ಉತ್ತಮವಾಗಿರುವವರಿಗೆ ಮಸಿ ಬಳಿಯುವ ಪ್ರಯತ್ನ : ಸಚಿವ ಅಶ್ವಥ್‍ನಾರಾಯಣ್

ಬೆಂಗಳೂರು, ಸೆ.20- ಉತ್ತಮವಾಗಿರುವವರಿಗೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಸುಳ್ಳು ಆರೋಪ ಮಾಡುವವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಸಚಿವ ಡಾ.ಸಿ.ಎನ್.ಅಶ್ವಥ್‍ನಾರಾಯಣ್ ಎಚ್ಚರಿಕೆ ನೀಡಿದರು.

ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಪಿ.ಆರ್.ರಮೇಶ್ ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವರು ರಾಜಾಜೀನಗರದ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ)ಗೆ ಅಗತ್ಯ ಸಲಕರಣೆ ಹಾಗೂ ಉಪಕರಣಗಳ ಖರೀದಿಯಲ್ಲಿ 30 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ. ಮಾರುಕಟ್ಟೆ ದರ ಮೀರಿ ಹೆಚ್ಚಿನ ಬೆಲೆಗೆ ಸಲಕರಣೆಗಳನ್ನು ಖರೀದಿಸಲಾಗಿದೆ.

ಪಾರದರ್ಶಕ ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದರು.ಅದಕ್ಕೆ ಸಿಟ್ಟಾದ ಸಚಿವ ಅಶ್ವಥನಾರಾಯಣ ಅವರು, ಇಲ್ಲಿ ನಿಯಮ ಪಾಲನೆ ಮಾಡಿರುವುದೇ ಸಮಸ್ಯೆಯಾಗಿದೆ. ಮಾರುಕಟ್ಟೆ ದರಕ್ಕೂ ಮೀರಿ ಯಾವುದೇ ಖರೀದಿ ಮಾಡಿಲ್ಲ. ರಾಜಕಾರಣದಲ್ಲಿ ಪರಿಶುದ್ಧವಾಗಿರ ಮೇಲೆ ಸುಳ್ಳು ಆರೋಪ ಮಾಡಬಾರದು. ರಾಜಕೀಯವಾಗಿ ಬೆಳೆಯುತ್ತಿದ್ದಾರೆ ಎಂದರೆ ತೇಜೋವಧೆ ಮಾಡಲಾಗುತ್ತಿದೆ ಎಂದರು.

ಇದರಲ್ಲಿ ಹಗರಣ ನಡೆದಿದೆ ತನಿಖೆಯಾಗಲೇಬೇಕು, ಸದನ ಸಮಿತಿ ರಚನೆ ಮಾಡಿ, ಇಲ್ಲವೇ ತಾಂತ್ರಿಕ ಸಾಮಥ್ರ್ಯ ಇರುವ ಸಂಸ್ಥೆಗಳಿಂದ ತನಿಖೆ ಮಾಡಿ ಎಂದು ಒತ್ತಾಯಿಸಿದರು.

ಎಲ್ಲದಕ್ಕೂ ತನಿಖೆ ಮಾಡುತ್ತಾ ಹೋದರೆ ಸರ್ಕಾರ ಯಾವುದೇ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಸಚಿವ ಸುಧಾಕರ್ ಹೇಳುವ ಮೂಲಕ ತಮ್ಮ ಸಹದ್ಯೋಗಿಯ ನೆರವಿಗೆ ಬಂದರು.
ಅದಕ್ಕೆ ಪ್ರತಿಪಕ್ಷಗಳ ಕಡೆಯಿಂದ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್, ಸಚೇತಕ ಎಂ.ನಾರಾಯಣಸ್ವಾಮಿ, ಸಿ.ಎಂ.ಇಬ್ರಾಹಿಂ ಮತ್ತಿತರರು ಆಕ್ಷೇಪ ವ್ಯಕ್ತ ಪಡಿಸಿ ತನಿಖೆಗೆ ಒತ್ತಾಯಿಸಿದರು.

ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಇದು ಕೆಲ ಕಾಲ ಗದ್ದಲಕ್ಕೆ ಕಾರಣವಾಯಿತು. ಈ ವಿಷಯವನ್ನು ಅರ್ಧ ಗಂಟೆ ಕಾಲ ಚರ್ಚೆಗೆ ಅವಕಾಶ ನೀಡುವುದಾಗಿ ಭರವಸೆ ನೀಡಿ ಸಭಾಪತಿ ಅವರು ವಾತಾವರಣವನ್ನು ತಿಳಿಗೊಳಿಸಿದರು.

Sri Raghav

Admin