ಬೆಂಗಳೂರು, ಮಾ.4- ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಮೌಲ್ಯವರ್ಧನೆಗೆ ಉತ್ತೇಜಿಸಲು, ಸಬರರಾಜು ಸರಪಳಿಯನ್ನು ಸದೃಢಗೊಳಿಸಲು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಿನಿ ಆಹಾರ ಪಾರ್ಕ್‍ಗಳನ್ನು ಹಂತಹಂತವಾಗಿ ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗುತ್ತದೆ.
ಕಲ್ಬುರ್ಗಿ ಮತ್ತು ಯಾದಗಿರಿಯ ಜಿಲ್ಲೆಯಲ್ಲಿ ಬೆಳೆಯುವ ತೊಗರಿ ಬೆಳೆಯನ್ನು ಭೀಮಾ ಪಲ್ಸ್ ಬ್ರಾಂಡ್‍ನಡಿಯಲ್ಲಿ ಮಾರಾಟ ಮಾಡಲು ಉದ್ದೇಶಿಸಲಾಗಿದೆ.ಮುಖ್ಯಮಂತ್ರಿ ಇಂದು ಮಂಡಿಸಿದ 2022-23ನೆ ಆಯವ್ಯಯದಲ್ಲಿ ಈ ಪ್ರಸ್ತಾಪ ಮಾಡಿದ್ದು , ನೈಸರ್ಗಿಕ ಕೃಷಿ ಉತ್ತೇಜನಕ್ಕಾಗಿ ಎಲ್ಲಾ ಕೃಷಿ ಮತ್ತು ತೋಟಗಾರಿಕೆ ವಿವಿಗಳ ಮುಖಾಂತರ ಸಾವಿರ ಎಕರೆ ಪ್ರದೇಶದಲ್ಲಿ ಸಾರಜನಕ ಸ್ಥಿರೀಕರಣ, ಜೈವಿಕ ವಿಶ್ಲೇಷಣೆ ಅಧ್ಯಯನಗಳನ್ನು ಕೈಗೊಂಡು ರೈತ ಹೊಲಗಳಿಗೆ ವಿಸ್ತರಿಸಲಾಗುವುದು.
ಒಟ್ಟಾರೆ 2 ಲಕ್ಷ ಹೆಕ್ಟೇರ್ ಪ್ರದೇಶವನ್ನು ಸಾವಯವ ಕೃಷಿಯಡಿ ತರಲಾಗಿದ್ದು , ರಾಷ್ಟ್ರದಲ್ಲಿಯೇ ಸಾವಯವ ಉತ್ಪಾದನೆಯಲ್ಲಿ ನಮ್ಮ ರಾಜ್ಯ3ನೆ ಸ್ಥಾನದಲ್ಲಿರುತ್ತದೆ ಎಂದು ಪ್ರಕಟಿಸಿದ್ದಾರೆ.642 ಕೋಟಿ ರೂ. ವೆಚ್ಚದಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ -ಜಲಾನಯನ ಅಭಿವೃದ್ಧಿ ಘಟಕ-2ನ್ನು ಜಾರಿಗೊಳಿಸಲಾಗುವುದು.
ಬಳ್ಳಾರಿ ಜಿಲ್ಲೆಯ ಹಗರಿಯಲ್ಲಿ ಹೊಸ ಕೃಷಿ ಕಾಲೇಜನ್ನು ಡಿಎಂಎಫ್ ಮತ್ತು ಕೆಕೆಆರ್‍ಡಿಬಿ ಅನುದಾನಗಳನ್ನು ಸಂಯೋಜಿಸಿ ಸ್ಥಾಪಿಸಲಾಗುವುದು.ಅಥಣಿ ತಾಲೂಕಿನಲ್ಲಿ ಹೊಸ ಕೃಷಿ ಕಾಲೇಜನ್ನು ಸ್ಥಾಪಿಸುವ ಪ್ರಸ್ತಾಪ ಮಾಡಲಾಗಿದೆ.
ಧಾರವಾಡ ಕೃಷಿ ವಿವಿಯಲ್ಲಿ ಡಾ.ಎಸ್.ವಿ. ಪಾಟೀಲ್ ಕೃಷಿ ಸಂಶೋಧನೆ ತರಬೇತಿ ಹಾಗೂ ರೈತರ ಶ್ರೇಯೋಭಿವೃದ್ಧಿ ಪೀಠ ಸ್ಥಾಪಿಸಲಾಗುವುದು. ರೈತ ಮಹಿಳೆಯರನ್ನು ಕೃಷಿಯತ್ತ ಆಕರ್ಷಿಸಲು ಪ್ರತ್ಯೇಕವಾಗಿ ಕೃಷಿ ಪ್ರಶಸ್ತಿ ಮತ್ತು ಕೃಷಿ ಪಂಡಿತ ಪ್ರಶಸ್ತಿಯನ್ನು ನೀಡುವ ಪ್ರಸ್ತಾಪಿಸಲಾಗಿದೆ.
