ಮೆಟ್ರೋ 3ನೇ ಹಂತಕ್ಕೆ ಶೀಘ್ರದಲ್ಲೇ ಚಾಲನೆ : ಸಿಎಂ ಭರವಸೆ

Social Share

ಬೆಂಗಳೂರು,ಜು.17- ಮುಂದಿನ ವರ್ಷದಿಂದ ಮೆಟ್ರೋ ರೈಲು 3ನೇ ಹಂತವನ್ನು ಪ್ರಾರಂಭ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೆಂಗಳೂರಿನಿಂದ ಹೊರ ಪಟ್ಟಣಗಳಿಗೆ ಮೆಟ್ರೊ ಮೂರನೇ ಹಂತದಲ್ಲಿ ಸಂಪರ್ಕ ಕಲ್ಪಿಸಲಾಗುತ್ತದೆ ಎಂದರು.

ಸಂಚಾರ ದಟ್ಟಣೆ ನಿವಾರಣೆಗಾಗಿ ಮೆಟ್ರೊ 3ನೇ ಹಂತದ ಯೋಜನೆಯನ್ನು ಪ್ರಾರಂಭಿಸಲಾಗುತ್ತದೆ. ನಗರದ ಮೂಲಭೂತ ಸೌಕರ್ಯಗಳಿಗೆ ಸರ್ಕಾರದಲ್ಲಿ ಅನುದಾನದ ಕೊರತೆ ಮಾಡಿಲ್ಲ. ಬೆಂಗಳೂರಿಗೆ ಅಮೃತ ನಗರೋತ್ಥಾನ ಯೋಜನೆಯಡಿ 6 ಸಾವಿರ ಕೋಟಿ ರೂ. ಅನುದಾನ ನೀಡಲಾಗಿದೆ. ಉಪನಗರ ರೈಲು ಯೋಜನೆಯನ್ನು 15 ಸಾವಿರ ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುವುದು. ಈ ಯೋಜನೆಗೆ ಇತ್ತೀಚೆಗೆ ಪ್ರಧಾನಿ ಮೋದಿ ಅವರು ಚಾಲನೆ ನೀಡಿದ್ದಾರೆ ಎಂದು ಹೇಳಿದರು.

ಮೈಸೂರು ರಸ್ತೆ ಮತ್ತು ತುಮಕೂರು ರಸ್ತೆ ಸಂಪರ್ಕ ಕಲ್ಪಿಸುವ 11 ಕಿ.ಮೀ ಉದ್ದದ ಎಲಿವೇಟರ್ ಕಾರಿಡಾರ್ ಮಾಡಲಾಗುತ್ತಿದೆ. ಕಾವೇರಿನಗರ ವಾರ್ಡ್‍ಗೆ ಪವರ್ ಸ್ಟಾರ್ ಪುನೀರ್ ರಾಜ್‍ಕುಮಾರ್ ಹೆಸರನ್ನು ವಾರ್ಡಿಗೆ ಇಟ್ಟಿರುವುದು ಸಂತೋಷ ತಂದಿದೆ ಎಂದರು.

ಎಲ್ಲ ರಂಗದಲ್ಲೂ ಬೆಂಗಳೂರು ಅಭಿವೃದ್ಧಿಯಾಗುತ್ತಿದೆ. ಹಾಗೆಯೇ ಜನಸಂಖ್ಯೆಯು ಬೆಳೆಯುತ್ತಿದ್ದು, ಮೂಲಸೌಕರ್ಯ ಕಲ್ಪಿಸಬೇಕಾಗಿರುವುದು ಮುಖ್ಯ. ತಾವು ಮುಖ್ಯಮಂತ್ರಿಯಾದ ತಕ್ಷಣ ಬೆಂಗಳೂರು ಅಭಿವೃದ್ಧಿಗೆ 6 ಸಾವಿರ ಕೋಟಿ ರೂ. ಕೊಟ್ಟಿದ್ದೇನೆ. ರಾಜಕಾಲುವೆ ಸುಧಾರಣೆಗೆ 1600 ಕೋಟಿ ಅನುದಾನ ನೀಡಲಾಗಿದೆ ಎಂದರು.

ಬೆಂಗಳೂರು ಅಭಿವೃದ್ಧಿಯಲ್ಲಿ ಶಿಕ್ಷಣ , ಆರೋಗ್ಯ ಅಷ್ಟೇ ಅಲ್ಲ ಕೆರೆ ಅಭಿವೃದ್ಧಿಗೂ ಪಣ ತೊಟ್ಟು ಕೆಲಸ ಮಾಡುತ್ತಿದೆ ಎಂದ ಅವರು, ಸಚಿವ ಗೋಪಾಲಯ್ಯ ಅವರು ಮಹಾಲಕ್ಷ್ಮಿಲೇಔಟ್ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ.ಅವರ ದೇಹ ಎಷ್ಟು ದೊಡ್ಡದಿದೆಯೋ ಅವರ ಹೃದಯವೂ ದೊಡ್ಡದಾಗಿದೆ ಎಂದು ಹೇಳಿದರು.

ಬಡವರ ಪಾಲಿಗೆ ನಿಂತಿರುವ ಹೃದಯವಂತ ಗೋಪಾಲಯ್ಯ ಸಣ್ಣಪುಟ್ಟ ವಿಚಾರಗಳನ್ನು ಅವರು ಗಮನಿಸುತ್ತಾರೆ. ಗೋಪಾಲಯ್ಯ ಅವರಿಗೆ ಸಚಿವ ಮುನಿರತ್ನ ಕೂಡ ಸಾಥ್ ನೀಡುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ಥಳೀಯ ಶಾಸಕ ಹಾಗೂ ಅಬಕಾರಿ ಸಚಿವ ಗೋಪಾಲಯ್ಯ ಮಾತನಾಡಿ, ಜೆಡಿಎಸ್ ಬಿಟ್ಟು ಬಿಜೆಪಿಗೆ ಸೇರಿದ ಬಳಿಕ ನನಗೆ ಮುಖ್ಯಮಂತ್ರಿಗಳು ಕೇಳಿದಷ್ಟು ಅನುದಾನವನ್ನು ಕೊಟ್ಟಿದ್ದಾರೆ. ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರದ ಮತದಾರರು ಹೆಚ್ಚು ಮತಗಳೊಂದಿಗೆ ಚುನಾಯಿಸಿದ್ದಾರೆ ಎಂದರು.

ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಕ್ಷೇತ್ರದ 9 ವಾರ್ಡ್‍ಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಜವಾಬ್ದಾರಿಯನ್ನು ತೆಗೆದುಕೊಂಡಿದ್ದೇನೆ. ಹಾಸನ ಹಾಗೂ ಮಂಡ್ಯ ಜಿಲ್ಲೆಗಳ ಉಸ್ತುವಾರಿ ಹೊಣೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ಅವರ ನಂಬಿಕೆಗೆ ತಕ್ಕಂತೆ ಕೆಲಸ ಮಾಡುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಮತ್ತೆ ತನ್ನನ್ನು ಅತಿಹೆಚ್ಚು ಮತಗಳಿಂದ ಗೆಲ್ಲಿಸಬೇಕೆಂದು ಕೋರಿದರು.

ಸಚಿವ ಮುನಿರತ್ನ ಮಾತನಾಡಿ, ತೋಟಗಾರಿಕೆ ಸಚಿವ ಮುನಿರತ್ನ ಮಾತನಾಡಿ, ಇಂದು 3.84 ಮೀಟರ್ ಉದ್ದದ ಮೇಲ್ಸೇತುವೆ ಶಂಕು ಸ್ಥಾಪನೆ ನೆರವೇರಿಸಲಾಗಿದೆ. ಈ ಕಾಮಗಾರಿ ಮುಂದಿನ ಮಾರ್ಚ್ ಅಂತ್ಯದೊಳಗೆ ಮುಗಿಯಲಿದೆ. ಇದು ಚರಿತ್ರೆಯಲ್ಲಿ ಉಳಿಯುವಂತ ಕೆಲಸ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಸಿಎಂ ಬೊಮ್ಮಾಯಿ ಅವರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ 7 ಕೋಟಿ ರೂ. ವೆಚ್ಚದಲ್ಲಿ ಮಾರಪ್ಪನಪಾಳ್ಯ ವಾರ್ಡ್‍ನ ಅಶೋಕಪುರದಲ್ಲಿ ನಿರ್ಮಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನವನ್ನು ಉದ್ಘಾಟಿಸಿದರು.

ನಾಗಪುರ ವಾರ್ಡ್‍ನ ಡಾ.ರಾಜ್‍ಕುಮಾರ್ ರಸ್ತೆಯ ಮೈಸೂರು ಸ್ಯಾಂಡಲ್ ಸೋಪ್ ಫ್ಯಾಕ್ಟರಿ ವೃತ್ತದಲ್ಲಿ ಅಭಿವೃದ್ಧಿಪಡಿಸಿರುವ ಬಸವಧಾಮ ಉದ್ಯಾನವನ್ನು ಉದ್ಘಾಟಿಸಿದರು. ಈ ಉದ್ಯಾನವನವನ್ನು 480 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.
ನಾಗಪುರ ವಾರ್ಡ್‍ನ ಬೋವಿ ಪಾಳ್ಯದಲ್ಲಿ ನಿರ್ಮಿಸಲಾಗಿರುವ ಮನೆಗಳಿಗೆ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಹಕ್ಕುಪತ್ರ ವಿತರಣೆಗೂ ಮುಖ್ಯಮಂತ್ರಿ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ದೋಬಿಘಾಟ್‍ನಲ್ಲಿ ಬಟ್ಟೆ ಶುದ್ದೀಕರಿಸುವ ವಿದ್ಯುತ್ ಚಾಲಿತ ಘಟಕಕ್ಕೂ ಚಾಲನೆ ನೀಡಲಾಯಿತು.
ಮುಖ್ಯಮಂತ್ರಿಗಳ ನವ ನಗರೋತ್ಥಾನ ಯೋಜನೆಯಡಿ 55 ಕೋಟಿ ರೂ. ವೆಚ್ಚದಲ್ಲಿ ಹೊರವರ್ತುಲ ರಸ್ತೆಯಿಂದ ಪಶ್ಚಿಮ ಕಾರ್ಡ್ ರಸ್ತೆವರೆಗೆ ನಿರ್ಮಿಸಿರುವ ಮೇಲ್ಸೇತುವೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.

ವೃಷಭವತಿ ನಗರ ವಾರ್ಡ್‍ನ ಬಿಇಎಂಎಲ್ ಬಡಾವಣೆಯಲ್ಲಿ 392 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿರುವ ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ ಉದ್ಯಾನವನವನ್ನು ಮುಖ್ಯಮಂತ್ರಿಗಳು ಲೋಕಾರ್ಪಣೆ ಮಾಡಿದರು.
ಸಿದ್ದಗಂಗಾ ಮಠಾೀಶರಾದ ಶ್ರೀ ಸಿದ್ದಲಿಂಗಸ್ವಾಮೀಜಿ, ಆದಿಚುಂಚನಗಿರಿ ವಿಜಯನಗರ ಶಾಖಾ ಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ, ಸಚಿವರಾದ ವಿ.ಸೋಮಣ್ಣ, ಭೈರತಿ ಬಸವರಾಜ್, ಮಾಜಿ ಉಪಮೇಯರ್‍ಗಳಾದ ಹರೀಶ್ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

Articles You Might Like

Share This Article