ನಾಲ್ವರು ಚೋರರ ಸೆರೆ: 76 ದ್ವಿಚಕ್ರ ವಾಹನಗಳ ವಶ

Social Share

ಬೆಂಗಳೂರು,ಜು.22- ಮೈಕೋಲೇಔಟ್ ಉಪವಿಭಾಗದ ಬೊಮ್ಮನಹಳ್ಳಿ ಮತ್ತು ಮೈಕೋಲೇಔಟ್ ಠಾಣೆ ಪೊಲೀಸರು ನಾಲ್ವರು ವಾಹನಚೋರರನ್ನು ಬಂಧಿಸಿ ಒಟ್ಟು 58 ಲಕ್ಷ ಮೌಲ್ಯದ 76 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ವಿವಿಧ ಕಂಪನಿಗಳ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಮೈಕೋಲೇಔಟ್ ಠಾಣೆ ಪೊಲೀಸರು ಬಂಧಿಸಿ 38 ಲಕ್ಷ ರೂ. ಮೌಲ್ಯದ 50 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ.

ಸಯ್ಯದ್ ಸುಹೇಲ್ ಬಂಧಿತ ಆರೋಪಿ. ಈತನ ಬಂಧನದಿಂದ ಬೆಂಗಳೂರುನಗರ ಹಾಗೂ ಇತರ ಕಡೆಗಳಲ್ಲಿ ಕಳ್ಳತನವಾಗಿದ್ದ ಒಟ್ಟು 39 ಪ್ರಕರಣಗಳು ಪತೆಯಾದಂತಾಗಿದೆ. ಮೈಕೋಲೇಔಟ್ ವ್ಯಾಪ್ತಿಯಲ್ಲಿ ರಾಯಲ್ ಎನ್‍ಫೀಲ್ಡ್, ಹೋಂಡ ಆಕ್ಟಿವಾ, ಫ್ಯಾಷನ್ ಪ್ರೊ, ಹೊಂಡಡಿಯೋ, ಬಜಾಜ್ ಪಲ್ಸರ್, ಎನ್‍ಎಸ್-200, ಬಜಾಜ್ 150, ಬಜಾಜ್ 220, ಸುಜಕಿ ಆಕ್ಸೆಸ್, ಹಿರೋಹೊಂಡ, ಸಿ.ಟಿ-100, ಟಿವಿಎಸ್ ವಿಕ್ಟರ್ ಹೀಗೆ ವಿವಿಧ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದನು.

ಆರೋಪಿಯ ಬಂಧನದಿಂದ ಮೈಕೋಲೇಔಟ್ ಠಾಣೆಯ 15, ಜೆಪಿನಗರ 8, ಜಯನಗರ, ಕೋಣನಕುಂಟೆ ತಲಾ ಒಂದು, ಪುಟ್ಟೇನಹಳ್ಳಿ 4, ಸುಬ್ರಹ್ಮಣ್ಯಪುರ 2, ಬನಶಂಕರಿ 2, ತಲ್ಲಘಟ್ಟಪುರ, ಮಾರತಹಳ್ಳಿ, ಸಿ.ಕೆ. ಅಚ್ಚುಕಟ್ಟು, ಕುಮಾರಸ್ವಾಮಿಲೇಔಟ್, ಅತ್ತಿಬೆಲೆ ಹಾಗೂ ಹರಿಹರ ಪೊಲೀಸ್ ಠಾಣೆಯ ತಲಾ ಒಂದು ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ.

ಉಳಿದ 11 ದ್ವಿಚಕ್ರ ವಾಹನಗಳು ಯಾವ ಸ್ಥಳದಿಂದ ಕಳ್ಳತನವಾಗಿದೆ, ಯಾವಾಗ ಕಳ್ಳತನವಾಗಿವೆ ಎಂಬುದರ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಬೊಮ್ಮನಹಳ್ಳಿ: ಬೊಮ್ಮನಹಳ್ಳಿ ಠಾಣೆ ಪೊಲೀಸರು ಹೊಂಡಾ ಡಿಯೋ, ಹೊಂಡಾ ಆಕ್ಟಿವಾ, ಹೀರೋಮೆಸ್ಟ್ರೊ, ಯಮಹ ಆರ್ 15 ಹೀಗೆ ವಿವಿಧ ಕಂಪನಿಗಳ ದ್ವಿಚಕ್ರವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ 20 ಲಕ್ಷ ಮೌಲ್ಯದ ಒಟ್ಟು 26 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿ ದ್ದಾರೆ. ವಲ್ಲರಸು, ನಡುಚಲನ್ ಮತ್ತು ತಿರುಪತಿ ಬಂಧಿತ ಆರೋಪಿಗಳು.

ಆರೋಪಿಗಳ ಬಂಧನದಿಂದ ನಗರ ಹಾಗೂ ಇತರ ಕಡೆಗಳಲ್ಲಿ ಕಳ್ಳತನವಾಗಿದ್ದ ಒಟ್ಟು 14 ಪ್ರಕರಣಗಳು ಪತ್ತೆಯಾದಂತಾಗಿದೆ. ಬೊಮ್ಮನಹಳ್ಳಿ ಠಾಣೆಯ 2 ಪ್ರಕರಣ, ಮೈಕೋಲೇಔಟ್ 5, ಹುಳಿಮಾವು 3 ಹಾಗೂ ಪುಟ್ಟೇನಹಳ್ಳಿ, ಮಡಿವಾಳ ಹಾಗೂ ಅತ್ತಿಬೆಲೆ ಪೊಲೀಸ್ ಠಾಣೆಯ ತಲಾ ಒಂದು ದ್ವಿಚಕ್ರವಾಹನ ಕಳವು ಪ್ರಕರಣಗಳು ಪತ್ತೆಯಾದಂತಾಗಿದೆ.

ಉಳಿದ 12 ದ್ವಿಚಕ್ರ ವಾಹನಗಳು ಯಾವ ಸ್ಥಳಗಳಿಂದ ಯಾವಾಗ ಕಳ್ಳತನವಾಗಿವೆ ಎಂಬುದರ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಆಗ್ನೇಯ ವಿಭಾಗದ ಉಪಪೊಲೀಸ್ ಆಯುಕ್ತ ಸಿ.ಕೆ.ಬಾಬ ಮತ್ತು ಮೈಕೋಲೇಔಟ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಕರಿಬಸನಗೌಡ ಅವರ ಮಾರ್ಗದರ್ಶನದಲ್ಲಿ ಇನ್‍ಸ್ಪೆಕ್ಟರ್ ಪ್ರಶಾಂತ್ ಹಾಗೂ ಮೈಕೋಲೇಔಟ್ ಠಾಣೆ ಇನ್‍ಸ್ಪೆಕ್ಟರ್ ಆರ್.ಎಸ್.ಚೌಧರಿ ಅವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ಕೈಗೊಂಡಿತ್ತು. ಈ ಉತ್ತಮ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ಹಾಗೂ ಅಪರ ಪೊಲೀಸ್ ಆಯುಕ್ತರು ಪ್ರಶಂಸಿಸಿದ್ದಾರೆ.

Articles You Might Like

Share This Article