ಬೆಂಗಳೂರು,ಆ.24- ಬೂದಿಮುಚ್ಚಿದ ಕೆಂಡದಂತೆ ಹೊಗೆಯಾಡುತ್ತಿದ್ದ ಸಚಿವರ ನಡುವಿನ ಭಿನ್ನಮತ ಮತ್ತೊಮ್ಮೆ ಸ್ಪೋಟಗೊಂಡಿದ್ದು, ಆಡಳಿತಾರೂಢ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಜಗಜ್ಜಾಹೀರಾಗಿದೆ. ಬೆಂಗಳೂರಿನ ಮೇಲೆ ಹಿಡಿತ ಸಾಧಿಸಲು ಮೊದಲಿನಿಂದಲೂ ಕಸರತ್ತು ನಡೆಸುತ್ತಿರುವ ಕಂದಾಯ ಸಚಿವ ಆರ್.ಅಶೋಕ್ ಹಾಗೂ ವಸತಿ ಸಚಿವ ವಿ.ಸೋಮಣ್ಣ ನಡುವೆ ಮತ್ತೊಮ್ಮೆ ಜಟಾಪಟಿ ನಡೆದಿದೆ.
ಬಿಬಿಎಂಪಿ ಚುನಾವಣೆ ಸಂಬಂಧ ಕರೆಯಲಾಗಿದ್ದ ಸಭೆಯಲ್ಲಿ ನಾನು ಹಿರಿಯ ಎಂದು ಇಬ್ಬರು ಜಟಾಟಪಟಿಯನ್ನು ಪಕ್ಷದ ಮುಖಂಡರ ಮುಂದೆಯೇ ನಡೆಸಿದ್ದಾರೆ. ಕೊನೆಗೆ ಹಿರಿಯರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಯಾಗಿದೆ. ಅಷ್ಟಕ್ಕೂ ನಡೆದಿದ್ದೇನೆಂದರೆ ಬಿಬಿಎಂಪಿ ಚುನಾವಣೆ ಸಿದ್ಧತೆ ಕುರಿತು ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಮಹಾನಗರದ ಸಚಿವರು, ಶಾಸಕರು, ಪ್ರಮುಖ ಮುಖಂಡರ ಜೊತೆ ಸಭೆ ನಡೆಸಲಾಯಿತು.
ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಂಸದರಾದ ಡಿ.ವಿ.ಸದಾನಂದಗೌಡ, ತೇಜಸ್ವಿ ಸೂರ್ಯ, ಸಚಿವರಾದ ಆರ್. ಅಶೋಕ್, ಬೈರತಿ ಬಸವರಾಜ್, ಗೋಪಾಲಯ್ಯ, ವಿ.ಸೋಮಣ್ಣ, ಶಾಸಕರಾದ ಸತೀಶ್ ರೆಡ್ಡಿ, ಉದಯ್ ಗರುಡಾಚಾರ್ ಮತ್ತು ಎಂ.ಕೃಷ್ಣಪ್ಪ ಭಾಗಿಯಾಗಿದ್ದರು.
ವಸತಿ ಸಚಿವ ವಿ.ಸೋಮಣ್ಣ ಇದು ನನ್ನ ಕಡೆಯ ಚುನಾವಣೆ ಎನ್ನುವ ಉಲ್ಲೇಖದೊಂದಿಗೆ ತಮ್ಮ ಹಿರಿತನ ವ್ಯಕ್ತಪಡಿಸಿದರು. ಸಚಿವನಾಗಿ ನಾನು ಹಿರಿಯನಿದ್ದೇನೆ. ಬೇರೆ ಕ್ಷೇತ್ರದಲ್ಲಿ ಸ್ರ್ಪಧಿಸಿಯೂ ಗೆಲ್ಲಬಲ್ಲೆ ಎಂದು ಕಂದಾಯ ಸಚಿವ ಅಶೋಕ್‍ಗೆ ಟಾಂಗ್ ನೀಡಿದರು ಎನ್ನಲಾಗಿದೆ.
ಇದಕ್ಕೆ ತೀಕ್ಷ್ಣವಾಗಿ ಸಭೆಯಲ್ಲೇ ಪ್ರತಿಕ್ರಿಯೆ ನೀಡಿದ ಅಶೋಕ್, ಬಿಜೆಪಿಯಲ್ಲಿ ನಾನು ನಿಮಗಿಂತ ಸೀನಿಯರ್ ಎನ್ನುವ ಪ್ರಸ್ತಾಪದೊಂದಿಗೆ ಬೆಂಗಳೂರು ಉಸ್ತುವಾರಿಯ ಅಪೇಕ್ಷೆ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ. ಉಭಯ ನಾಯಕರ ನಡುವೆ ಮಾತಿನ ಜಟಾಪಟಿ ನಡೆಯುತ್ತಿದ್ದಂತೆ ಹಿರಿಯ ನಾಯಕರು ವಿಷಯವನ್ನು ಮುಖ್ಯಮಂತ್ರಿಗಳ ವಿವೇಚನೆಗೆ ಬಿಡೋಣ. ಇಲ್ಲಿ ವ್ಯಕ್ತವಾದ ಅಭಿಪ್ರಾಯವನ್ನು ಅವರಿಗೇ ತಿಳಿಸೋಣ ಎಂಬ ನಿರ್ಧಾರ ಪ್ರಕಟಿಸುವ ಮೂಲಕ ಸೀನಿಯಾರಿಟಿ ಕಾಂಪ್ಲೆಕ್ಸ್ ವಿಷಯಕ್ಕೆ ತೆರೆ ಎಳೆಯಲಾಯಿತು.
ಬಿಬಿಎಂಪಿ ಚುನಾವಣೆ ಸಮಯದಲ್ಲಿ ಉಸ್ತುವಾರಿ ಸಚಿವರು ತಿಂಗಳುಗಟ್ಟಲೆ ನಗರದಲ್ಲೇ ಇದ್ದು ಪ್ರಚಾರ ಕಾರ್ಯ ನೋಡಿಕೊಳ್ಳಬೇಕು. ಸದ್ಯ ಮುಖ್ಯಮಂತ್ರಿಗಳು ಬೆಂಗಳೂರು ನಗರದ ಉಸ್ತುವಾರಿ ಸಚಿವರಾಗಿದ್ದಾರೆ. ಅವರು ರಾಜ್ಯ ಪ್ರವಾಸ ಮಾಡಬೇಕಾಗಲಿದೆ. ಹಾಗಾಗಿ ಚುನಾವಣೆವರೆಗಾದರೂ ಪೂರ್ಣ ಪ್ರಮಾಣದ ಸಮಯ ನೀಡುವ ಉಸ್ತುವಾರಿ ಸಚಿವರ ನೇಮಕ ಮಾಡುವಂತೆ ಬೆಂಗಳೂರು ಶಾಸಕರು ಪ್ರಸ್ತಾಪ ಮಾಡಿದರು.
ಸಿಎಂ ಬದಲು ಬೇರೊಬ್ಬರಿಗೆ ಉಸ್ತುವಾರಿ ಸಚಿವ ಸ್ಥಾನ ನೀಡಬೇಕು ಎಂಬ ವಿಷಯ ಪ್ರಸ್ತಾಪವಾಗುತ್ತಿದ್ದಂತೆ ಹಿರಿತನದ ಆಧಾರದ ವಿಷಯ ಚರ್ಚೆಗೆ ಬಂದು ಅಶೋಕ್ ಮತ್ತು ಸೋಮಣ್ಣನವರಲ್ಲಿ ಜಟಾಪಟಿ ನಡೆಯಿತು.