ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಗೆ ಕೊರೊನಾ ಆತಂಕ

Social Share

ಬೆಂಗಳೂರು, ಜ.2- ಮೇಕೆದಾಟು ಯೋಜನೆ ಶೀಘ್ರ ಅನುಷ್ಠಾನಕ್ಕೆ ಆಗ್ರಹಿಸಿ ಆಯೋಜಿಸಲಾಗಿರುವ ಪಾದಯಾತ್ರೆ ಪೂರ್ವ ಸಿದ್ಧತೆಗಳ ಕುರಿತು ಚರ್ಚಿಸಲು ಕಾಂಗ್ರೆಸ್ ಜನವರಿ 4 ರಂದು ಹಿರಿಯ ನಾಯಕರ ಸಭೆ ನಡೆಸಲಿದೆ. ಪಾದಯಾತ್ರೆ ಹಿನ್ನೆಲೆಯಲ್ಲಿ ವಸತಿ, ಊಟೋಪಚಾರ, ಪ್ರಚಾರ ಹಾಗೂ ಸಾರ್ವಜನಿಕ ಸಭೆಗಳ ಆಯೋಜನೆಗೆ ಪ್ರತ್ಯೇಕ ಸಮಿತಿಗಳನ್ನು ರಚಿಸಲಾಗಿದೆ.
ಆ ಸಮಿತಿಗಳ ಪದಾಧಿಕಾರಿಗಳು ಹಾಗೂ ಹಿರಿಯ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಪಾದಯಾತ್ರೆಯಿಂದ ಉಂಟಾಗಬಹುದಾದ ರಾಜಕೀಯ ಪರಿಣಾಮಗಳ ಕುರಿತು ಬಿಜೆಪಿ ಮತ್ತು ಜೆಡಿಎಸ್‍ನಲ್ಲಿ ಈಗಾಗಲೇ ದುಗುಡ ಆರಂಭವಾಗಿದ್ದು, ಟೀಕೆ, ಟಿಪ್ಪಣಿಗಳು ವ್ಯಾಪಕವಾಗಿ ಕೇಳಿ ಬಂದಿವೆ.
ಕೊರೊನಾ ಹೆಚ್ಚಳವನ್ನೇ ನೆಪ ಮಾಡಿಕೊಂಡು ಲಾಕ್‍ಡೌನ್ ಸೇರಿದಂತೆ ಕಠಿಣ ನಿಯಮಾವಳಿಗಳನ್ನು ಜಾರಿಗೊಳಿಸುವ ಮೂಲಕ ಸರ್ಕಾರ ಪಾದಯಾತ್ರೆಗೆ ಅಡ್ಡಿ ಪಡಿಸುವ ಆತಂಕವೂ ಕಾಂಗ್ರೆಸ್ ಪಾಳೆಯವನ್ನು ಕಾಡುತ್ತಿದೆ. ಪಾದಯಾತ್ರೆ ದಿನಾಂಕ ಘೋಷಿಸಿದ ಕ್ಷಣದಿಂದ ಪಕ್ಷದ ಒಳವಲಯದಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದೆ. ಈವರೆಗೂ ಸುಮಾರು 4 ಸಾವಿರಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಅದರಲ್ಲಿ ಅರ್ಧದಷ್ಟು ಜನ ಭಾಗವಹಿಸಿದ್ದರೂ ಎರಡು ಸಾವಿರಕ್ಕೂ ಹೆಚ್ಚು ಮಂದಿ ನಿತ್ಯದ ಕಾಲ್ನಡಿಗೆ ಜಾಥದಲ್ಲಿ ಪಾಲ್ಗೊಳ್ಳಲಿದ್ದಾರೆ.
ಪ್ರಸ್ತುತ ಸಂದರ್ಭದಲ್ಲಿ ಪಾದಯಾತ್ರೆ ಅಥವಾ ಜನ ಸೇರುವ ಕಾರ್ಯಕ್ರಮಗಳು ಕೋವಿಡ್ ನಿಯಮಾವಳಿಗಳಿಗೆ ವಿರುದ್ಧವಾಗಿವೆ ಎಂಬ ನೆಪದಲ್ಲಿ ಸರ್ಕಾರದಿಂದ ಪ್ರತಿರೋಧ ವ್ಯಕ್ತವಾಗುವ ಆತಂಕವಿದೆ. ಇದಕ್ಕೆ ಪೂರಕವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರು ನಗರದ ಶಾಸಕರು, ಸಚಿವರ ಸಭೆ ನಡೆಸಿ ಪಾದಯಾತ್ರೆಗೆ ಪ್ರತಿತಂತ್ರ ರೂಪಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಪಾದಯಾತ್ರೆ ಆರಂಭಕ್ಕೂ ಮೂರ್ನಾಲ್ಕು ದಿನಗಳ ಮೊದಲು ಕಾಂಗ್ರೆಸ್ ವಿರುದ್ಧ ಸೋಟಕ ಮಾಹಿತಿಯನ್ನು ಬಹಿರಂಗ ಪಡಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ಬಿಜೆಪಿ ಪಾಳೆಯದಲ್ಲಿನ ತಳಮಳದಂತೆ ಜೆಡಿಎಸ್‍ನಲ್ಲೂ ರಾಜಕೀಯ ಕಲರವ ಶುರುವಾಗಿದೆ. ರಾಮನಗರ, ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ ಜಿಲ್ಲೆಗಳಲ್ಲಿ ಪಾದಯಾತ್ರೆ ರಾಜಕೀಯ ಪರಿಣಾಮ ಬೀರಲಿದೆ. ಜೆಡಿಎಸ್‍ನ ರಾಜಕೀಯ ಭದ್ರ ಕೋಟೆಗೆ ಮೇಕೆದಾಟು ಮೂಲಕ ಕಾಂಗ್ರೆಸ್ ಲಗ್ಗೆಯಿಡುತ್ತಿರುವುದರಿಂದ ದಳಪತಿಗಳಿಗೆ ಪಾದಯಾತ್ರೆ ಬಿಸಿತುಪ್ಪವಾಗಿದೆ.
ಪ್ರತಿಪಕ್ಷಗಳ ತಂತ್ರಗಾರಿಕೆಯಿಂದ ಪಾದಯಾತ್ರೆಗೆ ಯಾವುದೇ ಧಕ್ಕೆಯಾಗದಂತೆ ಕಾಪಾಡಿಕೊಳ್ಳಲು ಹಿರಿಯ ನಾಯಕರ ಜೊತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಂಗಳವಾರದ ಸಭೆಯಲ್ಲಿ ಚರ್ಚೆ ನಡೆಸಲಿದ್ದಾರೆ. ನಾಳೆ ಮೈಸೂರಿನಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಜೊತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಲಿದ್ದಾರೆ.
ಹಲವು ಅಡ್ಡಿ ಆತಂಕಗಳನ್ನು ನಿಭಾಯಿಸಿ ಮೇಕೆದಾಟು ಯೋಜನೆ ಯಶಸ್ವಿಯಾದರೆ ಮುಂದಿನ ಹಂತದಲ್ಲಿ ಮಹದಾಯಿ ನದಿಯ ಕಳಸಾ-ಬಂಡೂರಿ ನಾಲಾ ಯೋಜನೆಗೆ ಕಾಂಗ್ರೆಸ್ ಹೋರಾಟ ರೂಪಿಸುವ ಹುಮ್ಮಸ್ಸಿನಲ್ಲಿದೆ. ಮೇಕೆದಾಟು ಹೋರಾಟದಿಂದ ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಬಲಗೊಳ್ಳುವ ಜೊತೆಗೆ. ಸರ್ಕಾರದ ವಿರುದ್ಧ ಜನ ಜಾಗೃತಿ ಮೂಡಿಸಲು ಉತ್ತಮ ವೇದಿಕೆಯಾಗಲಿದೆ ಎಂಬ ವಿಶ್ಲೇಷಣೆಗಳಿವೆ.
ಅದಕ್ಕೆ ತಕ್ಕ ಹಾಗೆ ಪಾದಯಾತ್ರೆಯುದ್ಧಕ್ಕೂ ಅಲ್ಲಲ್ಲಿ ಜನಸಂಪರ್ಕ ಸಭೆಗಳನ್ನು ನಡೆಸಲು, ಸಾರ್ವಜನಿಕ ಸಮಾವೇಶಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಜನವರಿ 9ರಿಂದ ಆರಂಭವಾಗುವ ಪಾದಯಾತ್ರೆ 19ಕ್ಕೆ ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಮಾವೇಶಗೊಳ್ಳಲಿದೆ. ಅಂತಿಮ ದಿನದ ಕಾರ್ಯಕ್ರಮದಲ್ಲಿ 25 ಸಾವಿರ ಜನರನ್ನು ಸೇರಿಸುವ ಗುರಿಯನ್ನು ಕಾಂಗ್ರೆಸ್ ಹೊಂದಿದೆ.

Articles You Might Like

Share This Article