ಬಿಗ್ ಬ್ರೆಕಿಂಗ್ : ಶಾಸಕ ಸ್ಥಾನಕ್ಕೆ ಸಚಿವ ಆನಂದ್ ಸಿಂಗ್ ರಾಜೀನಾಮೆ..!?
ಬೆಂಗಳೂರು : ನಿರೀಕ್ಷಿಸಿದ ಖಾತೆ ಸಿಗದಿರುವುದಕ್ಕೆ ಪಕ್ಷದ ವರಿಷ್ಟರ ತೀವ್ರ ಅಸಮಧಾನಗೊಂಡಿರುವ ಸಚಿವ ಆನಂದ್ ಸಿಂಗ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ನಾಳೆ ಅಥವಾ ಯಾವುದೇ ಕ್ಷಣದಲ್ಲಿ ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿಯಾಗಲಿರುವ ಆನಂದ್ ಸಿಂಗ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಹೊಸಪೇಟೆ ( ವಿಜಯನಗರ)ದ ರಾಣಿಪೇಟೆಯಲ್ಲಿರುವ ತಮ್ಮ ನಿವಾಸದಲ್ಲಿ ಈಗಾಗಲೇ ಶಾಸಕರ ಕಚೇರಿಯನ್ನು ತೆರವುಗೊಳಿಸಿರುವುದು ರಾಜೀನಾಮೆಯ ಮುನ್ಸೂಚನೆ ಎಂದು ತಿಳಿದು ಬಂದಿದೆ.ತಮ್ಮ ಆಪ್ತರ ಜೊತೆ ಈಗಾಗಲೇ ಚರ್ಚೆ ನಡೆಸಿರುವ ಆನಂದ್ ಸಿಂಗ್ ತಮಗೆ ಬಿಜೆಪಿಯಲ್ಲಿ ಉದ್ದೇಶಪೂರ್ವಕವಾಗಿ ಅವಮಾನ ಮಾಡಲಾಗುತ್ತಿದ್ದು, ರಾಜೀನಾಮೆ ನೀಡುವ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಪಕ್ಷದ ಅನೇಕರನ್ನು ಭೇಟಿಯಾಗಿ ನನ್ನ ನೋವು ಹೇಳಿಕೊಂಡರೂ ನ್ಯಾಯ ಸಿಗುವ ಭರವಸೆ ಯಾರಿಂದಲೂ ಸಿಗುತ್ತಿಲ್ಲ.ಹೀಗಾಗಿಯೇ ನಾನು ನೀಡಿರುವ ಖಾತೆಯ ಜವಾಬ್ದಾರಿಯನ್ನು ವಹಿಸಿಕೊಂಡಿಲ್ಲ. ಒಂದೆರೆಡು ದಿನಗಳಲ್ಲಿ ಖಾತೆ ಬದಲಾವಣೆ ಮಾಡದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅನಂದ್ ಸಿಂಗ್ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ನನ್ನ ಜೊತೆ ಬಂದವರಿಗೆ ಉತ್ತಮ ಖಾತೆಗಳನ್ನು ನೀಡಲಾಗಿದೆ. ನನಗೆ ಮಾತ್ರ ಯಾರಿಗೂ ಬೇಡವಾದ ಖಾತೆಯನ್ನು ಕೊಡಲಾಗಿದೆ. ಇಂತಹ ತಾರತಮ್ಯ ಏಕೆ ಎಂದು ಪ್ರಶ್ನೆ ಮಾಡಿದ್ದಾರೆ. ಮೂಲಗಳ ಪ್ರಕಾರ ಆನಂದ್ ಸಿಂಗ್ ಲೋಕೋಪಯೋಗಿ, ಇಂಧನ ಇಲ್ಲವೇ ಬೃಹತ್ ನೀರಾವರಿ ಖಾತೆಯನ್ನು ನೀಡಬೇಕು ಎಂಬ ಬೇಡಿಕೆಯನ್ನು ಇಟ್ಟಿದ್ದರು.
ಆದರೆ ಇತ್ತೀಚೆಗೆ ನಡೆದ ಸಂಪುಯ ರಚನೆಯಲ್ಲಿ ಆನಂದ್ ಸಿಂಗ್ ಗೆ ಪ್ರವಾಸೋದ್ಯಮ ಹಾಗೂ ಪರಿಸರ ಖಾತೆಯನ್ನು ನೀಡಲಾಗಿತ್ತು. ಇದರಿಂದಾಗಿ ಅಸಮಾಧಾನಗೊಂಡ ಅವರು ತಮ್ಮ ಖಾತೆಯನ್ನು ಬದಲಾವಣೆ ಮಾಡಬೇಕು ಎಂದು ಸಿ.ಎಂ ಬಸವರಾಜ್ ಬೊಮ್ಮಯಿ ಭೇಟಿಯಾಗಿದ್ದರು.
# ಯಡಿಯೂರಪ್ಪ ನಿವಾಸಕ್ಕೆ ಸಿ.ಎಂ
ಸಚಿವ ಆನಂದ್ ಸಿಂಗ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬೆದರಿಕೆಹಾಕುತ್ತಿದ್ದಂತೆ ಸಿ.ಎಂ ಬೊಮ್ಮಯಿ ಅವರು ಮಾಜಿ ಸಿ.ಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.ಕಾವೇರಿ ನಿವಾಸಕ್ಕೆ ಸಚಿವರಾದ ಆರ್ ಅಶೋಕ್, ಮುನಿ ರತ್ನ ಜೊತೆ ಆಗಮಿಸಿದ ಬೊಮ್ಮಯಿ ಆನಂದ್ ಸಿಂಗ್ ಅವರ ಜೊತೆಗೆ ಮಾತುಕತೆ ನಡೆಸಿ ಮನವೊಲಿಸಲು ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಯಡಿಯೂರಪ್ಪ ಅವರು ಸತತವಾಗಿ ಆನಂದ್ ಸಿಂಗ್ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಲು ಪ್ರಯತ್ನ ಕೈಗೂಡಲಿಲ್ಲ ಎನ್ನಲಾಗಿದೆ. ಈ ದಿಢೀರ್ ಬೆಳವಣಿಗೆ ಬಿಜೆಪಿಯಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.