ಕೋವಿಡ್ ವಿಚಾರದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ: ಗೃಹ ಸಚಿವ ಬೊಮ್ಮಾಯಿ

ಬೆಂಗಳೂರು,ಏ.20- ರಾಜ್ಯದಲ್ಲಿ ಸೋಂಕು ಹೆಚ್ಚುತ್ತಿರುವ ಸಂದರ್ಭದಲ್ಲಿ ಕೋವಿಡ್ ವಿಚಾರದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ಎಲ್ಲರೂ ಸೇರಿ ರೋಗವನ್ನು ಹೇಗೆ ನಿಯಂತ್ರಿಸಬೇಕು ಎಂಬ ಬಗ್ಗೆ ಲಕ್ಷ್ಯ ವಹಿಸಬೇಕು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರು ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ರೋಗ ನಿಯಂತ್ರಣದಲ್ಲಿ ಸಫಲತೆ ಕಾಣಲು ಸಾಧ್ಯ. ಕೇವಲ ತಪ್ಪು ಕಂಡು ಹಿಡಿಯುವುದರಿಂದ ಉಪಯೋಗವಿಲ್ಲ ಎಂದರು.

ಇಂದು ಸಂಜೆ ರಾಜ್ಯಪಾಲರು, ವಿರೋಧ ಪಕ್ಷಗಳ ನಾಯಕರೂ ಸೇರಿದಂತೆ ಸರ್ವಪಕ್ಷಗಳ ನಾಯಕರ ಸಭೆ ಕರೆದಿರುವ ಬಗ್ಗೆ ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಜಾರಿಗೆ ಬರುವ ರೀತಿ ಕಾಣುತ್ತಿದೆ ಎಂದು ಟೀಕಿಸಿರುವುದು ಸರಿಯಲ್ಲ. ರಾಜ್ಯದಲ್ಲಿ ಚುನಾಯಿತ ಸರ್ಕಾರವಿದ್ದಾಗ ರಾಷ್ಟ್ರೀಯ ಪಕ್ಷವೊಂದರ ರಾಜ್ಯಾಧ್ಯಕ್ಷರಾದವರು ಈ ರೀತಿಯ ಹೇಳಿಕೆ ನೀಡುವುದು ಸಮಂಜಸವಲ್ಲ ಎಂದು ಟೀಕಿಸಿದರು.

ಪ್ರಧಾನಿ ನರೇಂದ್ರಮೋದಿ ಅವರು ಎಲ್ಲ ರಾಜ್ಯಗಳ ರಾಜ್ಯಪಾಲರೊಂದಿಗೆ ಮಾತನಾಡಿ ಕೋವಿಡ್ ನಿಯಂತ್ರಣಕ್ಕೆ ಸಂಬಂಸಿದಂತೆ ಸರ್ಕಾರ ಹಾಗೂ ವಿರೋಧ ಪಕ್ಷಗಳ ಜೊತೆ ಸಮಾಲೋಚನೆ ನಡೆಸುವಂತೆ ಸೂಚನೆ ಕೊಟ್ಟಿದ್ದಾರೆ. ಆ ಹಿನ್ನೆಲೆಯಲ್ಲಿ ರಾಜ್ಯಪಾಲರು ಸಭೆ ನಡೆಸುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಅಲ್ಲಿ ರಾಜ್ಯಪಾಲರು ಸಭೆ ನಡೆಸಿದರೆ ರಾಜ್ಯಪಾಲರ ಆಡಳಿತ ಬಂದತಾಯಿತೇ? ಮಹಾರಾಷ್ಟ್ರದಲ್ಲಿ ಸಮ್ಮಿಶ್ರ ಸರ್ಕಾರವಿದೆ. ಅಲ್ಲಿ ರಾಜ್ಯಪಾಲರು ಸಭೆ ನಡೆಸಿದರೆ ರಾಜ್ಯಪಾಲರ ಆಡಳಿತ ಎಂದು ಭಾವಿಸಬೇಕೆ? ಪ್ರತಿಯೊಂದು ವಿಚಾರದಲ್ಲೂ ರಾಜಕಾರಣ ಮಾಡುವುದು ಸರಿಯಲ್ಲ. ಮೊಸರಲ್ಲಿ ಕಲ್ಲು ಹುಡುಕಬಾರದು ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.

ಕೋವಿಡ್ ಸೋಂಕು ಕಳೆದ ಬಾರಿಗಿಂತ ವೇಗವಾಗಿ ಹರಡುತ್ತಿದೆ. ಕೇವಲ ಮೂರು ವಾರದಲ್ಲಿ ತೀವ್ರವಾಗಿ ಹೆಚ್ಚಳವಾಗಿದೆ. ಆದರೂ ಸಾವಿರಾರು ಜನರಿಗೆ ಹಾಸಿಗೆ ಹಾಗೂ ಚಿಕಿತ್ಸಾ ಸೌಲಭ್ಯವನ್ನು ಒದಗಿಸಲಾಗಿದೆ. ಆಮ್ಲಜನಕ ಕೊರತೆ ಹಿನ್ನೆಲೆಯಲ್ಲಿ ಆಮ್ಲಜನಕ ಉತ್ಪಾದಕರೊಂದಿಗೆ ಮಾತುಕತೆ ನಡೆಸಿ ಕೊರತೆ ನೀಗಿಸಲು ಪ್ರಯತ್ನಿಸಲಾಗಿದೆ. ಸಾಂಕ್ರಾಮಿಕ ಕೊರೊನಾ ನಿಯಂತ್ರಿಸಲು ಎಲ್ಲರೂ ಒಟ್ಟಾಗಿ ಕೆಲಸ ನಿರ್ವಹಿಸಬೇಕಾದ ಸಂದರ್ಭ ಇದು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.