ಈಶ್ವರಪ್ಪ ಮೇಲೆ ಹಲ್ಲೆಗೆ ಮುಂದಾಗಿದ್ದರು ಡಿಕೆಶಿ : ಸಚಿವ ಅಶ್ವಥ್ ನಾರಯಣ್

ಬೆಂಗಳೂರು, ಫೆ.24- ವಿಧಾನಮಂಡಲದ ಕಲಾಪ ನಡೆಯುವಾಗಲೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರ ಮೇಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಲ್ಲೆ ನಡೆಸಲು ಮುಂದಾಗಿದ್ದರು ಎಂದು ಸಚಿವ ಡಾ.ಸಿ.ಎನ್.ಅಶ್ವಥ್ ನಾರಯಣ್ ಗಂಭೀರ ಆರೋಪ ಮಾಡಿದ್ದಾರೆ.

ವಿಧಾನಮಂಡಲದ ಇತಿಹಾಸದಲ್ಲೇ ಎಂದೂ ಕೂಡ ಇಂತಹ ಘಟನೆ ನಡೆದಿರಲಿಲ್ಲ. ಡಿ.ಕೆ.ಶಿವಕುಮಾರ್, ಈಶ್ವರಪ್ಪನವರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದರಿಂದಲೇ ಜಂಟಿ ಅಧಿವೇಶನ ನಡೆಯದೆ ಅರ್ಧಕ್ಕೇ ಮೊಟಕಾಯಿತು. ಇದಕ್ಕೆ ಕಾಂಗ್ರೆಸ್‍ನವರೇ ನೇರ ಕಾರಣ ಎಂದು ಅವರು ಆರೋಪಿಸಿದರು.

ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನೂರಾರು ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಸದಸ್ಯರಿಗೆ ಅವೇಶನ ನಡೆಯುವಾಗ ಹೇಗೆ ನಡೆದುಕೊಳ್ಳಬೇಕೆಂಬ ಕನಿಷ್ಟ ಜ್ಞಾನವೂ ಇಲ್ಲ. ಡಿ.ಕೆ.ಶಿವಕುಮಾರ್ ಗೂಂಡಾಗಿರಿಯನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು.

ಡಿಕೆಶಿ ಈಶ್ವರಪ್ಪ ಅವರ ಮೇಲೆ ನೇರವಾಗಿ ಹಲ್ಲೆ ಮಾಡಲು ಮುಂದಾಗಿದ್ದರು. ಅವರ ರಕ್ಷಣೆಗೆ ನಮ್ಮ ಸದಸ್ಯರು ಮುಂದಾಗಿರಲಿಲ್ಲ ಎಂದರೆ ಸದನದಲ್ಲಿ ಏನು ಬೇಕಾದರೂ ಅನಾಹುತ ಸಂಭವಿಸಬಹುದಿತ್ತು. ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ ಮತ್ತು ಬಿ.ಕೆ.ಹರಿಪ್ರಸಾದ್ ಕೂಡ ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಇಡೀ ಕಲಾಪ ಹಾಳಾಗಲು ಕಾಂಗ್ರೆಸ್ ಕಾರಣ. ಅಧಿವೇಶನಕ್ಕೆ ವೆಚ್ಚವಾದ ಮೊತ್ತವನ್ನು ಅವರಿಂದಲೇ ವಸೂಲಿ ಮಾಡಬೇಕು. ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹೇಳಿರುವುದನ್ನು ನಾನು ಸ್ವಾಗತಿಸುತ್ತೇನೆ ಎಂದು ಅಶ್ವತ್ಥ್ ನಾರಾಯಣ್ ಹೇಳಿದರು.

ಕಾಂಗ್ರೆಸ್ ಪಕ್ಷ ಸಮಾಜದಲ್ಲಿ ಸಮಸ್ಯೆ, ಗೊಂದಲ, ದ್ವೇಷ ಉಂಟುಮಾಡುತ್ತಿದೆ. ಸುಳ್ಳು ವಿಚಾರವನ್ನೆ ಸತ್ಯ ಎಂದು ಹೇಳುತ್ತಿದೆ. ಹಿಜಾಬ್ ವಿಚಾರದಲ್ಲಿ ರಾಷ್ಟ್ರಧ್ವಜವನ್ನು ಇಳಿಸಿ ಕೇಸರಿ ಧ್ವಜವನ್ನು ಹಾರಿಸಿದ್ದಾರೆ ಎಂದು ಸುಳ್ಳು ಹೇಳಿಕೆ ನೀಡಿದರು ಎಂದು ಆರೋಪಿಸಿದರು.
ವಿಧಾನಮಂಡಲದ ಅಧಿವೇಶನ ಕರೆದಾಗ ಕಾರ್ಯ ಕಲಾಪ ನಡೆಯದಂತೆ ಸಮಯ ವ್ಯರ್ಥ ಮಾಡಿದ್ದಾರೆ.

ಅಧಿವೇಶನದ ಉದ್ದೇಶ ನಡೆಯದಂತೆ ಮಾಡಿದ್ದಾರೆ. ಹೇಗೆ ನಡೆದುಕೊಳ್ಳಬೇಕಿತ್ತೋ ಹಾಗೆ ಕಾಂಗ್ರೆಸ್ ಪಕ್ಷ ನಡೆದುಕೊಂಡಿಲ್ಲ. ಹಿರಿಯ ರಾಜಕಾರಣಿಗಳನ್ನು ಕಂಡ ಕಾಂಗ್ರೆಸ್ ಪಕ್ಷ ಆ ಸಂಸ್ಕøತಿಯನ್ನು ಉಳಿಸಿಕೊಳ್ಳಬೇಕಿತ್ತು. ಸರ್ಕಾರದ ತಪ್ಪು ಗುರುತಿಸಿ ಶಾಸನಾತ್ಮಕ ಸಲಹೆ ನೀಡುವುದು ಬಿಟ್ಟು ಸಮಯ ಹಾಳು ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕ್ಷುಲ್ಲಕ ವಿಚಾರ ಇಟ್ಟುಕೊಂಡು ಕಲಾಪ ಹಾಳು ಮಾಡಿದ್ದಾರೆ. ಹಿಜಾಬ್ ವಿಚಾರದಲ್ಲಿ ಸ್ಪಷ್ಟತೆ ನೀಡಿದರೂ ಅವರಿಗೆ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಹಿಜಾಬ್ ವಿಚಾರವನ್ನು ವಿಷಯಾಂತರ ಮಾಡಲು ಹೀಗೆಲ್ಲ ಮಾಡಿದ್ದಾರೆ ಎಂದು ಆರೋಪಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಅವಯಲ್ಲಿ ಹಿಂದೂ ಕಾರ್ಯಕರ್ತರ ಕೊಲೆ ಪ್ರಕರಣಗಳನ್ನು ನಾವು ಈಗ ಅವಲೋಕನ ಮಾಡುತ್ತಿದ್ದೇವೆ. ನೊಂದ ಕುಟುಂಬಗಳಿಗೆ ನ್ಯಾಯ ಒದಗಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತದೆ. ಹತ್ಯೆಯಾದವರ ಕುಟುಂಬಗಳ ಜೊತೆಯಲ್ಲಿ ನಮ್ಮ ಕಾರ್ಯಕರ್ತರು ಸಂಪರ್ಕದಲ್ಲಿ ಇದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ವಿಚಾರವಾಗಿ ನಾವು ಎಂದೂ ಕಾವೇರಿ ವಿಚಾರದಲ್ಲಿ ರಾಜಕಾರಣ ಮಾಡಲಿಲ್ಲ. ಮೇಕೆದಾಟು ಯೋಜನೆಯನ್ನು ಅನುಷ್ಠಾನ ಮಾಡುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಜನರಿಗೆ ನೀರು ಕೊಡುವ ಸದುದ್ದೇಶ ಅವರಿಗಿಲ್ಲ ಎಂದು ದೂರಿದರು.
ನಮ್ಮ ಸರ್ಕಾರ ಬಂದ ಮೇಲೆ ಡಿಪಿಆರ್ ಆಗಿದೆ. ಯಾವ ಜನ್ಮಕ್ಕೂ ಮೇಕೆದಾಟು ಯೋಜನೆ ಅನುಷ್ಠಾನ ಮಾಡಲು ಕಾಂಗ್ರೆಸ್‍ಗೆ ಸಾಧ್ಯವಿಲ್ಲ. ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ ಇದೆ. ಮೇಕೆದಾಟು ಅನುಷ್ಠಾನಕ್ಕೆ ನಾವು ಬದ್ಧರಿದ್ದೇವೆ ಎಂದು ತಿಳಿಸಿದರು.

ನೀರಾವರಿ ಯೋಜನೆ ಆಗಿದ್ದರೆ ನಮ್ಮ ಅವಯಲ್ಲಿ ರಾಮನಗರದಲ್ಲಿ ಶೇ.2.5 ಮಾತ್ರ ನೀರಾವರಿ ಪ್ರದೇಶ ಇದೆ. ಮಾರ್ಗಸೂಚಿ ಪ್ರಕಾರ ಶೇ.25ರಷ್ಟು ನೀರಾವರಿ ಪ್ರದೇಶ ಇರಬೇಕು. ಮಾಗಡಿಯಲ್ಲಿ ಶೇ.8ರಷ್ಟು ಮಾತ್ರ ನೀರಾವರಿ ಪ್ರದೇಶ ಇದೆ ಎಂದರು.

ಕಾಂಗ್ರೆಸ್‍ನವರು ಎಷ್ಟು ಬಾರಿ ರಾಜಕಾರಣಕ್ಕೆ ಬಂದಿದ್ದಾರೆ. ನೀರಾವರಿ ಬಗ್ಗೆ ಏನಾದರೂ ಕ್ರಮ ಕೈಗೊಂಡಿದ್ದಾರಾ ಎಂದು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಮುಖಂಡ ಛಲವಾದಿ ನಾರಾಯಣಸ್ವಾಮಿ ಉಪಸ್ಥಿತರಿದ್ದರು.