ಮೇಕೆದಾಟು ಯೋಜನೆ ಹೆಸರಲ್ಲಿ ರಾಷ್ಟ್ರೀಯ ಪಕ್ಷಗಳು ಆಟ ಆಡುತ್ತಿವೆ : ಎಚ್‍ಡಿಕೆ

ಬೆಂಗಳೂರು, ಮಾ.6-ಒಂದೇ ನಾಣ್ಯದ ಎರಡು ಮುಖಗಳಾದ ಎರಡೂ ರಾಷ್ಟ್ರೀಯ ಪಕ್ಷಗಳು ಈಗ ಮೇಕೆದಾಟು ಇಟ್ಟುಕೊಟ್ಟುಕೊಂಡು ಚುನಾವಣಾ ಆಟ ಶುರು ಮಾಡಿವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಮೇಕೆದಾಟು ಯೋಜನೆ ವಿವಾದವನ್ನು ಕರ್ನಾಟಕ-ತಮಿಳುನಾಡು ಪರಸ್ಪರ ಚರ್ಚೆ ನಡೆಸುವ ಮೂಲಕ ಬಗೆಹರಿಸಿಕೊಳ್ಳುವಂತೆ ಕೇಂದ್ರ ಜಲಸಂಪನ್ಮೂಲ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದ್ದಾರೆ. ಅವರೇ ವಿವಾದ ಎನ್ನುವ ಮೂಲಕ ನಮ್ಮ ಜನರ ಕುಡಿಯುವ ನೀರಿನ ಯೋಜನೆಗೆ ಬಿಕ್ಕಟ್ಟಿನ ಲೇಪನ ಹಚ್ಚಿದ್ದಾರೆ ಎಂದು ಹೇಳಿದ್ದಾರೆ.

ಎರಡೂ ರಾಜ್ಯಗಳು ಕುಳಿತು ಚರ್ಚೆ ಮಾಡಿಕೊಂಡು ಒಮ್ಮತಕ್ಕೆ ಬರಬೇಕು ಎಂದು ಕೇಂದ್ರ ಸಚಿವರೇ ಹೇಳುವ ಮೂಲಕ ಮೇಕೆದಾಟು ಯೋಜನೆಗೆ ಒಕ್ಕೂಟ ವ್ಯವಸ್ಥೆಯ ಆಶಯಕ್ಕೆ ತಕ್ಕಂತೆ ಕಾನೂನಾತ್ಮಕ ಅನುಮತಿ ನೀಡುವ ಹೊಣೆಗಾರಿಕೆಯಿಂದ ಕೇಂದ್ರ ಸರಕಾರ ನುಣುಚಿಕೊಳ್ಳುತ್ತಿದೆ ಎನ್ನುವುದು ನನ್ನ ಸ್ಪಷ್ಟ ಅಭಿಪ್ರಾಯ ಎಂದಿದ್ದಾರೆ.

ಮುಂಗಡ ಪತ್ರದಲ್ಲಿ ಯೋಜನೆಗೆ 1,000 ಕೋಟಿ ರೂ. ಕೊಟ್ಟೆವು ಎಂದು ಬಿಜೆಪಿ ಹಾಗೂ ನಮ್ಮ ಪಾದಯಾತ್ರೆಯಿಂದಲೇ ಹಣ ಘೋಷಿಸಲಾಯಿತು ಎಂದು ಕಾಂಗ್ರೆಸ್ ಕುಣಿಯುತ್ತಿದೆ ಎಂದು ಟೀಕಿಸಿದ್ದಾರೆ.

ವಾಸ್ತವ ಏನು ಎಂಬುದನ್ನು ನಾನು ಬಹಳ ಹಿಂದೆಯೇ ಹೇಳಿದ್ದೆ. ಕೇಂದ್ರದ ಕಾನೂನು ಸುಳಿಯಲ್ಲಿ ಸಿಕ್ಕಿರುವ ಹಾಗೂ ಕೇಂದ್ರದ ಜಲ ಆಯೋಗದಲ್ಲಿ ಕೊಳೆಯುತ್ತಿರುವ ಮೇಕೆದಾಟು ಯೋಜನೆಯು ಪಾದಯಾತ್ರೆಯಿಂದ ಬರುವುದಿಲ್ಲ. ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಿಯೇ ತಂದುಕೊಳ್ಳಬೇಕು ಎಂದಿದ್ದೆ ಎಂದು ಹೇಳಿದ್ದಾರೆ.

ಈಗ ಕೇಂದ್ರ ಸಚಿವರಾದ ಶೇಖಾವತ್ ಅವರು, ಮೇಕೆದಾಟು ಕುಡಿಯುವ ನೀರಿನ ಯೋಜನೆ ಬಗ್ಗೆ ಕರ್ನಾಟಕ ಉಂಟು, ತಮಿಳುನಾಡು ಉಂಟು. ನೀವು ನೀವೇ ಮಾತನಾಡಿಕೊಳ್ಳಿ ಎಂದು ಕೈ ಎತ್ತಿಬಿಟ್ಟಿದ್ದಾರೆ. ಹಾಗಾದರೆ, ಯೋಜನೆಗೆ ಒಪ್ಪಿಗೆ ನೀಡುವಲ್ಲಿ ಕೇಂದ್ರ ಸರ್ಕಾರದ ಪಾತ್ರವೇ ಇಲ್ಲವೇ? ಎಂದು ಪ್ರಶ್ನಿಸಿದರು.

ನಮ್ಮ ಪಾಲಿನ ನೀರನ್ನು ದಕ್ಕಿಸಿಕೊಳ್ಳುವುದು ಮತ್ತು ನಮ್ಮ ಜನರಿಗೆ ಕುಡಿಯುವ ನೀರು ಕೊಡುವ ಮೇಕೆದಾಟು ಯೋಜನೆ ಅನುಷ್ಠಾನ ಮಾಡುವುದು ಕರ್ನಾಟಕದ ಹಕ್ಕು. ಆದರೆ, ಕೇಂದ್ರ ಸಚಿವರು ನೀವೇ ಬಗೆಹರಿಸಿಕೊಳ್ಳಿ ಎಂದು ಹೇಳಿದ ಒಳಮರ್ಮವೇನು? ಕಾವೇರಿ ಬಗ್ಗೆ ಬಿಜೆಪಿ ಹೊಸ ವರಸೆ ಶುರು ಮಾಡಿತೇ ಎನ್ನುವ ಸಂಶಯವಿದೆ ಎಂದಿದ್ದಾರೆ.

ಈ ಬಗ್ಗೆ 1,000 ಕೋಟಿ ಹಣ ಘೋಷಣೆ ಮಾಡಿದೊಡನೆ ಪಾದಯಾತ್ರೆಯಿಂದಲೇ ಆಯಿತು ಎಂದು ಹಿಗ್ಗಿ ಹೀರೆಕಾಯಿ ಆಗಿದ್ದ ಕಾಂಗ್ರೆಸ್ ನಿಲುವೇನು? ಅವರೀಗ ತಮ್ಮ ಮಿತ್ರಪಕ್ಷ ಡಿಎಂಕೆ ಅಕಾರದಲ್ಲಿರುವ ತಮಿಳುನಾಡು ಸರ್ಕಾರದ ಜತೆ ಮಾತುಕತೆ ನಡೆಸಿ ಎಂದು ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕುತ್ತಾರೆಯೇ ಎಂದು ಹೆಚ್‍ಡಿಕೆ ಪ್ರಶ್ನಿಸಿದ್ದಾರೆ.