ಬೆಂಗಳೂರು,ಜ.17- ಹೋಟೆಲ್ ಮಾಲೀಕರು ಸೇರಿದಂತೆ ಯಾರ ಒತ್ತಡಕ್ಕೂ ಮಣಿಯಲಾಗದು. ತಜ್ಞರು ನೀಡುವ ಸಲಹೆಯಂತೆ ನಡೆದುಕೊಳ್ಳುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಿಗೊ ಸ್ವಲ್ಪ ಲಾಭವಾಗುತ್ತದೆ ಎಂದು ರಿಲಾಕ್ಸ್ ಮಾಡಿ ಲಕ್ಷಾಂತರ ಜನರನ್ನು ಕಷ್ಟಕ್ಕೆ ದೂಡುವುದಿಲ್ಲ. ವೀಕೆಂಡ್ ಕಫ್ರ್ಯೂ ಮುಂದುವರೆಸುವ ಮನಸ್ಥಿತಿ ನಮಗೂ ಇಲ್ಲ. ಸೋಂಕು ಹೆಚ್ಚಳವಾಗುತ್ತಿರುವುದರಿಂದ ಮಾರ್ಗಸೂಚಿ ಪಾಲಿಸಬೇಕಾಗಿದೆ ಎಂದರು.
ಸೋಂಕಿನ ಪ್ರಮಾಣ ಕಡಿಮೆಯಾದರೆ ರಿಲಾಕ್ಸ್ ಮಾಡಬಹುದು. ಸದ್ಯಕ್ಕೆ ಲಾಕ್‍ಡೌನ್ ಮಾಡುವ ವಿಚಾರ ಸರ್ಕಾರದ ಮುಂದಿಲ್ಲ. ಬೇರೆ ರಾಜ್ಯಗಳಲ್ಲಿ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿದೆ. ರಾಜ್ಯದಲ್ಲಿ ಕೋವಿಡ್ ಪ್ರಮಾ ಹೆಚ್ಚಾಗಿದ್ದರೂ ಸಾವಿನ ಪ್ರಮಾಣ ಕಡಿಮೆ ಇದೆ.
ಇಂದು ಸಂಜೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಕೋವಿಡ್ ಕುರಿತ ಸಭೆ ನಡೆಯಲಿದ್ದು, ವೈದ್ಯಕೀಯ ಸೌಲಭ್ಯಕ್ಕೆ ಸಂಬಂಸಿದಂತೆ ಚರ್ಚೆಯಾಗಲಿದೆ ಎಂದು ಹೇಳಿದರು.
ರ್ಯಾಲಿಯಲ್ಲಿ ಯಾರು ಮೊದಲಿರಬೇಕು, ಯಾರು ಹಿಂದಿರರಬೇಕು ಎಂಬ ಸ್ಪರ್ಧೆ ಕಾಂಗ್ರೆಸ್‍ನವರಲ್ಲಿತ್ತು. ಹೀಗಾಗಿ ಬೆಟ್ಟ ಅಗೆದು ಇಲಿ ಹಿಡಿದರು ಎಂದು ಇದೇ ಸಂದರ್ಭದಲ್ಲಿ ಟೀಕಿಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಮೇಲಾಟದ ಪಾದಯಾತ್ರೆ ಎಂದು ವ್ಯಂಗ್ಯವಾಡಿದರು.
ಈ ಹಿಂದೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಪಾದಯಾತ್ರೆ ಮಾಡಿದ್ದರು. ಆಗ ಕೋರ್ಟ್ ಕೂಡ ಛೀಮಾರಿ ಹಾಕಿತ್ತು ಎಂದು ಮೇಕೆದಾಟು ಪಾದಯಾತ್ರೆ ಬಗ್ಗೆ ಮಾಹಿತಿ ನೀಡಿದರು.
