ಬೆಂಗಳೂರು, ಫೆ.27- ಮೇಕೆದಾಟು ಯೋಜನೆ ಅನುಷ್ಠಾನಗೊಳಿಸುವ ಇಚ್ಛಾಶಕ್ತಿ ಬಿಜೆಪಿ ಸರ್ಕಾರಕ್ಕಿಲ್ಲ. ಇದಕ್ಕಾಗಿ ನಾವು ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಎಐಸಿಸಿ ಮುಖಂಡ ರಣದೀಪ್ಸಿಂಗ್ ಸುರ್ಜೆವಾಲಾ ಹೇಳಿದರು.
ಮೇಕೆದಾಟು ಯೋಜನೆಗಾಗಿ ಆಗ್ರಹಿಸಿ ಕಾಂಗ್ರೆಸ್ ಕೈಗೊಂಡಿರುವ ಎರಡನೆ ಹಂತದ ಪಾದಯಾತ್ರೆಗೆ ರಾಮನಗರದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಕಾವೇರಿ ನಮ್ಮ ಜೀವ. ನಮ್ಮ ಸಂಸ್ಕøತಿ. ನಮ್ಮ ನೀರು ನಮ್ಮ ಹಕ್ಕು. ಇದು ನಮ್ಮ ಅಕಾರ. ಇದಕ್ಕಾಗಿ ನಾವು ಹೋರಾಡುತ್ತಿದ್ದೇವೆ. ಎಲ್ಲ ಜಾತಿ, ವರ್ಗಗಳು ಪಕ್ಷಾತೀತವಾಗಿ ನಮಗೆ ಬೆಂಬಲ ನೀಡಬೇಕು. ಈ ಹೋರಾಟದಲ್ಲಿ ನಾವು ಯಶಸ್ವಿಯಾಗುತ್ತೇವೆ ಎಂದು ಹೇಳಿದರು.
ಇದು ಭಾಷಣ ಮಾಡುವ ದಿನವಲ್ಲ, ಇತಿಹಾಸ ಬರೆಯುವ ದಿನ. ಕಾವೇರಿ ಮಾತ್ರವಲ್ಲ, ಈ ಭೂಮಿ, ನೀರು ಕೂಡ ನಮಗೆ ಉಳಿಯಬೇಕು. ಅದಕ್ಕಾಗಿ ಕಾಂಗ್ರೆಸ್ ಪಾದಯಾತ್ರೆ ಮೂಲಕ ಹೋರಾಟ ಮಾಡುತ್ತಿದೆ. ನಮ್ಮ ಹೋರಾಟವನ್ನು ತಡೆಯಲು ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿದೆ.
ಈ ಸರ್ಕಾರಕ್ಕೆ ನಮ್ಮ ಧ್ವನಿ ಕೇಳಬೇಕು. ಎಲ್ಲರೂ ಒಗ್ಗಟ್ಟಿನ ಮೂಲಕ ಹೋರಾಟ ಮಾಡಿದರೆ ನಮ್ಮ ನೀರು ನಮಗೆ ಸಿಕ್ಕೇ ಸಿಗುತ್ತದೆ ಎಂದು ಸುರ್ಜೆವಾಲಾ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಮೇಕೆದಾಟು ಯೋಜನೆ ಆಗಲೇಬೇಕು.
ಇದೊಂದು ಬ್ಯಾಲೆನ್ಸಿಂಗ್ ರಿಜರ್ವೈವ್ ವಾಟರ್. 67 ಟಿಎಂಸಿ ನೀರು ಇದರಿಂದ ನಮಗೆ ಸಿಗಲಿದೆ. 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ. ಇದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಬೇಕು. ರಾಜ್ಯ ಸರ್ಕಾರ ಯೋಜನೆ ಕೈಗೆತ್ತಿಕೊಳ್ಳಬೇಕು. ಪರಿಸರ ಇಲಾಖೆಯ ಒಪ್ಪಿಗೆಯನ್ನು ಮೊದಲು ಪಡೆಯಬೇಕು.
ಇಲ್ಲವಾದರೆ ರಾಜ್ಯದ ಜನರಿಗೆ ಮೋಸ ಮಾಡಿದಂತೆ. ಯೋಜನೆಗೆ ಆಗ್ರಹಿಸಿ ನಾವು ಹೋರಾಟ ಮಾಡುತ್ತಿದ್ದೇವೆ. ನಮ್ಮ ಪಾದಯಾತ್ರೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಐದು ದಿನಗಳ ಕಾಲ ಪಾದಯಾತ್ರೆ ಮಾಡಿಯೇ ತೀರುತ್ತೇವೆ. ಸರ್ಕಾರಕ್ಕೆ ಇದರ ಬಿಸಿ ತಟ್ಟಬೇಕು ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಇದೊಂದು ಐತಿಹಾಸಿಕ ನಡಿಗೆ. ಕೋವಿಡ್ ಕಾರಣದಿಂದ ಪಾದಯಾತ್ರೆಯನ್ನು ಈ ಹಿಂದೆ ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಇಂದು ಮತ್ತೆ ನಾವು ಪಾದಯಾತ್ರೆಯನ್ನು ಆರಂಭಿಸಿದ್ದೇವೆ. ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ. ಆದರ್ಶವಿಲ್ಲದೆ ಸತ್ತರೂ ಅವಮಾನವಾಗುತ್ತದೆ. ಹಾಗಾಗಿ ಹೋರಾಟವನ್ನು ಮುಂದುವರೆಸಿದ್ದೇವೆ.
ಇದು ನಮ್ಮ ಹೋರಾಟವಲ್ಲ, ಜನರ ಹೋರಾಟ. ಈ ಹೋರಾಟ ಇಲ್ಲಿಗೇ ನಿಲ್ಲುವುದಿಲ್ಲ. ದೆಹಲಿಯ ಪಾರ್ಲಿಮೆಂಟ್ ಮುಂದೆಯೂ ಕೂಡ ಧರಣಿ ಮಾಡುತ್ತೇವೆ. ಈ ಯೋಜನೆಗೆ ನಾವೇ ಗುದ್ದಲಿ ಪೂಜೆ ಮಾಡುತ್ತೇವೆ ಎಂದು ಹೇಳಿದರು.
ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಮೊದಲ ಹಂತದ ಪಾದಯಾತ್ರೆಯ ಜನಬೆಂಬಲ ನೋಡಿ ಸರ್ಕಾರ ಕೋವಿಡ್ ನೆಪ ನೀಡಿ ಪಾದಯಾತ್ರೆಯನ್ನು ನಿಲ್ಲಿಸಿದರು. ಅಂದು ಪ್ರತಿಜ್ಞೆ ಮಾಡಿದಂತೆ ಮತ್ತೆ ಕಾವೇರಿ ಮಾತೆಯ ರಕ್ಷಣೆಗೆ ಹೆಜ್ಜೆ ಇಡುತ್ತಿದ್ದೇವೆ.
ಬೆಂಗಳೂರು ನಗರದಲ್ಲಿ 2050ನೆ ಇಸವಿಗೆ ನೀರಿನ ಹಾಹಾಕಾರ ಶುರುವಾಗುತ್ತದೆ. ಮುಂದಾಲೋಚನೆಯಿಂದ ಮೇಕೆದಾಟು ಯೋಜನೆ ಅವಕಾಶಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ಇದಕ್ಕೆ ತಮಿಳುನಾಡು ಅಡ್ಡಗಾಲು ಹಾಕಿಲ್ಲ. ಆದರೆ, ಬಿಜೆಪಿಯವರು ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಹೇಳಿದರು.
ಸಂಸದ ಡಿ.ಕೆ.ಸುರೇಶ್ ಮಾತನಾಡಿ, ನಮ್ಮ ಅವಯಲ್ಲಿಯೇ ಈ ಯೋಜನೆಗೆ ಡಿಪಿಆರ್ ಆಗಿತ್ತು. ಆದರೂ ಇಲ್ಲಿಯವರೆಗೆ ಕಾರ್ಯಗತ ಮಾಡಿಲ್ಲ. ಡಬ್ಬಲ್ ಎಂಜಿನ್ ಸರ್ಕಾರವಿದ್ದರೂ ಕೂಡ ಈ ಯೋಜನೆ ಜಾರಿಗೆ ಬಂದಿಲ್ಲ. ಕುಡಿಯುವ ನೀರಿನ ಈ ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ನಡೆಸುತ್ತಿದೆ.
ನಮ್ಮ ಪಾದಯಾತ್ರೆಯನ್ನು ಹತ್ತಿಕ್ಕುವ ಕೆಲಸವನ್ನು ಸರ್ಕಾರ ಮಾಡಿದೆ. ಆದರೆ, ನಾವು ಯೋಜನೆ ಜಾರಿಗಾಗಿ ಆಗ್ರಹಿಸಿ ಎರಡನೆ ಹಂತದ ಹೋರಾಟವನ್ನು ಕೈಗೆತ್ತಿಕೊಂಡಿದ್ದೇವೆ. ಐದು ದಿನಗಳ ಕಾಲ ಪಾದಯಾತ್ರೆ ನಡೆಯಲಿದೆ ಎಂದು ಹೇಳಿದರು.
ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ಮಾಜಿ ಸಂಸದ ಧೃವ ನಾರಾಯಣ್, ಮಾಜಿ ಸಚಿವ ಚಲುವರಾಯಸ್ವಾಮಿ, ಶಾಸಕರು, ವಿಧಾನ ಪರಿಷತ್ ಸದಸ್ಯರು, ಕಾಂಗ್ರೆಸ್ ಮುಖಂಡರು ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
