ರಾಮನಗರದಿಂದ 2ನೇ ಹಂತದ ಕಾಂಗ್ರೆಸ್‍ ಪಾದಯಾತ್ರೆ ಆರಂಭ

Social Share

ಬೆಂಗಳೂರು,ಫೆ.27- ನೀರಿಗಾಗಿ ನಮ್ಮ ನಡಿಗೆ ಬೃಹತ್ ಪಾದಯಾತ್ರೆ ಇಂದು ರಾಮನಗರದಿಂದ ಮರುಚಾಲನೆಗೊಂಡಿತು. ಎಐಸಿಸಿ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಅನೇಕ ನಾಯಕರು ಚಾಲನೆ ನೀಡಿದರು.
ಜ.9ರಿಂದ ಸುಮಾರು 10 ದಿನಗಳ ಕಾಲ ನಡೆಯಬೇಕಿದ್ದ ಪಾದಯಾತ್ರೆ ಕೊರೊನಾ ಸೋಂಕು ಹೆಚ್ಚಳದಿಂದಾಗಿ ನಾಲ್ಕು ದಿನಗಳಲ್ಲೇ ಮೊಟಕುಗೊಂಡಿತ್ತು. ಬಳಿಕ ಕೊರೊನಾ ಸೋಂಕಿನ ಪ್ರಕರಣಗಳು ಕಡಿಮೆಯಾಗಿದ್ದು ಈಗ 2ನೇ ಹಂತದಲ್ಲಿ ರಾಮನಗರದಿಂದಲೇ ಪಾದಯಾತ್ರೆಗೆ ಚಾಲನೆ ನೀಡಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ಬೆಳಗ್ಗೆ ರಾಮನಗರದಲ್ಲಿ ಚೌಡೇಶ್ವರಿ ದೇಗುಲದಲ್ಲಿ ಪೂಜೆ ಸಲ್ಲಿಸುವ ಮೂಲಕ ಪಾದಯಾತ್ರೆ ಆರಂಭಿಸಿದರು.
ಬೃಹತ್ ಸಂಖ್ಯೆಯಲ್ಲಿ ಮಹಿಳೆಯರು ಪಾದಯಾತ್ರೆಗೆ ಪೂರ್ಣಕುಂಭ ಸ್ವಾಗತ ನೀಡಿದರು. ದೇವರ ಕುಣಿತ, ಡೊಳ್ಳು ಕುಣಿತ, ಕಂಸಾಳೆ, ಪಟ್ಟದ ಕುಣಿತ ಸೇರಿದಂತೆ ಹಲವು ರೀತಿಯ ಜಾನಪದ ನೃತ್ಯಗಳು ಪಾದಯಾತ್ರೆಯ ರಂಗನ್ನು ಹೆಚ್ಚಿಸಿದವು.ಕನಕಪುರ ವೃತ್ತದ ಬಳಿ ಬೃಹತ್ ವೇದಿಕೆ ನಿರ್ಮಿಸಲಾಗಿದ್ದು ಅಲ್ಲಿ ಕಾಂಗ್ರೆಸ್‍ನ ಪ್ರಮುಖ ನಾಯಕರು, ಶಾಸಕರು, ಸಂಸದರು ಉಪಸ್ಥಿತರಿದ್ದರು, ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಇದಕ್ಕೂ ಮುನ್ನ ರಾಮನಗರದಲ್ಲಿ ಕಾಂಗ್ರೆಸ್ ನಾಯಕರು ಪೂರ್ವಭಾವಿ ಸಮಾಲೋಚನೆ ನಡೆಸಿದರು. ರಣದೀಪ್ ಸಿಂಗ್ ಸುರ್ಜೆವಾಲಾ, ಸಿದ್ದರಾಮಯ್ಯ, ಎಚ್.ಕೆ.ಪಾಟೀಲ್, ಸಲೀಂ ಅಹಮ್ಮದ್, ಈಶ್ವರ್ ಖಂಡ್ರೆ, ಪ್ರಕಾಶ್ ರಾಥೋಡ್, ಕೆ.ಜೆ.ಜಾರ್ಜ್, ನಾಸೀರ್ ಹುಸೇನ್ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು. ಪಾದಯಾತ್ರೆ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿಯೇ ರಾಮನಗರಕ್ಕೆ ತೆರಳಿದ್ದ ಡಿ.ಕೆ.ಶಿವಕುಮಾರ್ ಬಿಜಿಎಸ್ ಮಠದಲ್ಲಿ ವಾಸ್ತವ್ಯ ಹೂಡಿದರು. ಇಂದು ಬೆಳಗ್ಗೆ ಶ್ರೀ ಅನ್ನದಾನಿ ಸ್ವಾಮೀಜಿಗಳ ಆಶೀರ್ವಾದ ಪಡೆದು ಚಟುವಟಿಕೆ ಆರಂಭಿಸಿದರು.
ಈ ಮೊದಲಿನಂತೆ ಪಾದಯಾತ್ರೆಗೆ ಎಲ್ಲ ರೀತಿಯ ಪೂರ್ವ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿತ್ತು. ಪ್ರತಿ ಅರ್ಧ ಕಿಲೋಮೀಟರ್‍ಗೊಮ್ಮೆ ವಿಶ್ರಾಂತಿ ಮತ್ತು ತಂಪುಪಾನೀಯ ಸೇವನೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು.ಅಲ್ಲಲ್ಲಿ ವೈದ್ಯಕೀಯ ತಪಾಸಣೆಯ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಈ ಹಿಂದಿನಂತೆಯೇ ವ್ಯವಸ್ಥಿತವಾಗಿ ಸೌಲಭ್ಯಗಳೊಂದಿಗೆ ಪಾದಯಾತ್ರೆ ಆರಂಭಗೊಂಡಿದೆ.
ಮೇಕೆದಾಟು ಯೋಜನೆಯನ್ನು ರಾಜ್ಯ ಸರ್ಕಾರ ಶೀಘ್ರ ಆರಂಭಿಸಬೇಕು ಎಂಬುದು ಕಾಂಗ್ರೆಸ್ ನಾಯಕರ ಪ್ರಮುಖ ಬೇಡಿಕೆ. ಈ ಮೊದಲು ಸಿದ್ದರಾಮಯ್ಯ ಅವರ ಸರ್ಕಾರ ಯೋಜನೆಗೆ ಪ್ರಸ್ತಾವನೆ ಸಲ್ಲಿಸಿ ಅಂಗೀಕಾರ ಪಡೆದುಕೊಂಡಿದೆ. ಪರಿಸರ ಇಲಾಖೆಯಿಂದ ಅನುಮತಿ ಪಡೆದು ಯೋಜನೆ ಆರಂಭಿಸಬಹುದು. ಡಬಲ್ ಇಂಜಿನ್ ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದೆ ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾವಿರಾರು ಸಂಖ್ಯೆಯಲ್ಲಿ ಜನ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಭಾನುವಾರವಾಗಿದ್ದರಿಂದ ಸಂಚಾರ ದಟ್ಟಣೆಯಿಂದ ಹೆಚ್ಚು ಸಮಸ್ಯೆಯಾಗಲಿಲ್ಲ. ಆದರೆ ಪಾದಯಾತ್ರೆ ಇನ್ನು ಮುಂದುವರೆಯುವುದರಿಂದ ಸರ್ಕಾರಕ್ಕೆ ತಲೆಬಿಸಿಯಾಗಿದೆ. ಮಾ.3ರಂದು ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಪಾದಯಾತ್ರೆ ಸಮಾರೋಪ ನಡೆಯಲಿದೆ. ಅದಕೂ ಮುನ್ನ ಅರಮನೆ ಮೈದಾನದಲ್ಲಿ ಪ್ರತಿಭಟನಾಕಾರರು ವಾಸ್ತವ್ಯ ಹೂಡಲಿದ್ದಾರೆ.

Articles You Might Like

Share This Article