ಸಿಎಂ ಎದುರೆ ಸಚಿವ ಅಶ್ವಥ್ ನಾರಾಯಣ್ – ಸಂಸದ ಡಿ.ಕೆ.ಸುರೇಶ್ ಜಟಾಪಟಿ

Social Share

ಬೆಂಗಳೂರು,ಜ.3- ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ್ ಹಾಗೂ ಸಂಸದ ಡಿ.ಕೆ.ಸುರೇಶ್ ನಡುವೆ ಮಾತಿನ ಜಟಾಪಟಿ ನಡೆದು ಕೈ ಕೈ ಮಿಲಾಯಿಸುವ ಹಂತ ತಲುಪಿದ ಘಟನೆ ರಾಮನಗರದಲ್ಲಿಂದು ನಡೆದಿದೆ. ರಾಮನಗರದಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಂದು ಸರ್ಕಾರದ ವತಿಯಿಂದ ಹಮ್ಮಿಕೊಂಡಿದ್ದ ಅಂಬೇಡ್ಕರ್ ಹಾಗೂ ನಾಡಪ್ರಭು ಕೆಂಪೇಗೌಡ ಪ್ರತಿಮೆಗಳ ಅನಾವರಣ ಮತ್ತು ವಿವಿಧ ಅಭಿವೃದ್ದಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಈ ಅಹಿತಕರ ಘಟನೆ ನಡೆದಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿಯೇ ಸಚಿವರು , ಸಂಸದರು, ವಿಧಾನಪರಿಷತ್ ಸದಸ್ಯರು ಪರಸ್ಪರ ವಾಗ್ದಾಳಿ ನಡೆಸಿ ಒಬ್ಬರ ಮೇಲೊಬ್ಬರು ಹಲ್ಲೆ ನಡೆಸುವ ರೀತಿಯಲ್ಲಿ ವರ್ತಿಸಿದ ಘಟನೆ ವ್ಯಾಪಕ ಟೀಕೆಗೆ ಗುರಿಯಾಗಿದೆ. ಉದ್ಘಾಟನಾ ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್‍ನಾರಾಯಣ ಮಾತನಾಡುವ ಸಂದರ್ಭದಲ್ಲಿ, ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಪರ ಕೆಲವರು ಘೋಷಣೆಗಳನ್ನು ಕೂಗಲಾರಂಭಿಸಿದರು.
ಈ ವೇಳೆ ಘೋಷಣೆ ಕೂಗಿದರೆ ಸಾಲದು ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು. ವೈಯಕ್ತಿಕವಾಗಿ ಅಭಿವೃದ್ಧಿಯಾದರೆ ಸಾಲದು. ಇಲ್ಲಿ ಅಭಿವೃದ್ದಿಯನ್ನು ಯಾರೂ ಮಾಡಿಲ್ಲ. ನಮ್ಮ ಬಿಜೆಪಿ ಪಕ್ಷ ಮಾತ್ರ ಅಭಿವೃದ್ದಿ ಮಾಡುತ್ತಿದೆ ಎಂದು ಸಚಿವ ಅಶ್ವಥ್ ನಾರಾಯಣ ತಮ್ಮ ಭಾಷಣದಲ್ಲಿ ಹೇಳಿದರು.
ಈ ಮಾತಿನಿಂದ ಸಿಟ್ಟಾದ ಸಂಸದ ಡಿ.ಕೆ.ಸುರೇಶ್ ಅವರು ಪ್ರಶ್ನಿಸಲು ಅಶ್ವಥ್ ನಾರಾಯಣ ಬಳಿ ಹೋದರು. ಈ ಸಂದರ್ಭದಲ್ಲಿ ಇಬ್ಬರ ನಡುವೆ ಪರಸ್ಪರ ಏರುಧ್ವನಿಯಲ್ಲಿ ಬಿರುಸಿನ ಮಾತುಕತೆಗಳು ನಡೆದವು. ಸಂಸದ ಡಿ.ಕೆ.ಸುರೇಶ್ ಅವರು, ಏನು ಅಭಿವೃದ್ದಿ ಮಾಡಿದ್ದೀರಾ? ನಾವೇನು ಮಾಡಿಲ್ಲವೇ? ಎಂದು ಪ್ರಶ್ನಿಸಿದರು.
ಡಿ.ಕೆ.ಸುರೇಶ್ ಅವರಿಗೆ ಪರಿಷತ್ ಸದಸ್ಯ ರವಿ ಅವರು ಸಾಥ್ ನೀಡಿದರು. ಇದಕ್ಕೆ ಪ್ರತಿಯಾಗಿ ಅಶ್ವಥ್ ನಾರಾಯಣ ಅವರು ಡಿ.ಕೆ.ಸುರೇಶ್ ಅವರಿಗೆ ಮುಖಾಮುಖಿಯಾಗಿ ಪ್ರತ್ಯುತ್ತರಿಸಿದರು. ಮಧ್ಯಪ್ರವೇಶಿಸಿದ ವಿಧಾನಪರಿಷತ್ ಸದಸ್ಯ ರವಿ ಅವರು ಮೈಕ್ ಮೂಲಕ ಕೆಲ ಸ್ಪಷ್ಟನೆಗಳನ್ನು ನೀಡಲು ಹೋದಾಗ ಸಚಿವ ಅಶ್ವಥನಾರಾಯಣ ಅದಕ್ಕೆ ಅಡ್ಡಿಪಡಿಸಿ ಮೈಕ್ ಕಿತ್ತುಕೊಂಡರು. ಈ ಹಂತದಲ್ಲಿ ಪರಸ್ಪರ ಬಲಪ್ರಯೋಗಗಳು ನಡೆದವು.
ತಕ್ಷಣವೇ ರಕ್ಷಣಾ ಸಿಬ್ಬಂದಿಗಳು ಮಧ್ಯಪ್ರವೇಶ ಮಾಡಿದರು. ಕೊಂಚ ಮಟ್ಟಿನ ತಳ್ಳಾಟ ನೂಟಕಾಟ ಕೂಡ ನಡೆಯಿತು. ಡಿ.ಕೆ.ಸುರೇಶ್ ಅವರು ವೇದಿಕೆ ಮುಂಭಾಗ ಧರಣಿ ನಡೆಸಲು ಮುಂದಾದರು. ಆಗ ವೇದಿಕೆಯಲ್ಲಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮಾಧಾನ ಮಾಡಿ ತಾವು ರಾಮನಗರಕ್ಕೆ ಮೊದಲ ಬಾರಿ ಆಗಮಿಸಿದ್ದು, ಅನಗತ್ಯ ಗೊಂದಲ ಮಾಡಬೇಡಿ. ಅಭಿವೃದ್ಧಿ ವಿಷಯದಲ್ಲಿ ಎಲ್ಲರೂ ಜೊತೆಯಾಗಿ ಹೋಗೋಣ ಎಂದು ತಿಳಿ ಹೇಳಿದರು. ನಂತರ ಪರಿಸ್ಥಿತಿ ತಹಬದಿಗೆ ಬಂದಿತು.
ನಂತರ ಡಿ.ಕೆ.ಸುರೇಶ್ ಅವರು ಸಮಾಧಾನಗೊಂಡು ವೇದಿಕೆಯಲ್ಲಿ ಭಾಷಣ ಮಾಡಿದರು. ನಂತರ ಕಾರ್ಯಕ್ರಮ ಮುಂದುವರೆಯಿತು.

Articles You Might Like

Share This Article