ಮೈಸೂರು,ಜ.24- ದೇವರಾಣೆ, ನಮ್ಮ ಅಪ್ಪರಾಣೆ ಹೇಳುತ್ತಿದ್ದೇನೆ. ಮೇಕೆದಾಟು ಯೋಜನೆಯನ್ನು ಮಾಡುವುದು ನಾವೇ. ಇದರಲ್ಲಿ ಯಾವುದೇ ಅನುಮಾನಗಳು ಬೇಡ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು. ಮೈಸೂರು ಪ್ರವಾಸದಲ್ಲಿರುವ ಸಚಿವ ಸೋಮಣ್ಣ ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮದೇ ಸುಭದ್ರ ಸರ್ಕಾರಗಳಿವೆ. ರಾಜ್ಯ ಸರ್ಕಾರದಲ್ಲಿ ಯಾವ ಅಭದ್ರತೆಯೂ ಇಲ್ಲ.
ಎಲ್ಲವೂ ಸುಸೂತ್ರವಾಗಿ ಸಾಗುತ್ತಿವೆ. ಅದರ ಬಗ್ಗೆ ಯಾರಿಗೂ ಯೋಚನೆ ಬೇಡ. ಕೆಲವು ಶಾಸಕರು ವೈಯುಕ್ತಿಕವಾಗಿ ಕೂತು ಮಾತನಾಡುವುದಕ್ಕೆ ಬೇರೆ ಬೇರೆ ಅರ್ಥ ಕಲ್ಪಿಸಬೇಡಿ. ಕೆಲವರಿಗೆ ಸಂಜೆಯಾದರೆ ಅಲ್ಲಿ ಇಲ್ಲಿ ಕುಳಿತು ಮಾತನಾಡುವ ಅಭ್ಯಾಸವಿರುತ್ತೆ. ಅದು ಅವರ ವೈಯಕ್ತಿಕ ವಿಚಾರ. ನನಗೆ ಅಂತ ಯಾವ ಅಭ್ಯಾಸಗಳು ಅಂತ ಟ್ರೈನಿಂಗ್ ಇಲ್ಲ ಎಂದು ಅವರು ಹೇಳಿದರು.
ರಾಜ್ಯದಲ್ಲಿ ವಸತಿ ಇಲಾಖೆಯಿಂದ ಮನೆ ಕೊಡುವ ವಿಚಾರಕ್ಕೆ ಪ್ರತಿಕ್ರಿಯಿಸಿ ಅವರು ಮಾಡಿದ ತಪ್ಪು ಸರಿಪಡಿಸಿದ್ದೇವೆ. ಸುಮ್ಮನೆ ಒಂದು ಮನೆ ಕೊಟ್ಟಿಲ್ಲ ಅಂತ ವಿರೋಧ ಪಕ್ಷದವರು ಹೇಳುತ್ತಾರೆ. ಆದರೆ ಮನೆ ಕೊಡಲು ನೀವು ಬಿಟ್ಟಿಲ್ಲ. ನಾನಾಗಿರುವುದಕ್ಕೆ ಅಡೆ ತಡೆ ಬಗೆಹರಿಸಿದ್ದೇನೆ.
ಕೇಂದ್ರದ ಆ್ಯಪ್ ನಲ್ಲಿ ಎಂಟ್ರಿ ಮಾಡಬೇಕಿತ್ತು. ರಾಜ್ಯ ಸರ್ಕಾರ ತಮ್ಮದೇ ಆ್ಯಪ್ ಮಾಡಿ ಫೀಡ್ ಮಾಡಿದ್ದರು. ಇದು ಸಿದ್ದರಾಮಯ್ಯ ಅವರ ಕಾಲದಲ್ಲಿ ಆಗಿದ್ದ ಎಡವಟ್ಟು. ಮಾತು ಮನೆ ಕೆಡಿಸಿತು ಅನ್ನೋ ಮಾತಿನಂತೆ ಸಿದ್ದರಾಮಯ್ಯ ಮಾತನಾಡುತ್ತಾರೆ ಅಷ್ಟೇ. ಅವರಿಗೆ ಸಮರ್ಪಕವಾದ ಮಾಹಿತಿ ಇಲ್ಲ ಎಂದು ಸೋಮಣ್ಣ ತಿಳಿಸಿದರು.
ಸಚಿವ ಸಂಪುಟ ವಿಸ್ತರಣೆ ಹಾಗೂ ಸಿಎಂ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ ಈ ರೀತಿಯ ಯಾವುದೇ ವಿಚಾರ ಇಲ್ಲ. 2023ರ ಚುನಾವಣೆ ಸಹ ಬೊಮ್ಮಾಯಿ ನೇತೃತ್ವದಲ್ಲಿ ನಡೆಯಲಿದೆ. ಈ ಬಗ್ಗೆ ವರಿಷ್ಠರು ಸ್ಪಷ್ಟಪಡಿಸಿದ್ದಾರೆ.
ಕೋವಿಡ್ ಜಾಸ್ತಿ ಆಗಿರುವುದರಿಂದ ಅದಕ್ಕೆ ಮೊದಲ ಆದ್ಯತೆ. ಬಸವರಾಜ ಬೊಮ್ಮಾಯಿ ಸುಸಜ್ಜಿತವಾಗಿ ಕೆಲಸ ಮಾಡುತ್ತಿದ್ದಾರೆ. ಸಿಎಂ 6 ತಿಂಗಳು ಪೂರೈಸಿದ್ದಾರೆ. ಅವರ ನೇತೃತ್ವದಲ್ಲಿ ಮಾಡಿದ ಕೆಲಸವನ್ನು ಹೇಳುತ್ತೇವೆ. ಸಚಿವ ಸಂಪುಟ ವಿಚಾರ ಏನು ಆಗುತ್ತೆ ಅನ್ನೋದಕ್ಕಿಂತ ಕೊರೊನಾ ನಿಯಂತ್ರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
