ಮೆಟ್ಟೂರು ಜಲಾಶಯ ಭರ್ತಿ

Social Share

ಬೆಂಗಳೂರು,ಜು.18-ತಮಿಳುನಾಡಿನ ಮೆಟ್ಟೂರು ಜಲಾಶಯವು ಭರ್ತಿಯಾಗಿದ್ದು, ಜಲಾಶಯದಿಂದ 95 ಸಾವಿರ ಕ್ಯೂಸೆಕ್‍ಗೂ ಹೆಚ್ಚು ನೀರನ್ನು ಹೊರಬಿಡಲಾಗಿದೆ. ಜಲಾಶಯದಲ್ಲಿ 120.84 ಅಡಿ ನೀರು ಸಂಗ್ರಹವಾಗಿದ್ದು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿದೆ.

ಜಲಾಶಯಕ್ಕೆ 1,24,000 ಕ್ಯೂಸೆಕ್‍ಗೂ ಹೆಚ್ಚು ನೀರು ಹರಿದುಬರುತ್ತಿದೆ. ಹೀಗಾಗಿ ಜಲಾಶಯದಿಂದ 95 ಸಾವಿರಕ್ಕೂ ಹೆಚ್ಚು ನೀರನ್ನು ಹೊರಬಿಡಲಾಗುತ್ತಿದೆ. ಒಳಹರಿವಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿರುವುದರಿಂದ ಒಳಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಿಸುವ ಸಾಧ್ಯತೆಗಳಿವೆ.

ಕಾವೇರಿ ಕೊಳ್ಳದ ಹಾರಂಗಿ, ಹೇಮಾವತಿ, ಕಬಿನಿ ಹಾಗು ಕೃಷ್ಣರಾಜಸಾಗರ ಜಲಾಶಯಗಳು ಭರ್ತಿಯಾಗಿದ್ದು, ಭಾರೀ ಪ್ರಮಾಣದಲ್ಲಿ ಜಲಾಶಯದಿಂದ ನೀರು ಬಿಡಲಾಗಿದೆ. ಹೀಗಾಗಿ ಕಾವೇರಿ ನದಿನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡು ನಡುವಿನ ಸಂಘರ್ಷಕ್ಕೆ ಈ ಬಾರಿ ತೆರೆಬಿದ್ದಂತಾಗಿದೆ.

124.8 ಅಡಿ ಗರಿಷ್ಠ ಸಾಮಥ್ರ್ಯದ ಕೆಆರ್‍ಎಸ್ ಜಲಾಶಯದಲ್ಲಿ 123.4 ಅಡಿಯಷ್ಟು ನೀರು ಸಂಗ್ರಹವಾಗಿದ್ದು, ಜಲಾಶಯಕ್ಕೆ 72 ಸಾವಿರ ಕ್ಯೂಸೆಕ್‍ಗೂ ಹೆಚ್ಚು ನೀರು ಹರಿದುಬರುತ್ತಿದ್ದು, ಜಲಾಶಯದಿಂದ 81 ಸಾವಿರ ಕ್ಯೂಸೆಕ್‍ಗೂ ಹೆಚ್ಚು ನೀರನ್ನು ಹೊರಬಿಡಲಾಗುತ್ತಿದೆ.

ಕಬಿನಿ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಜಲಾಶಯದಿಂದ 30 ಸಾವಿರ ಕ್ಯೂಸೆಕ್‍ಗೂ ಹೆಚ್ಚು ನೀರನ್ನು ಹೊರಬಿಡಲಾಗುತ್ತಿದೆ. ಕಾವೇರಿ ಜಲನಯನ ಭಾಗದಲ್ಲಿ ಮಳೆ ಮುಂದುವರೆದಿದ್ದು, ಹೇಮಾವತಿ, ಕಬಿನಿ, ಕಾವೇರಿ ನದಿಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರೆಯಲಿದೆ.

Articles You Might Like

Share This Article