ಬೆಂಗಳೂರು, ಜ.13- ಮೇಕೆದಾಟು ಯೋಜನೆ ಕೂಡಲೇ ಆರಂಭಿಸಬೇಕೆಂದು ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಮೈಸೂರು ಬ್ಯಾಂಕ್ ವೃತ್ತದ ಬಳಿ ಇಂದು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮೇಕೆದಾಟು ಯೋಜನೆಯನ್ನು ವಿಳಂಬ ಮಾಡದಂತೆ ಸರ್ಕಾರ ಆರಂಭಿಸಬೇಕು. ಈ ಯೋಜನೆಗಾಗಿ ಕನ್ನಡಪರ ಸಂಘಟನೆಗಳು ನಿರಂತರವಾಗಿ ಹೋರಾಟ ಮಾಡುತ್ತ ಬಂದಿವೆ. ಕಾವೇರಿ ಕೊಳ್ಳದಲ್ಲಿ ರಾಜ್ಯ ಕೈಗೊಳ್ಳುವ ನೀರಾವರಿ ಯೋಜನೆ ಸಂಬಂಧ ತಮಿಳುನಾಡು ಪದೇ ಪದೇ ಅಡ್ಡಿಪಡಿಸುತ್ತಲೇ ಇದೆ. ಇದಕ್ಕಾಗಿ ನಾವು ಹೋರಾಟ ಮಾಡುತ್ತ ಸರ್ಕಾರವನ್ನು ಎಚ್ಚರಿಸುತ್ತ ಬಂದಿದ್ದೇವೆ.
ಸುಮಾರು ಮೂರು ದಶಕಗಳಿಂದಲೂ ಮೇಕೆದಾಟಿಗಾಗಿ ಹೋರಾಟ ಮಾಡುತ್ತಿದ್ದೇವೆ. ಮೇಕೆದಾಟಿಗೂ ತಮಿಳುನಾಡಿಗೂ ಯಾವುದೇ ಸಂಬಂಧವಿಲ್ಲದಿದ್ದರೂ ತಮಿಳುನಾಡು ಅನಗತ್ಯ ಹಸ್ತಕ್ಷೇಪ ಮಾಡುತ್ತಿರುವುದು ಖಂಡನೀಯ.
ಈ ಯೋಜನೆ ಜಾರಿ ವಿಷಯ ದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ರಾಜಕೀಯ ಮಾಡುತ್ತಿವೆ. ಇದರಿಂದ ಯಾವುದೇ ಉಪಯೋಗವಿಲ್ಲ. ಕಾಂಗ್ರೆಸ್ ಸರ್ಕಾರವಿದ್ದಾಗ ಏನೂ ಮಾಡಲಿಲ್ಲ. ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗಲೂ ಏನೂ ಮಾಡಲಿಲ್ಲ. ಈಗ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾದರೂ ಈ ಯೋಜನೆ ಬಗ್ಗೆ ಚಕಾರವೆತ್ತಿಲ್ಲ. ಇದು ರಾಜಕೀಯ ಪಕ್ಷಗಳ ನಿರ್ಲಕ್ಷ್ಯ ಧೋರಣೆ ಎಂದರು.
ಈ ಯೋಜನೆಯ ವಿಳಂಬ ಧೋರಣೆ ಖಂಡಿಸಿ ಇದೇ 19ರಂದು ಆನೇಕಲ್ ಹತ್ತಿರ ತಮಿಳುನಾಡು ಗಡಿ ಬಂದ್ ಮಾಡಲಾಗುವುದು ಎಂದು ಹೇಳಿದರು.
