ಬೆಂಗಳೂರು,ಜ.20- ಸಿದ್ದರಾಮ್ಯನವರೇ ನಮ್ಮ ಸರ್ಕಾರ ಯಾವುದೇ ಜನಪರ ಕಾರ್ಯಕ್ರಮ ಮಾಡಲಿ, ಅದನ್ನು ನಾನು ಅಧಿಕಾರದಲ್ಲಿದ್ದಾಗಲೇ ಯೋಚನೆ ಮಾಡಿದ್ದೆ ಅನ್ನುತ್ತೀರಿ. ನಿಮ್ಮದು ಬರೀ ಯೋಚನೆ ಮಾತ್ರ, ಯೋಜನೆ, ಕಾರ್ಯರೂಪ ಇಲ್ಲ ಎಂದು ಕಂದಾಯ ಸಚಿವ ಆರ್ .ಅಶೋಕ್ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕರ್ನಾಟಕ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯನವರು ಖಾಲಿಯಾಗಿರುವ ಅಡುಗೆ ಮನೆಯ ಡಬ್ಬ ಅಲ್ಲಾಡಿಸಿ, ಪಕ್ಕದ ಮನೆಯಿಂದ ಬರುವ ಅಡುಗೆಯ ಪರಿಮಳ ನಮ್ಮ ಮನೆಯದ್ದೇ ಎಂದು ಹೇಳಿಕೊಂಡು ಓಡಾಡುತ್ತೀರಿ ಎಂದು ಲೇವಡಿ ಮಾಡಿದ್ದಾರೆ.
ಬಂಜಾರ ಸಮುದಾಯದವರದ್ದು ಸುಮಾರು 20-30 ವರ್ಷ ಹಳೆಯ ಬೇಡಿಕೆಯಾಗಿತ್ತು. ನೀವೆಲ್ಲರೂ ಬರಿ ಆಶ್ವಾಸನೆ ಕೊಡುವುದರಲ್ಲಿಯೇ ಕಾಲ ಕಳೆದಿರಿ. ನಮ್ಮ ಸರ್ಕಾರ ಬಂದ ಮೇಲೆ ಪ್ರಾಥಮಿಕ ಹಾಗೂ ಅಂತಿಮ ಅಧಿಸೂಚನೆ ಹೊರಡಿಸಿ ಕಂದಾಯ ಗ್ರಾಮಗಳನ್ನಾಗಿ ಮಾಡಿ 52,072 ಕುಟುಂಬಕ್ಕೆ ಹಕ್ಕುಪತ್ರ ನೀಡಿದ್ದೇವೆ ಎಂದು ಸಮರ್ಥಿಸಿಕೊಂಡರು.
ನಾಳೆ ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಭೇಟಿ
ಮುಂದೆ ದಾವಣಗೆರೆಯಲ್ಲಿಯೂ ಇದೇ ರೀತಿ ಕಾರ್ಯಕ್ರಮ ಮಾಡಿ, ಕಂದಾಯ ಗ್ರಾಮಗಳನ್ನಾಗಿ ಘೋಷಿಸಿ ಹಕ್ಕುಪತ್ರ ನೀಡುತ್ತೇವೆ. ಆಗ ಯಾವ ಹೇಳಿಕೆ ನೀಡಬೇಕು ಎಂದು ಯೋಚಿಸಿ ಸಿದ್ಧರಾಗಿ ಸಿದ್ದರಾಮಯ್ಯನವರೇ ಎಂದು ಟೀಕಿಸಿದ್ದಾರೆ.
75 ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ಹಿಂದುಳಿದವರ ಕಲ್ಯಾಣದ ಹೆಸರಲ್ಲಿ ಮತ ಪಡೆದಿರಿ. ಅಧಿಕಾರ ಅನುಭವಿಸಿದ್ದೀರಿ. ಆದರೆ ಜನಕಲ್ಯಾಣದ ಮಾತು ದೂರವೇ ಉಳಿಯಿತು. ನಿಮ್ಮದು ಮತ ಬ್ಯಾಂಕ್ ರಾಜಕೀಯ. ನಮ್ಮದು ಅಭಿವೃದ್ಧಿ ಪಥದ ರಾಜಕೀಯ ಎಂದು ಟಾಂಗ್ ನೀಡಿದ್ದಾರೆ.
ಪ್ರವೀಣ್ ನೆಟ್ಟಾರು ಹಂತಕರ ಸುಳಿವು ನೀಡುವವರಿಗೆ 5 ಲಕ್ಷ ರೂ. ಬಹುಮಾನ ಘೋಷಣೆ
ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಸಬ್ ಕಾ ವಿಶ್ವಾಸ್ ತತ್ವದಡಿ ನಾವು ಮುಂದೆ ಸಾಗುತ್ತೇವೆ. ಇಷ್ಟಾಗಿಯೂ, ನೀವು ಮತ್ತು ನಿಮ್ಮ ಪಕ್ಷ ಹೀಗೆ ಖಾಲಿ ಡಬ್ಬ ಬಡಿಯುತ್ತಾ, ಯಾರೊ ಮಾಡಿದ ಕೆಲಸಕ್ಕೆ ನಾಮಕರಣ ಮಾಡುತ್ತಾ ಸಾಗುತ್ತಿರೋ ಅಥವಾ ಸುಳ್ಳು ಹೇಳುವುದನ್ನು ನಿಲ್ಲಿಸಿ ಅಭಿವೃದ್ಧಿಗೆ ಬೆಂಬಲಿಸುತ್ತೀರೋ ಸರಿಯಾಗಿ ಯೋಚಿಸಿ ಎಂದು ಅವರು ಕಿಡಿ ಕಾರಿದ್ದಾರೆ.
Minister Ashok, development, government, BJP,