ನವದೆಹಲಿ,ಫೆ.13- ಮಾವೋವಾದಿಗಳ ಹಿಂಸಾತ್ಮಕ ಕ್ರೌರ್ಯ ಮತ್ತು ದೌರ್ಜನ್ಯಗಳನ್ನು ಖಂಡಿಸಲು ನಾಗರಿಕರು ಸಾಮಾಜಿಕ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯ ಮನವಿ ಮಾಡಿದೆ. ಸಾಮಾಜಿಕ ಮಾಧ್ಯಮಗಳು ಸೇರಿದಂತೆ ಲಭ್ಯವಿರುವ ಯಾವುದೇ ವೇದಿಕೆಯಲ್ಲಿ ಸಿಪಿಐ(ಮಾವೋವಾದಿಗಳು ಮತ್ತು ಎಲ್‍ಡಬ್ಲುಇ) ಗುಂಪುಗಳು ಅಮಾಯಕ ನಾಗರಿಕರ ಮೇಲೆ ನಡೆಸುತ್ತಿರುವ ಹಿಂಸಾತ್ಮಕ ದೌರ್ಜನ್ಯವನ್ನು ಖಂಡಿಸಿ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
ದೇಶ ನಿರ್ಮಾಣ ಪ್ರಕ್ರಿಯೆಗೆ ಮಾವೋವಾದಿಗಳ ಸಿದ್ದಾಂತ ಅಪಾಯ ಉಂಟು ಮಾಡುತ್ತಿದೆ. ಈ ಸಂಬಂಧ ನಾಗರಿಕರು ಎಚ್ಚೆತ್ತುಕೊಂಡು ಸಂವೇದಶೀಲರಾಗಿರಬೇಕು. ಮಾವೋವಾದಿ ದಂಗೆಕೋರರನ್ನು ಬಹುಕಾಲದವರೆಗೆ ಆಂತರಿಕ ಭದ್ರತಾ ಸಮಸ್ಯೆಯಾಗಿ ನೋಡಿರಲಿಲ್ಲ. ಮಾವೋವಾದಿಗಳು ಅನೇಕ ಈಶಾನ್ಯ ದಂಗೆಕೋರ ಗುಂಪುಗಳೊಂದಿಗೆ ಸಂಬಂಧ ಹೊಂದಿದ್ದು, ಆಗಾಗ ಜಮ್ಮುಕಾಶ್ಮೀರ ಭಯೋತ್ಪಾದಕ ಗುಂಪುಗಳೊಂದಿಗೆ ತಮ್ಮ ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ಇದಲ್ಲದೆ ಮಾವೋವಾದಿ ಉಗ್ರರು ಫಿಲಿಫೈನ್ಸ್, ಟರ್ಕಿ ಸೇರಿದಂತೆ ವಿದೇಶಿ ಮಾವೋವಾದಿಗಳ ಸಂಘಟನೆಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂದು ತಿಳಿಸಿರುವ ಗೃಹ ಇಲಾಖೆ, ಈ ನಿಟ್ಟಿನಲ್ಲಿ ಅವರ ವಿರುದ್ಧ ಜಾಗೃತಿ ಮೂಡಿಸಬೇಕಾದ ಅಗತ್ಯವಿದ್ದು, ಸಾಮಾಜಿಕ ಜಾಲತಾಣಗಳ ಬಳಕೆ ಮಾಡಿಕೊಳ್ಳಿ ಎಂದು ಹೇಳಿದೆ.
ಈ ಕುರಿತು ಮಾತನಾಡಿರುವ ಗಡಿಭದ್ರತಾ ಪಡೆಯ ಮಾಜಿ ಮಹಾನಿರ್ದೇಶಕ ಪ್ರಕಾಶ್ ಸಿಂಗ್, ಮಾವೋವಾದಿಗಳ ಹಿಂಸಾಚಾರ ದೇಶದಲ್ಲಿ ಕಡಿಮೆಯಾಗಿದೆ. ಆದರೂ ಈ ನಿಟ್ಟಿನಲ್ಲಿ ಅವರ ವಿರುದ್ಧ ಸಾಮಾಜಿಕ ಮಾಧ್ಯಮಗಳ ಬಳಕೆ ಸಕಾರಾತ್ಮಕ ಫಲಿತಾಂಶ ನೀಡುತ್ತದೆ. ಉಗ್ರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಇದು ಸಹಕಾರಿಯಾಗಿದೆ ಎಂದು ಹೇಳಿದ್ದಾರೆ.
