ಬೆಂಗಳೂರು,ಮಾ.1- ಮೈಕ್ರೋಸಾಫ್ಟ್ ಸಂಸ್ಥೆಯ ಮುಖ್ಯಸ್ಥ ಸತ್ಯ ನಾದೆಲ್ಲಾ ಅವರ ಪುತ್ರ ಝೈನ್ ನಾದೆಲ್ಲಾ ಕೊನೆಯುಸಿರು ಎಳೆದಿದ್ದಾರೆ. ಸತ್ಯ ನಾದೆಲ್ಲಾ ಹಾಗೂ ಅನು ದಂಪತಿ ಪುತ್ರನಾಗಿದ್ದ ಝೈನ್ ನಾದೆಲ್ಲಾ ಹುಟ್ಟಿನಿಂದಲೆ ಮಿದುಳು ನಿಷ್ಕ್ರೀಯದಿಂದ ಬಳಲುತ್ತಿದ್ದರು.
ಇಂದು ಬೆಳಿಗ್ಗೆ ಪುತ್ರ ಝೈನ್ ಮೃತರಾಗಿದ್ದಾರೆ ಎಂದು ಸತ್ಯ ನಾದೆಲ್ಲಾ ತಮ್ಮ ಸಂಸ್ಥೆಯ ಉದ್ಯೋಗಿಗಳಿಗೆ ಹಾಗು ಸಹದ್ಯೋಗಿಗಳಿಗೆ ಈ ಮೇಲ್ ಮಾಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಮೈಕ್ರೋಸಾಫ್ಟ್ ಸಂಸ್ಥೆಯ ಸಿಬ್ಬಂದಿಗಳು ಮೃತ ಝೈನ್‍ಗೆ ಶ್ರದ್ದಾಂಜಲಿ ಸಲ್ಲಿಸಿದ್ದಾರೆ.
ಕಳೆದ 2014 ರಲ್ಲಿ ಮೈಕ್ರೋಸಾಫ್ಟ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ದಿನದಿಂದಲೂ ನಾದೆಲ್ಲಾ ಅವರು ವಿಕಲಚೇತನರು ಬಳಸುವ ಉತ್ಪನ್ನಗಳ ಉತ್ಪಾದನೆಗೆ ಹೆಚ್ಚು ಆದ್ಯತೆ ನೀಡಿದ್ದರು.
ಕಳೆದ ಒಂದು ವರ್ಷದಿಂದ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಝೈನ್ ಅವರು ಸಂಗೀತ ಕ್ಷೇತ್ರದತ್ತ ಆಕರ್ಷಣೆಯಾಗಿದ್ದರು. ತಮ್ಮ ಸಂಗೀತದಿಂದ ಆಸ್ಪತ್ರೆ ಸಿಬ್ಬಂದಿಗಳಿಗೆ ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದ ಅವರು ಇಂದು ಇಹಲೋಕ ತ್ಯಜಿಸಿರುವುದು ನೋವು ತರಿಸಿದೆ ಎಂದು ಪೆಡಿಯಾಟ್ರಿಕ್ ನ್ಯೂರೋಸೈನ್ಸ್ ಆಸ್ಪತ್ರೆಯ ಜೆಫ್ ಸ್ಪೇರಿಂಗ್ ಸ್ಮರಿಸಿಕೊಂಡಿದ್ದಾರೆ.
