ನಾಯಕರಾಗಲು ಕಾಂಗ್ರೆಸ್‍ನ ತ್ರಿಮೂರ್ತಿಗಳ ನಡುವೆ ಪೈಪೋಟಿ : ಸಚಿವ ಅಶ್ವತ್ಥನಾರಾಯಣ

Social Share

ಬೆಂಗಳೂರು,ಜ.10- ನಾಯಕರಾಗಲು ಕಾಂಗ್ರೆಸ್‍ನ ತ್ರಿಮೂರ್ತಿಗಳ ನಡುವೆ ಪೈಪೋಟಿ ನಡೆಯುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಟೀಕಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಚೂಣಿಗೆ ಬರಲ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಚಿವ ಎಂ.ಬಿ.ಪಾಟೀಲ್ ನಡುವೆ ಪೈಪೋಟಿ ನಡೆಯುತ್ತಿದೆ ಎಂದು ಆರೋಪಿಸಿದರು.
ರಾಮನಗರ ಜಿಲ್ಲೆಯ ನೀರಾವರಿ ಯೋಜನೆಗಳ ಬಗ್ಗೆ ಏನು ಮಾಡಿದ್ದಾರೆ? ಎಷ್ಟು ಬಾರಿ ಭೇಟಿ ನೀಡಿದ್ದರು. ಮೇಕೆದಾಟು ಯೋಜನೆಗೆ ಏನೇನು ಮಾಡಿದ್ದರು ಎಂಬುದನ್ನು ಕಾಂಗ್ರೆಸಿಗರು ಬಹಿರಂಗಪಡಿಸಲಿ. ಕಾಂಗ್ರೆಸ್ ಪಾದಯಾತ್ರೆ ಸೆಲ್ ಪ್ರಮೋಷನ್ ಪ್ರೋಗ್ರಾಮ್ ಆಗಿದ್ದು, ಡಿ.ಕೆ.ಶಿವಕುಮಾರ್ ತಮ್ಮ ಪ್ರಮೋಷನ್‍ಗಾಗಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಸ್ವಾಬ್ ಪರೀಕ್ಷೆಗೆ ಬಂದ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಶಿವಕುಮಾರ್ ಸಹಕರಿಸಬೇಕಿತ್ತು. ಸಾಂಕ್ರಾಮಿಕ ರೋಗದ ಕಾಯ್ದೆ ಪ್ರಕಾರ ಅವರು ಕಡ್ಡಾಯವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಜನರ ಗುಂಪಿನಲ್ಲಿ ಇರುವುದರಿಂದ ಸೋಂಕಿತರಿದ್ದರೆ ರೋಗ ಹರಡುವಿಕೆ ಸಾಧ್ಯತೆ ಇದೆ. ಹೀಗಾಗಿ ಇಷ್ಟವಿರಲಿ, ಇಲ್ಲದಿರಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು.
ಪಾದಯಾತ್ರೆ ಬೇಡ ಎಂದು ಮನವಿ ಮಾಡಿದರೂ ಕೋವಿಡ್ ನಿಯಮ ಉಲ್ಲಂಘಿಸಿ ಮಾಡಲಾಗುತ್ತಿದೆ. ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ಮೇಕೆದಾಟು ಯೋಜನೆಗೆ ಸರ್ಕಾರ ಬದ್ದವಾಗಿದ್ದರೂ ಕಾಂಗ್ರೆಸ್ ರಾಜಕೀಯದ ನಾಟಕವಾಡಲು ಹೊರಟಿದ್ದಾರೆ ಎಂದು ಟೀಕಿಸಿದರು.  ಕಾಂಗ್ರೆಸ್‍ನವರ ನಡವಳಿಕೆಯಿಂದ ಜನರು ಬೇಸತ್ತಿದ್ದಾರೆ. ನಿಯಮ ಉಲ್ಲಂಘಿಸಿದವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲಾಗುತ್ತಿದೆ ಎಂದರು.

Articles You Might Like

Share This Article