ಬನ್ನೇರುಘಟ್ಟ ಉದ್ಯಾನವನದವರೆಗೂ ಮೆಟ್ರೋ ರೈಲು ಸಂಪರ್ಕ ಕಲ್ಪಿಸಲು ಮನವಿ

Metro-Link-for-Bannerghatta
ಆನೇಕಲ್, ಜೂ.30-ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಹಾಗೂ ನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುವ ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನದವರೆಗೂ ಮೆಟ್ರೋ ರೈಲು ಸಂಪರ್ಕ ಕಲ್ಪಿಸಲು ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ದಿ ಸಚಿವರಾದ ಜಿ ಪರಮೇಶ್ವರ್ ಅವರಲ್ಲಿ ಪರಿಸರ ಮತ್ತು ಅರಣ್ಯ ಖಾತೆ ಸಚಿವ ಆರ್ .ಶಂಕರ್ ಮನವಿ ಮಾಡಿದ್ದಾರೆ.

ಬನ್ನೇರುಘಟ್ಟ ಗ್ರಾಮಸ್ಥರ ನಿಯೋಗ ಆರ್.ಶಂಕರ್ ಅವರನ್ನು ಭೇಟಿಯಾದ ವೇಳೆ ಮೆಟ್ರೋ ರೈಲು ಕುರಿತು ಪತ್ರ ಬರೆದು ಮನವಿ ಮಾಡಿದ್ದೇನೆ. ಸಂಚಾರ ದಟ್ಟಣೆ ಸಮಸ್ಯೆ ಬಗೆಹರಿಸುವುದು ಅಲ್ಲದೆ ರಸ್ತೆ ಅಭಿವೃದ್ಧಿಗೆ ಸರ್ಕಾರ ಮುಂದಾಗಲಿದೆ ಎಂದು ಅವರು ಹೇಳಿದರು. ತಾವು ಇತ್ತೀಚೆಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಭೇಟಿ ನೀಡಿದ್ದ ವೇಳೆ ಹದಗೆಟ್ಟ ರಸ್ತೆ , ಟ್ರಾಫಿಕ್ ಸಮಸ್ಯೆ ಬಗ್ಗೆ ಖುದ್ದು ಗಮನಕ್ಕೆ ಬಂದಿದ್ದು, ಬನ್ನೇರುಘಟ್ಟ, ಸಂಪಿಗೆ ಹಳ್ಳಿ ಗ್ರಾಮಸ್ಥರು ಬನ್ನೇರುಘಟ್ಟ ವೃತ್ತದಿಂದ ಉದ್ಯಾನವನದ ವರೆಗೆ ಇರುವ ರಸ್ತೆಯನ್ನು ಡಬ್ಬಲ್ ರೋಡ್ ಮಾಡ ಬೇಕು ಹಾಗೆ ನೈಸ್ ರಸ್ತೆವರೆಗೆ ಇರುವ ಮೆಟ್ರೋ ರೈಲು ಸಂಪರ್ಕವನ್ನು ಉದ್ಯಾನವನದ ವರೆಗೆಗೂ ವಿಸ್ತರಿಸಬೇಕೆಂದು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ ಎಂದರು.

ಲೋಕೋಪಯೋಗಿ ಸಚಿವರಾದ ಎಚ್.ಡಿ.ರೇವಣ್ಣ ಅವರಿಗೂ ಒಂದು ಪತ್ರ ಬರೆದು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೋಗುವ ರಸ್ತೆ ಹದಗೆಟ್ಟಿದ್ದು, ಶೀಘ್ರ ದುರಸ್ತಿಗೊಳಿಸುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದರು. ಬಜೆಟ್‍ನಲ್ಲಿ ಪರಿಸರ ರಕ್ಷಣೆಗೆ ಹೆಚ್ಚು ಆದ್ಯತೆ ನೀಡಲು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗಿದೆ ಎಂದು ಅವರು ಹೇಳಿದರು.

Sri Raghav

Admin