ತುಮಕೂರು,ಮಾ.3- ರಷ್ಯಾ ದಾಳಿಯಿಂದ ಉಕ್ರೇನ್‍ನಲ್ಲಿ ಮೃತಪಟ್ಟ ಹಾವೇರಿಯ ವಿದ್ಯಾರ್ಥಿ ನವೀನ್ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ಕೇಂದ್ರ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ವಿದ್ಯಾರ್ಥಿ ನವೀನ್ ಉಕ್ರೇನ್‍ನಲ್ಲಿ ಸಾವನ್ನಪ್ಪಿದ್ದು, ಆತನ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದರು.
ರಾಜ್ಯದ ವಿದ್ಯಾರ್ಥಿಗಳು ಉಕ್ರೇನ್‍ನಲ್ಲಿ ಮೆಡಿಕಲ್ ವ್ಯಾಸಂಗ ಮಾಡಲು ಹೋಗಲು ನೀಟ್ ವ್ಯವಸ್ಥೆಯೇ ಕಾರಣ ಎಂಬ ಅಸಮಧಾನ ವ್ಯಕ್ತವಾಗುತ್ತಿದ್ದು, ಸಂಬಂಧಪಟ್ಟ ಸಚಿವರು ಈ ಬಗ್ಗೆ ಮಾತನಾಡಲಿದ್ದಾರೆ, ರಾಜ್ಯದ ವಿದ್ಯಾರ್ಥಿಗಳ ಹಿತ ಕಾಯಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಪೊಲೀಸ್ ಅಧಿಕಾರಿಗಳ ವೇತನ ತಾರತಮ್ಯ ನಿವಾರಣೆಗೆ ಇಲಾಖೆ ಕ್ರಮವಹಿಸಿದ್ದು, ಔರಾದ್ಕರ್ ವರದಿ ಅನುಷ್ಠಾನ ಬಜೆಟ್‍ನಲ್ಲಿ ಬರಬೇಕಂತಿಲ್ಲ, ಅಂದಿನ ಕಾಂಗ್ರೆಸ್ ಸರಕಾರ ಸರಿಯಾದ ಕ್ರಮ ತೆಗೆದುಕೊಂಡಿದ್ದರೆ, ಹಿರಿಯ ಪೊಲೀಸರಿಗೆ- ಅಧಿಕಾರಿಗಳಿಗೆ ತೊಂದರೆಯಾಗುತ್ತಿರಲಿಲ್ಲ ಎಂದು ಆರೋಪಿಸಿದ ಅವರು, ಬಿಜೆಪಿ ಸರ್ಕಾರ ಈಗ ಅದನ್ನು ಸರಿದೂಗಿಸುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಲಿದೆ ಎಂದರು.
ಹಿಂದೂ ಪರ ಕಾರ್ಯಕರ್ತ ಶಿವಮೊಗ್ಗ ಹರ್ಷ ಕುಟುಂಬಕ್ಕೆ ಬಿಜೆಪಿ ಟಿಕೆಟ್ ಕೊಡುವ ವಿಚಾರಕ್ಕೆ ಸಂಬಂಸಿದಂತೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನವರ ಕಾಲದಲ್ಲಿ ಸತ್ತವರ ಕುಟುಂಬದವರಿಗೆ ಟಿಕೆಟ್ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಸಾವಿನ ಮನೆಯಲ್ಲಿ ರಾಜಕಾರಣ ಮಾಡುತ್ತಿದೆ. ಆಧಾರ ರಹಿತ ಟೀಕೆ ಮಾಡುತ್ತಿದೆ, ಹರ್ಷ ಕುಟುಂಬಕ್ಕೆ ಎಲ್ಲಾ ರೀತಿಯ ಸಹಕಾರವನ್ನು ಸರ್ಕಾರ ಮತ್ತು ಬಿಜೆಪಿ ಕೊಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
# ಶಿವಮೊಗ್ಗ ಪೊಲೀಸರ ವಿರುದ್ದದ ತನಿಖೆ:
ಶಿವಮೊಗ್ಗದ ಎರಡೂ ಠಾಣೆಯ ವಿರುದ್ದ ತನಿಖೆ ನಡೆಯುತ್ತಿದೆ, ಆರೋಪಿಗಳ ವಿರುದ್ದ 10-15 ಕೇಸ್ ಇದ್ದರು ಏಕೆ ಕ್ರಮ ಕೈಗೊಂಡಿಲ್ಲ? ಇಷ್ಟು ದಿನ ಏಕೆ ಬೆಳೆಸಿ ಇಟ್ಟುಕೊಂಡಿದ್ದರು, ಪೊಲೀಸರ ಕರ್ತವ್ಯದಲ್ಲಿ ಏನು ಎಡವಟ್ಟು ಆಗಿದೆ ಎನ್ನುವುದನ್ನು ಅರಿಯುವ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.
ಅನ್ಯಾಯ ಯಾರೂ ಮಾಡಿದರೂ ಒಂದೇ, ಸಾಮಾನ್ಯ ಜನರಿಗೆ ಒಂದು , ಪೊಲೀಸರಿಗೆ ಒಂದು, ಗೃಹ ಸಚಿವರಿಗೆ ಒಂದು ಕಾಯಿದೆ ಅಲ್ಲ. ಪೊಲೀಸರ ವಿರುದ್ದ ತನಿಖೆ ಆರಂಭವಾಗಿದೆ ಒಂದು ವಾರದಲ್ಲಿ ವರದಿ ನೀಡಲು ಸೂಚಿಸಿರುವುದಾಗಿ ತಿಳಿಸಿದರು.
