ ಪಡೆದು ಕಾಮಗಾರಿ ಆರಂಭಿಸಲು ಡಬಲ್ ಎಂಜಿನ್ ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಇದು ಡಬ್ಬಾ ಎಂಜಿನ್ ಸರ್ಕಾರ. ಬಿಜೆಪಿಯವರದು ಒಲೆಯ ಮುಂದೆ ಉತ್ತರ ಕುಮಾರನ ಪೌರುಷವಿದ್ದಂತೆ. ದೆಹಲಿಗೆ ಹೋಗಿ ಪ್ರಧಾನಿ ಅವರ ಮುಂದೆ ನಿಂತು ಒತ್ತಡ ಹಾಕುವ ಸಾಮಥ್ರ್ಯವಿಲ್ಲ. ಎಲ್ಲರೂ ಪೇಪರ್ ಟೈಗರ್‍ಗಳು. ಸಣ್ಣಪುಟ್ಟದರಲ್ಲೂ ಚಿಲ್ಲರೆ ರಾಜಕೀಯ ಮಾಡುತ್ತಾರೆ ಎಂದು ಕಿಡಿಕಾರಿದರು.
ಸಚಿವರಾದ ಅಶ್ವತ್ಥನಾರಾಯಣ, ಗೋಪಾಲಯ್ಯ, ಸೋಮಣ್ಣ ಅವರ ಹುಟ್ಟುಹಬ್ಬಗಳಿಗೆ ಸಾವಿರಾರು ಪ್ಲೆಕ್ಸ್, ಬ್ಯಾನರ್‍ಗಳನ್ನು ಹಾಕಿದ್ದಾರೆ. ಬೊಮ್ಮನಹಳ್ಳಿ, ಆರ್.ಆರ್.ನಗರದಲ್ಲೂ ಸಾವಿರಾರು ಪ್ಲೆಕ್ಸ್‍ಗಳಿದ್ದವು. ಅವುಗಳನ್ನೆಲ್ಲಾ ಬಿಟ್ಟು ಕಾಂಗ್ರೆಸ್‍ನ ಪ್ಲೆಕ್ಸ್‍ಗಳನ್ನು ತೆರವು ಮಾಡಿದ್ದಾರೆ. ಪ್ಲೆಕ್ಸ್ ಹಾಕುವುದು ತಪ್ಪು ಎಂದಾದರೆ ಆ ನಿಯಮ ಬಿಜೆಪಿಯವರಿಗೂ ಅನ್ವಯವಾಗಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನ ಜನರ ನೀರಿನ ಹಕ್ಕಿಗಾಗಿ ನಾವು ಪಾದಯಾತ್ರೆ ಮಾಡುತ್ತಿದ್ದೇವೆ. ಇದರಿಂದ ಸಂಚಾರ ದಟ್ಟಣೆಯಾಗುತ್ತಿದೆ. ಜನ ಕ್ಷಮಿಸಬೇಕು. ಈವರೆಗೂ ವ್ಯಾಪಕ ಬೆಂಬಲ ನೀಡಿದ್ದಾರೆ. ಇಂದು ಬೆಂಗಳೂರಿನಲ್ಲಿ 18 ಕಿ.ಮೀ ಪಾದಯಾತ್ರೆ ನಡೆಯಲಿದೆ ಎಂದು ಹೇಳಿದರು.
