ಬೆಂಗಳೂರು,ಜ.11- ಬಂಡತನ ಮತ್ತು ಬಂಡೆತನ ಯಾರಿಗೂ ಕೂಡ ಶೋಭೆ ತರುವುದಿಲ್ಲ ಎಂದು ಹೇಳುವ ಮೂಲಕ ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ ಅವರು ಮತ್ತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಯೊಂದಕ್ಕೂ ಇತಿಮಿತಿ ಇರುತ್ತದೆ. ಯಾರೂ ಕಾನೂನಿಗಿಂತ ದೊಡ್ಡವರಲ್ಲ ಬಂಡತನ ಮತ್ತು ಬಂಡೆತನ ತೋರಿದರೆ ಸರ್ಕಾರ ಕೈ ಕಟ್ಟಿ ಕೂರಲು ಸಾಧ್ಯವಿಲ್ಲ ಎಂದು ಗುಡುಗಿದರು.
ಸರ್ಕಾರವೇ ಹೆಚ್ಚುವರಿ ಜಿಲ್ಲಾಧಿಕಾರಿಯವರನ್ನು ಕಳುಹಿಸಿ ಸೋಂಕಿತರನ್ನಾಗಿ ಮಾಡುತ್ತಾರೆ ಎಂಬ ಡಿ.ಕೆ.ಶಿವಕುಮಾರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲಿ ಯಾರೂ ಬೇಕಾದರೂ ಸೋಂಕಿತರಾಗಬಹುದು. ಇದನ್ನು ಪರೀಕ್ಷೆಗೊಳಪಡಿಸಿದಾಗ ಸತ್ಯಾಂಶ ಗೊತ್ತಾಗುತ್ತದೆ. ಅಷ್ಟಕ್ಕೂ ಅವರಿಗೆ ಸೋಂಕು ತಂದು ಸರ್ಕಾರಕ್ಕೆ ಆಗಬೇಕಾದ ಕೆಲಸವಾದರೂ ಏನು ಎಂದರು.
ಡಿ.ಕೆ.ಶಿವಕುಮಾರ್ ತಮ್ಮ ಪಾದಯಾತ್ರೆಯನ್ನು ಸಮರ್ಥಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಇದು ಒಬ್ಬ ಹಿರಿಯರಾಗಿ ಅವರಿಗೆ ಶೋಭೆ ತರುವಂತದ್ದಲ್ಲ. ಸರ್ಕಾರಿ ನಿಯಮಗಳನ್ನು ಎಲ್ಲರೂ ಪಾಲನೆ ಮಾಡಬೇಕು ಎಂದರು.
ಸಿಎಂ ಜೊತೆ ಇದ್ದ ನೀವು ಏಕೆ ಕ್ವಾರಂಟೈನ್ ಆಗಿಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ , ನಿನ್ನೆ ಮುಖ್ಯಮಂತ್ರಿಗಳ ಕಚೇರಿಗೆ ತೆರಳಿದ್ದೆ. ಕೇಂದ್ರದಿಂದ ಮಾರ್ಗಸೂಚಿ ಬಂದಿರುವುದರಿಂದ ಅದನ್ನು ನಿರ್ವಹಣೆ ಮಾಡಬೇಕಾಗುತ್ತದೆ ಎಂದು ಸಮರ್ಥಿಸಿಕೊಂಡರು.
ರಾಜ್ಯದಲ್ಲಿ ಕೊರೊನಾ ಸಂಖ್ಯೆ ಹೆಚ್ಚಳವಾದಾಗ ನಾನು ಸರ್ಕಾರದ ಭಾಗವಾಗಿ ಕೈ ಕಟ್ಟಿ ಕೂರಲು ಸಾಧ್ಯವಿಲ್ಲ. ಒಂದು ವೇಳೆ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡರೆ ಐಸೋಲೇಟ್ ಆಗುತ್ತೇನೆ. ಇದರ ಬಗ್ಗೆ ಯಾರಿಗೂ ಅನುಮಾನ ಬೇಡ ಎಂದು ಹೇಳಿದರು.
