ವಿಧಾನಸಭೆ ಕಲಾಪಕ್ಕೆ ಸಚಿವರು ಚಕ್ಕರ್, ಸ್ಪೀಕರ್ ತರಾಟೆ

Social Share

ಬೆಂಗಳೂರು,ಸೆ.15- ಸಚಿವರು, ಶಾಸಕರಿಗೆ ಪ್ರಶ್ನೋತ್ತರ ಕಲಾಪವು ಮೊದಲ ಆದ್ಯತೆ ಆಗಬೇಕು ಎಂದು ಸಭಾಧ್ಯಕ್ಷರು ವಿಧಾನಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು. ಪ್ರಶ್ನೋತ್ತರ ಅವಧಿಯಲ್ಲಿ ಸಚಿವರ ಹಾಜರಾತಿ ಕೊರತೆಯ ಬಗ್ಗೆ ವಿರೋಧ ಪಕ್ಷದ ಉಪ ನಾಯಕ ಯು.ಟಿ.ಖಾದರ್, ಜೆಡಿಎಸ್ ಸಚೇತಕ ವೆಂಕಟರಾವ್ ನಾಡಗೌಡ ಸೇರಿದಂತೆ ಪ್ರತಿಪಕ್ಷಗಳ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಆಗ ಸಮಾಧಾನಪಡಿಸಿದ ಸಭಾಧ್ಯಕ್ಷರು ಶಾಸಕ ಸಿ.ಎಂ.ಲಿಂಬಣ್ಣನವರ್ ಅವರನ್ನು ಪ್ರಶ್ನೆ ಕೇಳುವಂತೆ ಆಹ್ವಾನಿಸಿದರು. ಆ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹಾಜರಿರಲಿಲ್ಲ. ನಂಜೇಗೌಡ ಅವರು ಪ್ರಶ್ನೆ ಕೇಳಿದ ವೇಳೆಗೆ ಆಗಮಿಸಿದ ಅವರನ್ನು ಸಭಾಧ್ಯಕ್ಷರು ತರಾಟೆಗೆ ತೆಗೆದುಕೊಂಡರು. ತಡವಾಗಿ ಬಂದಿದ್ದೀರಿ. ಪ್ರಶ್ನೋತ್ತರ ಇರುವಾಗ ಬೇರೆ ಯಾವುದೂ ಮುಖ್ಯವಾಗಬಾರದು. ಸದನದ ಪ್ರಶ್ನೋತ್ತರ ವೇಳೆ ಟಾಪ್ ಮೋಸ್ಟ್ ಆದ್ಯತೆಯಾಗಬೇಕು ಎಂದು ಸೂಚಿಸಿದರು.

ಆಗ ಅಶ್ವತ್ಥನಾರಾಯಣ ಅವರು, ಮಾಧ್ಯಮದವರೊಂದಿಗೆ ಮಾತನಾಡಬೇಕಾಗಿದ್ದರಿಂದ ವಿಳಂಬವಾಯಿತು ಎಂದು ಕಾರಣ ಹೇಳಿದಾಗ ಸಭಾಧ್ಯಕ್ಷರು ಮೇಲಿನಂತೆ ಸೂಚಿಸಿದರು. ಇದಕ್ಕೂ ಮುನ್ನ ಪ್ರತಿಪಕ್ಷಗಳ ಶಾಸಕರು ಸಚಿವರ ಹಾಜರಾತಿ ಇಲ್ಲದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಯು.ಟಿ.ಖಾದರ್ ಮಾತನಾಡಿ, ಸದನದಲ್ಲಿ ಹಾಜರಿರಬೇಕಾದ ಸಚಿವರ ಪಟ್ಟಿಯನ್ನು ಪ್ರಕಟಿಸಿ ಎಂದು ಒತ್ತಾಯಿಸಿದರು.

ಇದನ್ನೂ ಓದಿ : BIG NEWS : ಉಕ್ರೇನ್‍ ಅಧ್ಯಕ್ಷ ಝೆಲೆನ್‍ಸ್ಕಿ ಕಾರು ಅಪಘಾತ, ಗಂಭೀರ ಗಾಯ

ಇದಕ್ಕೆ ದನಿಗೂಡಿಸಿದ ಕಾಂಗ್ರೆಸ್ ಶಾಸಕ ಕೃಷ್ಣಭೈರೇಗೌಡ, ಪ್ರಶ್ನೋತ್ತರ ವೇಳೆಗೆ ಬರುವುದಿಲ್ಲ ಎಂದರೆ ಹೇಗೆ? ನೀವೇ ಸಮಾಧಾನ ಹೇಳಿದರೆ ಅವರಿಗೆ ಧೈರ್ಯಬಂದಂತಾಗುತ್ತದೆ ಎಂದರು.ಜೆಡಿಎಸ್ ಸಚೇತಕ ವೆಂಕಟರಾವ್ ನಾಡಗೌಡ ಅವರು, ಸದನಕ್ಕೆ ಬರಲು ಆಸಕ್ತಿ ಇಲ್ಲ ಎಂದು ಛೇಡಿಸಿದರು.

ಆ ಸಂದರ್ಭದಲ್ಲಿ ಲಿಂಬಣ್ಣನವರು ಪ್ರಶ್ನೆ ಕೇಳಿದಾಗ, ಅಶ್ವಥ್ನಾರಾಯಣ ಬಂದಿರಲಿಲ್ಲ. ಸಮಯ 11.25 ಆಯಿತು. ಇನ್ನು ಸದನಕ್ಕೆ ಬಂದಿಲ್ಲ. ಸಚಿವರು ತಯಾರಿ ಆಗಿಲ್ಲವೋ ಏನೋ ಎಂದು ಪ್ರಶ್ನಿಸಿದರು.

ಶಾಸಕ ಮಂಜುನಾಥ ಅವರ ಪ್ರಶ್ನೆಗೆ ಉತ್ತರಿಸಲು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹಾಜರಿರಲಿಲ್ಲ ಆಗ ಸಭಾಧ್ಯಕ್ಷರು,ಆರೋಗ್ಯ ಸಚಿವ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾರೆ ಎಂದು ಆ ಇಲಾಖೆಯ ಕಾರ್ಯದರ್ಶಿಯವರು ಹೇಳಿದ್ದಾರೆ. ಬೇರೆ ಸಚಿವರಿಂದ ಉತ್ತರ ಕೊಡಿಸಲು ಹೇಳಿ ಕಳುಹಿಸಲಾಗಿತ್ತು. ಆದರೂ ಯಾರೂ ಉತ್ತರ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈ ಹಂತದಲ್ಲಿ ಕೃಷ್ಣ ಭೈರೇಗೌಡ ಅವರು, ನಾಮಕಾವಸ್ತೆಗೆ ಉತ್ತರ ಕೊಡುವ ಬದಲು ಬೇರೆ ಯಾರಿಗಾದರೂ ಒಪ್ಪಿಸಿದ್ದರೆ ಒಳ್ಳೆಯದಾಗಿತ್ತು ಎಂದಾಗ, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಅವರು, ಸೋಮವಾರ ಆರೋಗ್ಯ ಸಚಿವರಿಂದ ಸಮರ್ಪಕ ಉತ್ತರ ಕೊಡಿಸಲಾಗುವುದು. ಅಂದೂ ಬರದಿದ್ದರೆ ಬೇರೆ ಸಚಿವರಿಂದ ಉತ್ತರ ಕೊಡಿಸುವ ಭರವಸೆ ನೀಡಿದಾಗ ಸಭಾಧ್ಯಕ್ಷರು, ಬೇರೆಯವರಿಗೆ ತಿಳಿಯುವುದಿಲ್ಲ ಎಂಬ ಕಾರಣಕ್ಕೆ ವಹಿಸಿಲ್ಲದಿರಬಹುದು. ಹೀಗಾಗಿ ಈ ಪ್ರಶ್ನೆಯನ್ನು ತಡೆ ಹಿಡಿಯಲಾಗಿದೆ ಎಂದು ಪ್ರಕಟಿಸಿದರು.

ಹೀಗೆ ಆರೋಗ್ಯ ಇಲಾಖೆಗೆ ಸಂಬಂಧಿಸಿದ ಪ್ರಶ್ನೆ ಬಂದಾಗ ಶಾಸಕರು ನಮಗೆ ಉತ್ತರ ಸಿಗುತ್ತಿಲ್ಲ ಎಂದು ಸಭಾಧ್ಯಕ್ಷರ ಗಮನಕ್ಕೆ ತಂದರು. ಆ ಪ್ರಶ್ನೆಗಳನ್ನು ಮುಂದಿನ ವಾರ ತೆಗೆದುಕೊಳ್ಳುವ ಭರವಸೆ ನೀಡಿದರು.

Articles You Might Like

Share This Article