ಏಕಾಏಕಿ ದೇವಸ್ಥಾನಗಳನ್ನು ತೆರವುಗೊಳಿಸದಂತೆ ಜಿಲ್ಲಾಡಳಿತಕ್ಕೆ ಸೂಚನೆ

ಬೆಂಗಳೂರು,ಸೆ.14- ಇನ್ನು ಮುಂದೆ ರಾಜ್ಯದ ಯಾವುದೇ ಭಾಗಗಳಲ್ಲೂ ಏಕಾಏಕಿ ದೇವಸ್ಥಾನಗಳನ್ನು ತೆರವುಗೊಳಿಸದಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವಸ್ಥಾನಗಳನ್ನು ತೆರವುಗೊಳಿಸುವುದರಿಂದ ಜನರ ಭಾವನೆಗಳಿಗೆ ಧಕ್ಕೆಯಾಗಲಿದೆ. ಹೀಗಾಗಿ ದೇವಾಲಯಗಳನ್ನು ತಕ್ಷಣವೇ ತೆರವುಗೊಳಿಸದಂತೆ ಸೂಚನೆ ನೀಡಲಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಜತೆ ನಾನೇ ಮಾತುಕತೆ ನಡೆಸುತ್ತೇನೆ. ಜನರ ಭಾವನೆಗಳಿಗೆ ಧಕ್ಕೆ ತಂದು ದೇವಾಲಯಗಳನ್ನು ತೆವುಗೊಳಿಸಬಾರದು. ಸರ್ಕಾರದಿಂದ ನಿರ್ದೇಶನ ಬರುವವರೆಗೂ ಸ್ಥಗಿತ ಮಾಡಲು ಸೂಚನೆ ನೀಡಲಾಗುವುದು ಎಂದು ಹೇಳಿದರು.

ಕೆಲವು ಕಡೆ ದೇವಸ್ಥಾನಗಳನ್ನು ತೆರವು ಮಾಡುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ನ್ಯಾಯಾಲಯದ ನಿರ್ದೇಶನದ ಬಗ್ಗೆ ಸರ್ಕಾರ ಕೂಲಂಕಷವಾಗಿ ಪರಿಶೀಲನೆ ನಡೆಸಲಿದೆ. ಸರ್ಕಾರ ನಿರ್ದೇಶನ ನೀಡುವವರೆಗೂ ತೆರವುಗೊಳಿಸುವ ಅಗತ್ಯವಿಲ್ಲ. ಕೂಡಲೇ ಜಿಲ್ಲಾಡಳಿತಕ್ಕೆ ಸೂಚನೆ ನೀಡುವುದಾಗಿ ಮಾಹಿತಿ ನೀಡಿದರು.

ಮೈಸೂರಿನ ಹುಣಸೂರಿನಲ್ಲಿ ಪುರಾತನ ದೇವಾಲಯವನ್ನು ಜಿಲ್ಲಾಡಳಿತ ತೆರವುಗೊಳಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಸಂಬಂಧ ಜಿಲ್ಲಾಧಿಕಾರಿ ಹಾಗೂ ಅಲ್ಲಿನ ತಹಸೀಲ್ದಾರ್ ಅವರ ಜತೆ ಮಾತನಾಡಿ ಮಾಹಿತಿ ಪಡೆಯುತ್ತೇನೆ. ಜನರು ಯಾವುದೇ ಕಾರಣಕ್ಕೂ ಆಕ್ರೋಶಕ್ಕೆ ಒಳಗಾಗಬಾರದು ಎಂದು ಸಚಿವರು ಮನವಿ ಮಾಡಿದರು.

ಸರ್ಕಾರ ಪ್ರತಿಯೊಬ್ಬರ ಭಾವನೆಗಳನ್ನು ಗೌರವಿಸಲಿದೆ ನಮಗೆ ಯಾರೂ ಮೇಲು, ಕೀಳು ಎಂಬ ಭಾವನೆ ಇಲ್ಲ. ದೇವಾಲಯ ಸೇರಿದಂತೆ ಎಲ್ಲ ಮಂದಿರಗಳ ಜತೆ ಪ್ರತಿಯೊಬ್ಬರೂ ದೈವ ಭಕ್ತಿ ಇಟ್ಟುಕೊಂಡಿರುತ್ತಾರೆ. ಏಕಾಏಕಿ ತೆರವುಗೊಳಿಸಿದರೆ ಸಹಜವಾಗಿ ಅವರ ಭಾವನೆಗಳಿಗೆ ಧಕ್ಕೆ ಬರುತ್ತದೆ ಎಂದು ಹೇಳಿದರು.

ಸಾರ್ವಜನಿಕ ಸ್ಥಳ ಅಥವಾ ಎಲ್ಲೇ ದೇವಾಲಯಗಳಿರಲಿ ಸರ್ಕಾರ ನಿರ್ದೇಶನ ನೀಡುವವರೆಗೂ ತೆರವುಗೊಳಿಸುವ ಅಗತ್ಯವಿಲ್ಲ. ಸರ್ಕಾರ ಪ್ರತಿಯೊಬ್ಬರ ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತದೆ. ವದಂತಿಗಳಿಗೆ ಜನರು ಕಿವಿಗೊಡಬಾರದು ಎಂದು ಅಶೋಕ್ ಮನವಿ ಮಾಡಿದರು.

ಹುಣಸೂರಿನಲ್ಲಿ ದೇವಾಲಯವನ್ನು ತೆರವುಗೊಳಿಸಲು ಸೂಚನೆ ನೀಡಿದ್ದ ಸ್ಥಳೀಯ ತಹಸೀಲ್ದಾರ್ ಅವರನ್ನು ಅಮಾನತು ಮಾಡುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ, ಈ ಬಗ್ಗೆ ನಾನು ಸಂಬಂಧಪಟ್ಟವರ ಜತೆ ಚರ್ಚಿಸಿ ನಂತರ ಕ್ರಮ ಕೈಗೊಳ್ಳುತ್ತೇನೆ ಎಂದು ಇದೇ ವೇಳೆ ಸಚಿವರು ಹೇಳಿದರು.