ಬೆಂಗಳೂರು,ಜ.1- ಮೇಕೆದಾಟು ಯೋಜನೆ ಅನುಷ್ಠಾನಕ್ಕಾಗಿ ಕಾಂಗ್ರೆಸ್ನವರು ಅಧಿಕಾರದಲ್ಲಿದ್ದಾಗ ಎಷ್ಟು ಬೇಜಾವಬ್ದಾರಿಯಾಗಿ ನಡೆದುಕೊಂಡಿದ್ದರು ಎಂಬ ಸ್ಪೋಟಕ ಮಾಹಿತಿಯನ್ನು ದಾಖಲೆಗಳ ಸಮೇತ ಬಿಚ್ಚಿಡುತ್ತೇನೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನವರ ಮೇಕೆದಾಟು ಯೋಜನೆ ಅನುಷ್ಠಾನಕ್ಕಾಗಿ ನಡೆಸಲಿರುವ ಪಾದಯಾತ್ರೆ ಪ್ರಾರಂಭವಾಗುವ ಒಂದೆರಡು ದಿನ ಮುನ್ನವೇ ಮಾಧ್ಯಮಗೋಷ್ಠಿ ಕರೆದು ಕಾಂಗ್ರೆಸ್ನವರ ಹೊಣಗೇಡಿತನವನ್ನು ಬಯಲು ಮಾಡುತ್ತೇನೆ. ಅಲ್ಲಿಯ ತನಕ ಮಾಧ್ಯಮದವು ಕಾಯಿರಿ ಎಂದು ಸೂಚ್ಯವಾಗಿ ಹೇಳೀದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅಕಾರದ ಪೈಪೋಟಿಗಾಗಿ ಮೇಕೆದಾಟು ಯೋಜನೆಗೆ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
2013ರಲ್ಲಿ ಕಾಂಗ್ರೆಸ್ನಡಿಗೆ ಕೃಷ್ಣ ಕಡೆಗೆ ಎಂಬ ಪಾದಯಾತ್ರೆ ನಡೆಸಿದರು. ಇದರಿಂದ ಯಾರಿಗೆ ಪ್ರಯೋಜನವಾಯಿತು ಎಂದು ಅವರು ಪ್ರಶ್ನಿಸಿದರು.
ಕೂಡಲ ಸಂಗಮದಲ್ಲಿ ನಾವು ಮುಳುಗಿ ಎದ್ದು ಪಾಪ ಕಳೆಯಲಿ ಎಂದು ಪೂಜೆ ಮಾಡುತ್ತೇವೆ. ಅಂತಹ ಸ್ಥಳದಲ್ಲಿ ಆಣೆ ಮಾಡಿದ ಕಾಂಗ್ರೆಸ್ನವರು ಆ ಯೋಜನೆಗೆ ನಯಾ ಪೈಸಾದಷ್ಟು ಅನುಕೂಲ ಮಾಡಲಿಲ್ಲ ಎಂದು ಕಿಡಿಕಾರಿದರು.
ನಮಗೆ ಅಧಿಕಾರ ಕೊಟ್ಟರೆ 15 ಲಕ್ಷ ಎಕರೆ ಭೂಮಿಯನ್ನು ನೀರಾವರಿಗೆ ಒಳಪಡಿಸುತ್ತೇವೆ ಎಂದು ಈ ಭಾಗದ ಜನತೆಗೆ ಆಶ್ವಾಸನೆ ನೀಡಿದ್ದರು. 7728 ಕೋಟಿ ಖರ್ಚು ಮಾಡಿದ್ದರು. ಜನರಿಗೆ ಮೋಸ ಮಾಡಿ ಅಧಿಕಾರಕ್ಕೆ ಬಂದರೂ ಯಾವುದೇ ರೀತಿಯ ಅನುಕೂಲವನ್ನು ಜನರಿಗೆ ಮಾಡಲಿಲ್ಲ ಎಂದು ವಾಗ್ದಾಳಿ ಮಾಡಿದರು.
ಸಿದ್ದರಾಮಯ್ಯ ಮತ್ತು ಅಂದಿನ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು, ಪೈಪೋಟಿಗೆ ಬಿದ್ದವರಂತೆ ಪಾದಯಾತ್ರೆ ನಡೆಸಿದರು. ಪರಮೇಶ್ವರ್ ಅವರನ್ನು ಹಿಂದಿಕ್ಕಿ ಸಿದ್ದರಾಮಯ್ಯ ಪಾದಯಾತ್ರೆ ಮಾಡಿದರು. ಅಧಿಕಾರಕ್ಕೆ ಬಂದ ಐದು ವರ್ಷದಲ್ಲಿ ಜನತೆಗೆ ವಂಚನೆ ಮಾಡಿದರು ಎಂದು ದೂರಿದರು.
ಅವರು ಅಧಿಕಾರದಲ್ಲಿದ್ದಾಗ ಏನೇನು ಮಾಡಿದರು ಎಂಬುದನ್ನು ನಾನು ದಾಖಲೆಗಳ ಸಮೇತ ಬಿಚ್ಚಿಡುತ್ತೇನೆ. ಕೆಲವೇ ದಿನಗಳಲ್ಲಿ ದಾಖಲೆಗಳ ಸಮೇತ ಪತ್ರಿಕಾ ಗೋಷ್ಠಿ ನಡೆಸುತ್ತೇನೆ. ಅಂದು ಈ ಯೋಜನೆಗೆ ಏನೂ ಮಾಡದವರು ಈಗ ಜನರ ಮುಂದೆ ನಾಟಕ ಮಾಡುತ್ತಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.
ನಾನು ಯಾರ ವಿರುದ್ಧವೂ ವೈಯಕ್ತಿಕ ಟೀಕೆ ಮಾಡುವುದಿಲ್ಲ. ಕಾಂಗ್ರೆಸ್ ಮೇಕೆದಾಟು ಯೋಜನೆಗೆ ಏನೆಲ್ಲ ಮೋಸ ಮಾಡಿದೆ ಎಂಬುದನ್ನು ಜನತೆಯ ಮುಂದಿಡುತ್ತೇನೆ ಎಂದರು. ಸಿದ್ದರಾಮಯ್ಯನವರು ಸಮಾಜವಾದಿ ಪಕ್ಷದ ಹಿನ್ನೆಲೆಯಿಂದ ಬಂದವರು. ಸಿಂಧಗಿ ಉಪಚುನಾವಣೆಯಲ್ಲಿ ನಾನು ಮತ್ತು ಸಂಸದ ರಮೇಶ್ ಜಿಣಜಿಣಗಿ ಹೊಟ್ಟೆಪಾಡಿಗಾಗಿ ಬಿಜೆಪಿಗೆ ಹೋಗಿದ್ದಾರೆ ಎಂದು ಟೀಕಿಸಿದ್ದರು.
ಎಲ್ಲ ಸಮುದಾಯವನ್ನು ಮುನ್ನಡೆಸಿಕೊಂಡು ಹೋಗುವ ನಾಯಕ ಸಿದ್ದರಾಮಯ್ಯ ಎಂದು ನಾನೇ ಹೇಳಿದ್ದೆ. ಆದರೆ ನಮ್ಮ ಸಮುದಾಯದ ಬಗ್ಗೆ ಅವರು ಲಘುವಾಗಿ ಮಾತನಾಡಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಸಮುದಾಯ ತಕ್ಕ ಪಾಠ ಕಲಿಸಲಿದೆ ಎಂದು ಎಚ್ಚರಿಸಿದರು.
ಸಂಪುಟ ಪುನಾರಚನೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, ನಾನು ಎಂದಿಗೂ ಕೂಡ ಅಕಾರದಲ್ಲಿ ಇರಬೇಕೆಂದು ಬಯಸಿದವನಲ್ಲ. ಪಕ್ಷ ಏನೂ ತೀರ್ಮಾನ ಮಾಡುತ್ತದೆಯೋ ಅದಕ್ಕೆ ಬದ್ದನಾಗಿದ್ದೇನೆ. ನಾನು ಒಬ್ಬ ಶಿಸ್ತಿನ ಸಿಪಾಯಿ, ಪಕ್ಷದ ತೀರ್ಮಾನಕ್ಕೆ ತಲೆ ಬಾಗುತ್ತೇನೆ. ಅಕಾರ ಎಂಬುದು ಯಾರೊಬ್ಬರ ಪಿತ್ರಾರ್ಜಿತ ಆಸ್ತಿ ಅಲ್ಲ ಎಂದು ತಮ್ಮ ಎದುರಾಳಿಗೆ ಕಾರಜೋಳ ಚಾಟಿ ಬೀಸಿದರು.
