ಮೆಟ್ರೋ ಮತ್ತು ಬಿಎಂಟಿಸಿಯ 250 ಸಿಬ್ಬಂದಿಗೆ ಕೊರೊನಾ

ಬೆಂಗಳೂರು, ಜ.18- ಮೆಟ್ರೋ ಮತ್ತು ಬಿಎಂಟಿಸಿಯ 250 ಸಿಬ್ಬಂದಿಗಳಿಗೆ ಕೊರೊನಾ ಸೋಂಕು ತಗುಲಿದೆ. ಕಳೆದ ವಾರಕ್ಕೆ ಹೋಲಿಸಿದರೆ ಎರಡೂ ನಿಗಮಗಳಲ್ಲಿ ಸಾಕಷ್ಟು ಸಂಖ್ಯೆಯ ಪಾಸಿಟಿವ್ ಪ್ರಕರಣಗಳು ಕಂಡು ಬರುತ್ತಿವೆ. ಕಳೆದ ಕೆಲ ದಿನಗಳಲ್ಲಿ ಎರಡು ನಿಗಮಗಳಲ್ಲಿ ಒಟ್ಟು 250 ಸಿಬ್ಬಂದಿಗೆ ಪಾಸಿಟಿವ್ ದೃಢಪಟ್ಟಿದೆ.

ಬಿಎಂಟಿಸಿಯಲ್ಲಿ ಕರ್ತವ್ಯ ನಿರ್ವಹಿಸುವ 163 ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ನಮ್ಮ ಮೆಟ್ರೋ ನಿಗಮದ 87 ಸಿಬ್ಬಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.

ಕಳೆದ ವಾರ ಕೇಂದ್ರ ಕಚೇರಿಯ 7 ಸಿಬ್ಬಂದಿಗೆ ಪಾಸಿಟಿವ್ ಬಂದಿತ್ತು. ಹೀಗಾಗಿ ಹೆಚ್ಚುವರಿ 380 ಸಿಬ್ಬಂದಿಗೆ ಕೋವಿಡ್  ಟೆಸ್ಟ್  ನಡೆಸಲಾಗಿತ್ತು. 87 ಜನರಿಗೆ ಕೋವಿಡ್ ಪಾಸಿಟಿವ್ ರಿಪೋರ್ಟ್ ಬಂದಿದೆ. ಪಾಸಿಟಿವ್ ರೇಟ್ ಹೆಚ್ಚಾದ ಹಿನ್ನೆಲೆಯಲ್ಲಿ ಸದ್ಯ ಅರ್ಧದಷ್ಟು ಸಿಬ್ಬಂದಿ ಮಾತ್ರ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ ಎಂದು ಅಕಾರಿಗಳು ಮಾಹಿತಿ ನೀಡಿದ್ದಾರೆ.

ಹೋಂ ಐಸೊಲೇಷನ್, ಸ್ಯಾನಿಟೈಸೇಷನ್: ನಗರ ಸಾರಿಗೆ ಸಂಸ್ಥೆಯ ಡ್ರೈವರ್, ಕಂಡಕ್ಟರ್, ಮೆಕ್ಯಾನಿಕ್, ಸೆಕ್ಯೂರಿಟಿ ಗಾರ್ಡ್, ಅಧಿಕಾರಿಗಳು ಸೇರಿದಂತೆ 30 ಸಾವಿರ ಸಿಬ್ಬಂದಿಗಳಿದ್ದಾರೆ.  ಈ ಪೈಕಿ 163 ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ ರಿಪೋರ್ಟ್ ಬಂದಿದೆ. ಪಾಸಿಟಿವ್ ಆದ ಸಿಬ್ಬಂದಿಗೆ ಹೋಂ ಐಸೊಲೇಷನ್‍ನಲ್ಲಿರಲು ಸೂಚಿಸಲಾಗಿದೆ. ಎಲ್ಲ ಬಸ್, ನಿಲ್ದಾಣಗಳನ್ನು ಸ್ಯಾನಿಟೈಸ್ ಮಾಡಲಾಗಿದೆ.