ಬೆಂಗಳೂರಿನತ್ತ ದೌಡಾಯಿಸಿದ ನೂತನ ಸಚಿವರು, ಇಂದು ಸಂಜೆಯೇ ಖಾತೆ ಹಂಚಿಕೆ..?

ಬೆಂಗಳೂರು,ಜ.18- ಪ್ರಮಾಣ ವಚನ ಸ್ವೀಕರಿಸಿರುವ 7 ನೂತನ ಸಚಿವರಿಗೆ ಇಂದು ಸಂಜೆಯೇ ಖಾತೆ ಹಂಚಿಕೆ ಮಾಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತೀರ್ಮಾನಿಸಿದ್ದಾರೆ. ಹೀಗಾಗಿ ನೂತನ ಸಚಿವ ಉಮೇಶ್ ಕತ್ತಿ ಬೆಂಗಳೂರಿಗೆ ದೌಡಾಯಿಸಿದ್ದಾರೆ. ಇಂಧನ ಇಲ್ಲವೇ ಇತರ ಪ್ರಭಾವಿ ಖಾತೆ ಮೇಲೆ ಉಮೇಶ್ ಕತ್ತಿ ಕಣ್ಣಿಟ್ಟಿದ್ದಾರೆ. ಹಾಗಾಗಿ ಸಿಎಂ ಭೇಟಿಯಾಗಿ ಪ್ರಭಾವಿ ಖಾತೆ ನೀಡುವಂತೆ ಪಟ್ಟು ಹಿಡಿದಿದ್ದಾರೆ.

ಈಗಾಗಲೇ ಜಿಲ್ಲೆಯಲ್ಲಿ ನಾಲ್ವರು ಸಚಿವರಿದ್ದಾರೆ. ಲಕ್ಷ್ಮಣ ಸವದಿ ಅವರಿಗೆ ಡಿಸಿಎಂ ಜೊತೆಗೆ ಸಾರಿಗೆ ಖಾತೆ ನೀಡಲಾಗಿದೆ. ರಮೇಶ್ ಜಾರಕಿಹೊಳಿ ಅವರಿಗೆ ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಖಾತೆ ಹಂಚಿಕೆ ಮಾಡಲಾಗಿದೆ.  ಶಶಿಕಲಾ ಜೊಲ್ಲೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಮತ್ತು ಶ್ರೀ ಮಂತ ಪಾಟೀಲ ಅವರಿಗೆ ಜವಳಿ ಖಾತೆ ನೀಡಲಾಗಿದೆ.

ಹೀಗಾಗಿ ಹಿರಿಯ ರಾಜಕಾರಣಿ ಆಗಿರುವ ಉಮೇಶ್ ಕತ್ತಿ ಅವರು ತಮಗೆ ಪ್ರಭಾವಿ ಖಾತೆ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ. ಜ.13 ರಂದು ಸಚಿವ ಸಂಪುಟ ವಿಸ್ತರಣೆ ಮಾಡಿದ್ದ ಮುಖ್ಯಮಂತ್ರಿ .ಯಡಿಯೂರಪ್ಪ ಖಾತೆಗಳ ಹಂಚಿಕೆಗೆ ಸ್ವಲ್ಪ ಸಮಯ ತೆಗೆದುಕೊಂಡಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಎರಡು ದಿನಗಳ ರಾಜ್ಯ ಪ್ರವಾಸದ ಹಿನ್ನೆಲೆಯಲ್ಲಿ ಅನಗತ್ಯವಾಗಿ ಖಾತೆಗಳ ಹಂಚಿಕೆ ವಿವಾದ ಮೈಮೇಲೆ ಎಳೆದುಕೊಳ್ಳುವುದು ಬೇಡ ಎಂಬ ಕಾರಣಕ್ಕೆ ಖಾತೆಗಳ ಹಂಚಿಕೆ ಮಾಡದೇ ಕೇವಲ ವಿಧಾನಸೌಧದಲ್ಲಿ ಕೊಠಡಿಗಳ ಹಂಚಿಕೆ ಮಾಡಿದ್ದರು.

ಇದೀಗ ಅಮಿತ್ ಶಾ ರಾಜ್ಯ ಪ್ರವಾಸ ಮುಗಿಸಿ ನಿರ್ಗಮಿಸಿದ್ದು, ಇಂದು ನೂತನ ಸಚಿವರಿಗೆ ಖಾತೆಗಳ ಹಂಚಿಕೆ ಮಾಡಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಬಳಿ ಇಟ್ಟುಕೊಂಡಿರುವ ಹೆಚ್ಚುವರಿ ಖಾತೆ ಮತ್ತು ಬೇರೆ ಸಚಿವರ ಬಳಿ ಇರುವ ಹೆಚ್ಚವರಿ ಖಾತೆಗಳನ್ನು ಹೊಸ ಸಚಿವರಿಗೆ ನೀಡುವ ಸಾಧ್ಯತೆಯಿದೆ. ಕೆಲವು ಸಚಿವರು ಒಂದಕ್ಕಿಂತ ಹೆಚ್ಚು ಖಾತೆ ಹೊಂದಿದ್ದಾರೆ, ಅವರ ಬಳಿಯಿರುವ ಖಾತೆಯನ್ನು ನೂತನ ಸಚಿವರಿಗೆ ಹಂಚಿಕೆ ಮಾಡಲಾಗುತ್ತದೆ ಎಂದು ಹಿರಿಯ ಸಚಿವರೊಬ್ಬರು ತಿಳಿಸಿದ್ದಾರೆ.

ಯಡಿಯೂರಪ್ಪ ಬಳಿ, ಹಣಕಾಸು, ಇಂಧನ, ಬೆಂಗಳೂರು ನಗರಾಭಿವೃದ್ಧಿ, ಸೇರಿದಂತೆ ಹಲವು ಖಾತೆಗಳಿವೆ, ಹಣಕಾಸು ಮತ್ತು ಬೆಂಗಳೂರು ಅಭಿವೃದ್ಧಿಯನ್ನು ಸಿಎಂ ತಮ್ಮ ಬಳಿಯೇ ಉಳಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.  ಮುಖ್ಯಮಂತ್ರಿ ಬಳಿ ಇರುವ ಖಾತೆಗಳಲ್ಲಿ ಬೆಂಗಳೂರು ನಗರಾಭಿವೃದ್ಧಿ, ಇಂಧನ, ಸಿ.ಟಿ.ರವಿಯವರ ರಾಜೀನಾಮೆಯಿಂದ ತೆರವಾಗಿರುವ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕ್ರೀಡೆ ಮತ್ತು ಯುವಜನ ಸೇವೆ, ಎಚ್.ನಾಗೇಶ್ ರಾಜೀನಾಮೆಯಿಂದ ತೆರವಾಗಿರುವ ಅಬಕಾರಿ ಖಾತೆ ಜೊತೆಗೆ ಕೌಶಲ್ಯ ಅಭಿವೃದ್ಧಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳನ್ನು ನೂತನ ಸಚಿವರಿಗೆ ಹಂಚಿಕೆ ಮಾಡಲು ಬಿಎಸ್‍ವೈ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ನೂತನ ಸಚಿವರು ಪ್ರಮುಖ ಖಾತೆಗಳಿಗೆ ಪಟ್ಟು ಹಿಡಿದಿದ್ದು, ಕೆಲವರ ಬಳಿ ಇರುವ ಖಾತೆಗಳಿಗೂ ಬೇಡಿಕೆ ಇಟ್ಟಿದ್ದಾರೆ. ಕೈಗಾರಿಕಾ ಖಾತೆಗೆ ನಿರಾಣಿ ಬೇಡಿಕೆ ಇರಿಸಿದ್ದು, ಇಂಧನ ಖಾತೆಗೆ ಉಮೇಶ್ ಕತ್ತಿ, ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಅರವಿಂದ ಲಿಂಬಾವಳಿ ಪಟ್ಟು ಹಿಡಿದಿದ್ದಾರೆ.

ಒಟ್ಟಿನಲ್ಲಿ ಖಾತೆಗಳಿಗೆ ಕ್ಯಾತೆ ಉದ್ಭವಿಸುತ್ತದೆ ಎಂಬ ಕಾರಣಕ್ಕೆ ಅಮಿತ್ ಶಾ ರಾಜ್ಯ ಪ್ರವಾಸ ಮುಗಿಯುವವರೆಗೂ ಸುಮ್ಮನಿದ್ದ ಸಿಎಂ ಇದೀಗ ಖಾತೆ ಹಂಚಿಕೆಗೆ ಮುಂದಾಗಿದ್ದಾರೆ. ಕೆಲವರ ಖಾತೆ ಬದಲಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.