ಅಶೋಕ್ ಮಾಡಿರುವ ಒತ್ತುವರಿ ಪಟ್ಟಿಯಲ್ಲಿ ಪದ್ಮನಾಭನಗರವೂ ಇದೆಯೇ..?

Social Share

ಬೆಂಗಳೂರು, ಸೆ.17- ಕೆರೆ, ರಾಜಕಾಲುವೆ ಹಾಗೂ ಬಫರ್‍ಜೋನ್ ಒತ್ತುವರಿ ಮಾಡಿರುವವರ ಪಟ್ಟಿ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿರುವ ಕಂದಾಯ ಸಚಿವ ಆರ್.ಅಶೋಕ್ ಅವರು ತಾವು ಪ್ರತಿನಿಧಿಸುವ ಕ್ಷೇತ್ರದಲ್ಲಿ ಆಗಿರುವ ಒತ್ತುವರಿದಾರರ ಹೆಸರು ಬಹಿರಂಗಗೊಳಿಸುತ್ತಾರೆಯೇ ಎಂಬುದು ಇದೀಗ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಅಶೋಕ್ ಪ್ರತಿನಿಧಿಸುವ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿರುವ ಬಹುತೇಕ ಕೆರೆಗಳು ಒತ್ತುವರಿಯಾಗಿವೆ. ಅದರಲ್ಲಿ ಅಶೋಕ್ ಅವರ ಕಟ್ಟಾ ಬೆಂಬಲಿಗರಾಗಿ ಗುರುತಿಸಿಕೊಂಡಿರುವವರ ಕೆಲವರ ಹೆಸರು ಇರುವುದರಿಂದ ಅಶೋಕ್ ಬಿಡುಗಡೆ ಮಾಡುವ ಪಟ್ಟಿ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ.

ಒಂದು ಕಾಲದಲ್ಲಿ ಈ ಭಾಗದ ಜನರ ಜೀವನಾಡಿಯಾಗಿದ್ದ ಚಿಕ್ಕಕಲ್ಲಸಂದ್ರ ಕೆರೆ ಇಂದು ಆ ಪ್ರದೇಶದಲ್ಲಿ ಕೆರೆ ಇತ್ತು ಎಂಬ ಕುರುಹು ಕಾಣದಂತಾಗಿದೆ. ಈ ಕೆರೆ ಒತ್ತುವರಿ ಮಾಡಿ ಬಡಾವಣೆ ನಿರ್ಮಿಸಲಾಗಿದೆ. ಇದರ ಹಿಂದೆ ಅಶೋಕ್ ಅವರ ಕಟ್ಟಾ ಬೆಂಬಲಿಗರಾಗಿದ್ದ ಮಾಜಿ ಉಪಮೇಯರ್ ಒಬ್ಬರ ಹೆಸರು ತಳಕು ಹಾಕಿಕೊಂಡಿದೆ.

ಇದನ್ನೂ ಓದಿ : ದೊಡ್ಡವರ ಮನೆ ಬಳಿ ಜೆಸಿಬಿಗಳು ಸೈಲೆಂಟ್, ನಾಲ್ಕೇ ದಿನಕ್ಕೆ ಸೀಮಿತವಾಯ್ತು ಬಿಬಿಎಂಪಿ ಪೌರುಷ ಪ್ರದರ್ಶನ

ಹೊಸಕೆರೆ ಹಳ್ಳಿ ಕೆರೆ ಕೂಡ ಸಂಪೂರ್ಣ ಒತ್ತುವರಿಯಾಗಿದ್ದು, ಈ ಕಬಳಿಕೆ ಹಿಂದೆ ಇರುವುದು ಅದೇ ಅಶೋಕ್ ಅವರ ಭಂಟರಾಗಿರುವ ಬಿಬಿಎಂಪಿ ಮಾಜಿ ಸದಸ್ಯರೊಬ್ಬರ ಹೆಸರು ಕೇಳಿ ಬರುತ್ತಿದೆ.ಇದರ ಜತೆಗೆ ಗೌಡನಪಾಳ್ಯ , ಇಟ್ಟ ಮಡು ಹಾಗೂ ಕದಿರೇನಹಳ್ಳಿ ಕೆರೆ ಕೂಡ ಸಂಪೂರ್ಣ ಒತ್ತುವರಿಯಾಗಿದೆ ಹೀಗಾಗಿ ಅಶೋಕ್ ಅವರು ಪಟ್ಟಿ ಬಿಡುಗಡೆ ಮಾಡಿದರೆ ಅವರ ಕ್ಷೇತ್ರದಲ್ಲಿ ಆಗಿರುವ ಒತ್ತುವರಿ ಹೊಣೆಯನ್ನು ಅವರೇ ಹೊರಬೇಕಾಗುತ್ತದೆ.

ಇನ್ನು ಉತ್ತರಹಳ್ಳಿ ಕೆರೆಯ 7 ಎಕರೆ ಪ್ರದೇಶ ಒತ್ತುವರಿ ಮಾಡಿ ರೈನ್ ಬೋ ಅಪಾರ್ಟ್‍ಮೆಂಟ್ ಹಾಗೂ ರಜತಾದ್ರಿ ಹೋಟೆಲ್ ನಿರ್ಮಿಸಲಾಗಿದೆ. ಇದರ ಮಾಲೀಕರು ಯಾರೆಂಬುದು ಅಶೋಕ್ ಅವರಿಗೆ ಚೆನ್ನಾಗಿ ಗೊತ್ತು.ಈ ಹಿಂದೆ ಭೂಕಬಳಿಕೆ ಪ್ರಕರಣದಲ್ಲಿ ಲೋಕಾಯುಕ್ತರಿಂದ ಶಾಸಕ ಸ್ಥಾನ ಪದಚ್ಯುತಗೊಳಿಸುವಂತೆ ಆದೇಶಿಸಲ್ಪಟ್ಟಿದ್ದ ಅಶೋಕ್ ಅವರ ಪರಮಾಪ್ತ ಶಾಸಕ ಗೆಳೆಯನನ್ನು ಇದೇ ಸಾಮ್ರಟರು ತಮ್ಮ ಪ್ರಭಾವ ಬಳಸಿ ಸಂಕಷ್ಟದಿಂದ ಪಾರು ಮಾಡಿದ್ದರು.

ಇದೀಗ ಅಶೋಕ್ ಅವರೇ ಒತ್ತುವರಿದಾರರ ಪಟ್ಟಿ ಬಿಡುಗಡೆ ಮಾಡುತ್ತೇನೆ ಎಂದು ಘೋಷಣೆ ಮಾಡಿರುವುದರಿಂದ ತಮ್ಮ ಆಪ್ತರೆ ಮಾಡಿರುವ ಒತ್ತುವರಿ ದಾಖಲೆಗಳನ್ನು ಅವರು ಬಿಡುಗಡೆ ಮಾಡುತ್ತಾರೋ ಇಲ್ಲವೋ ಎನ್ನುವುದು ಕುತೂಹಲ ಕೆರಳಿಸಿದೆ.

ರಾಜಕಾರಣಿಗಳ ಪಾಲು ಇದೆ: ನಮ್ಮ ಸರ್ಕಾರವೇ ಒತ್ತುವರಿ ತೆರವುಗೊಳಿಸಲು ಮುಂದಾಗಿದ್ದು, ನಿಮ್ಮ ಸರ್ಕಾರ ಕೈಕಟ್ಟಿ ಕುಳಿತಿದೆ ಎಂದು ಅವೇಶನದಲ್ಲಿ ಬೊಬ್ಬೆ ಹೊಡೆಯುವ ಕೆಲವು ಘಟಾನುಘಟಿ ರಾಜಕಾರಣಿಗಳು ವಾಸ ಮಾಡುತ್ತಿರುವುದು ಅದೇ ಕೆರೆ ಒತ್ತುವರಿ ಮಾಡಿ ನಿರ್ಮಿಸಿರುವ ಬಡಾವಣೆಯಲ್ಲಿ ಎನ್ನುವುದನ್ನು ಮರೆತಿದ್ದಾರೆ.

ಇನ್ನು ಒತ್ತುವರಿ ವಿರುದ್ಧ ಸಿಡಿದೇಳಬೇಕಿದ್ದ ಹಿರಿಯ ಐಎಎಸ್ ಹಾಗೂ ಐಪಿಸ್ ಅಧಿಕಾರಿಗಳು ವಾಸ ಮಾಡುತ್ತಿರುವುದು ಕೆರೆ ಒತ್ತುವರಿ ಮಾಡಿ ನಿರ್ಮಿಸಿರುವ ಜೆ.ಪಿ.ನಗರದ ಡಾಲರ್ಸ್ ಬಡಾವಣೆಯಲ್ಲಿ ಎನ್ನುವುದು ಇಲ್ಲಿ ಉಲ್ಲೇಖಾರ್ಹ.
ಜೆ.ಪಿ.ನಗರದಲ್ಲಿದ್ದ 37 ಎಕರೆ ವಿಸ್ತೀರ್ಣದ ಲಿಂಗಣ್ಣನ ಕೆರೆಯನ್ನು ಮುಚ್ಚಿ ಬಿಡಿಎ ಯವರು ಬಡಾವಣೆ ನಿರ್ಮಿಸಿದ್ದಾರೆ. ಆ ಬಡಾವಣೆಯನ್ನು ಡಾಲರ್ಸ್ ಬಡಾವಣೆ ಎಂದು ಕರೆಯಲಾಗುತ್ತಿದೆ. ಈ ಬಡಾವಣೆಯಲ್ಲಿ ವಾಸಿಸುತ್ತಿರುವ ಬಹುತೇಕ ಮಂದಿ ಘಟಾನುಘಟಿ ರಾಜಕಾರಣಿಗಳು ಹಾಗೂ ಹಿರಿಯ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು.

ಈ ಬಡಾವಣೆಯಲ್ಲಿ ನಿರ್ಮಿಸಲಾಗಿರುವ 237 ನಿವೇಶನಗಳ ಪೈಕಿ ಶೇ.60 ರಷ್ಟು ನಿವೇಶನಗಳನ್ನು ಜಿ ಕೆಟಗರಿಯಲ್ಲಿ ಹಂಚಿಕೆ ಮಾಡಲಾಗಿದೆ. ಇಂತಹ ಬಡಾವಣೆಯಲ್ಲಿ ನಿವೇಶನ ಪಡೆದು ವೈಭವೋಪೇತ ಬಂಗಲೆ ನಿರ್ಮಿಸಿಕೊಂಡಿರುವವರೆ ಇಂದು ಅದಿವೇಶನದಲ್ಲಿ ಕೆರೆ, ರಾಜಕಾಲುವೆ, ಬಫರ್‍ಜೋನ್ ಒತ್ತುವರಿ ವಿರುದ್ಧ ವಾಕ್ಸಮರ ನಡೆಸುತ್ತಿರುವುದು ಈ ನಾಡಿನ ದುರಂತವೇ ಸರಿ.

Articles You Might Like

Share This Article