“ನನಗೆ ಯಾವುದೇ ಅಸಮಾಧಾನವಿಲ್ಲ” : ಉಲ್ಟಾ ಹೊಡೆದ ಸಚಿವ ಆನಂದ್ ಸಿಂಗ್

Spread the love

ಬೆಂಗಳೂರು,ಜ.29-ನನಗೆ ನೀಡಿರುವ ಖಾತೆಯಲ್ಲಿ ಯಾವುದೇ ರೀತಿಯ ಅಸಮಾಧಾನವಿಲ್ಲ. ಮುಖ್ಯಮಂತ್ರಿಗಳ ತೀರ್ಮಾನಕ್ಕೆ ನಾನು ಬದ್ದನಾಗಿರುತ್ತೇನೆ ಎಂದು ಸಚಿವ ಆನಂದ್ ಸಿಂಗ್ ಉಲ್ಟಾ ಹೊಡೆದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮ್ಮ ಖಾತೆಯನ್ನು ಬದಲಾವಣೆ ಮಾಡಿರುವುದಕ್ಕೆ ಬೇಸರವಾಗಿ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿರುವುದು ಕೇವಲ ವದಂತಿ. ಮುಖ್ಯಮಂತ್ರಿಗಳು ಕೊಟ್ಟಿರುವ ಖಾತೆಯಲ್ಲಿ ನನಗೆ ತೃಪ್ತಿಯಿದೆ ಎಂದು ಹೇಳಿದರು.

ಏಪ್ರಿಲ್ ತಿಂಗಳ ನಂತರ ಸಚಿವ ಸಂಪುಟ ಪುನಾರಚನೆ ಆಗಲಿದೆ. ಆ ವೇಳೆ ಖಾತೆ ಬದಲಾವಣೆ ಮಾಡಿಕೊಡುವುದಾಗಿ ಭರವಸೆ ಕೊಟ್ಟಿದ್ದಾರೆ. ನನಗೆ ಅವರ ಮೇಲೆ ನಂಬಿಕೆ ಇರುವುದರಿಂದ ನನಗೆ ಯಾವುದೇ ರೀತಿಯ ಅಸಮಾಧಾನ ಇಲ್ಲ ಎಂದು ಸ್ಪಷ್ಟಪಡಿಸಿದರು.

ಕೊಟ್ಟಿರುವ ಖಾತೆಯಲ್ಲೇ ನಾನು ಉತ್ತಮವಾಗಿ ಕೆಲಸ ಮಾಡುತ್ತೇನೆ. ಖಾತೆಗಿಂತ ನಾವು ಮಾಡುವ ಕೆಲಸಗಳು ಮುಖ್ಯ. ಯಾವುದೇ ಖಾತೆ ಇದ್ದರೂ ಉತ್ತಮವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.