ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಸರ್ಕಾರ ಸ್ಪಂದಿಸಲಿ: ಡಿಕೆಶಿ

Social Share

ಬೆಂಗಳೂರು, ಜ.15- ಮೇಕೆದಾಟು ಬಳಿ ಅಣೆಕಟ್ಟು ನಿರ್ಮಾಣವಾಗಬೇಕೆಂಬುದು ಜನರ ಭಾವನೆಯಾಗಿದ್ದು, ಸರ್ಕಾರ ಅದಕ್ಕೆ ಸ್ಪಂದಿಸಬೇಕು. ಸಾಮಾಜಿಕ ಹೋರಾಟಗಾರರ ಕಷ್ಟಗಳಿಗೆ ಸರ್ಕಾರವೇ ಉತ್ತರ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಗರದಲ್ಲಿಂದು ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾಜಿಕ ಹೋರಾಟಗಾರ್ತಿ ಮೇಘಾ ಪಾಟ್ಕರ್ ಸೇರಿದಂತೆ ಹಲವರ ಆಕ್ಷೇಪಗಳ ಬಗ್ಗೆ ಪ್ರತಿಕ್ರಿಯಿಸಿದರು.
ಜೀವ ಇದ್ದರೆ ಜೀವನ. ಜೀವ ಎಂದರೆ ನೀರು. ಆ ನೀರನ್ನು ಸಂಗ್ರಹಣೆ ಮಾಡಲು ಅಣೆಕಟ್ಟು ನಿರ್ಮಾಣವಾಗಬೇಕು. ಇಲ್ಲಿ ವ್ಯಕ್ತಿಚಿಂತನೆ ಮುಖ್ಯವಲ್ಲ, ಜನರ ಭಾವನೆಗಳು ಮುಖ್ಯ. ಸರ್ಕಾರ ಜನರ ಭಾವನೆಯಂತೆ ಅಣೆಕಟ್ಟು ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಮೇಕೆದಾಟು ಅಣೆಕಟ್ಟು ನಿರ್ಮಾಣದಿಂದ ತಮ್ಮ ಸ್ವಕ್ಷೇತ್ರ ಕನಕಪುರದಲ್ಲಿ ಸಾಕಷ್ಟು ಆಸ್ತಿಗಳು ಮುಳುಗಡೆಯಾಗಲಿವೆ. ರೈತರ ಜಮೀನು ಸ್ವಾೀನವಾಗಲಿದೆ. ನಷ್ಟ ಅನುಭವಿಸುವವರು ನಾವು. ಆದರೆ, ಸಮಗ್ರ ಹಿತದೃಷ್ಟಿಯಿಂದ ಬೆಂಗಳೂರಿಗೆ ನೀರು ತರಬೇಕಾದರೆ ಯೋಜನೆ ಅನಿವಾರ್ಯ. ನಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ತ್ಯಾಗ ಮಾಡಿ ಮೇಕೆದಾಟಿಗೆ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.
ಸಾಮಾಜಿಕ ಕಾರ್ಯಕರ್ತರು ಅಣೆಕಟ್ಟು ಹೊರತಾದ ಮೇಕೆದಾಟಿಗೆ ಪಟ್ಟು ಹಿಡಿದಿದ್ದಾರೆ. ಇದಕ್ಕೆ ಸರ್ಕಾರವೇ ಸ್ಪಷ್ಟನೆ ನೀಡಬೇಕು. ನಾನು ಸರ್ಕಾರ ಅಲ್ಲ, ಬೆಂಗಳೂರಿನಲ್ಲಿ ಕೆರೆಕಟ್ಟೆಗಳನ್ನು ಪುನರುತ್ಥಾನ ಮಾಡಿದರೆ ನೀರಿನ ಸಮಸ್ಯೆ ನೀಗಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಇದಕ್ಕಾಗಿ ಒಂದು ಸಮಿತಿಯನ್ನೇ ರಚನೆ ಮಾಡಲಿ ಎಂದು ಸಲಹೆ ನೀಡಿದರು.
ಸ್ವಯಂಪ್ರೇರಿತ ಪ್ರಕರಣ ದಾಖಲಿಗೆ ಆಗ್ರಹ: ಮೇಕೆದಾಟು ಪಾದಯಾತ್ರೆಯಲ್ಲಿ ಭಾಗವಹಿಸಿದ ನಾಯಕರ ವಿರುದ್ಧ ಮೊದಲ ದಿನ 30, ಎರಡನೆ ದಿನ 41 ಜನರ ಮೇಲೆ ಕೇಸು ದಾಖಲಿಸಿದ್ದಾರೆ. ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಕಠಿಣ ನಿಯಮಾವಳಿಗಳು ಜಾರಿಯಾದ ದಿನವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಮನಗರದಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಿದ್ದರು.
ಆನಂತರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ವಿಧಾನಪರಿಷತ್ ಸದಸ್ಯರ ಪ್ರಮಾನ ವಚನ ಸ್ವೀಕಾರ ಸಮಾರಂಭದಲ್ಲೂ ಹಾಜರಿದ್ದರು. ಇಲ್ಲೆಲ್ಲ ಸಾಮಾಜಿಕ ಅಂತರ ಪಾಲನೆ ಮಾಡಲಾಗಿದೆಯೇ? ಕೋವಿಡ್ ನಿಯಮಗಳನ್ನು ಅನುಸರಿಸಲಾಗಿದೆಯೇ ಎಂದು ಪ್ರಶ್ನಿಸಿದ ಡಿಕೆಶಿ ನಗರ ಪೆÇಲೀಸ್ ಆಯುಕ್ತರಿಗೆ, ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ತಮ್ಮ ಹುದ್ದೆ ಮತ್ತು ಸಮವಸ್ತ್ರದ ಮೇಲೆ ಗೌರವ ಇದ್ದರೆ ಮುಖ್ಯಮಂತ್ರಿ ಸೇರಿದಂತೆ ನಿಯಮ ಉಲ್ಲಂಘನೆ ಮಾಡಿದ ಎಲ್ಲರ ಮೇಲೂ ಪ್ರಕರಣ ದಾಖಲಿಸಲಿ. ಕೇವಲ ಕಾಂಗ್ರೆಸಿಗರ ಮೇಲಷ್ಟೆ ಏಕೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಾದಯಾತ್ರೆ ಸರ್ಕಾರದ ಕಿರುಕುಳ ಹಾಗೂ ಜನರ ಆರೋಗ್ಯದ ದೃಷ್ಟಿಯಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಕೋವಿಡ್ ನಿಯಮಾವಳಿಗಳು ಸಡಿಲಗೊಂಡ ಬಳಿಕ ಮತ್ತೆ ಪಾದಯಾತ್ರೆ ಆರಂಭವಾಗಲಿದೆ. ಯೋಜನೆ ಬಗ್ಗೆ ಪರಿಜ್ಞಾನ ಇಲ್ಲದ ಸಚಿವರುಗಳು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅದಕ್ಕೆಲ್ಲ ಉತ್ತರಿಸುವ ಅಗತ್ಯವಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

Articles You Might Like

Share This Article