ಪಾದಯಾತ್ರೆಯಿಂದ ಪ್ರಾಣಸಂಕಟ ತರಬೇಡಿ : ಸಚಿವ ಸಿ.ಸಿ.ಪಾಟೀಲ್‍

Social Share

ಬೆಂಗಳೂರು,ಜ.11- ಜನಪರ ಯೋಜನೆಗಳ ಅನುಷ್ಠಾನದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಪರಸ್ಪರ ಸಹಮತದಿಂದ ಮತ್ತು ಸಂಯಮದಿಂದ ಮುಂದುವರೆಯಬೇಕು, ಇದನ್ನು ಬಿಟ್ಟು ರಾಜಕೀಯ ಲಾಭಕ್ಕಾಗಿ ವಿರೋಧ ಪಕ್ಷವಾದ ಕಾಂಗ್ರೆಸ್ ಕೋವಿಡ್ ನಂತಹ ಸಂಕಷ್ಟದ ಸಂದರ್ಭದಲ್ಲಿಯೂ ಪಾದಯಾತ್ರೆ ನಡೆಸುವ ಮೂಲಕ ಸರ್ಕಾರದೊಂದಿಗೆ ಸಂಘರ್ಷಕ್ಕಿಳಿದಿರುವುದು ಖಂಡನೀಯ.
ಇದರಿಂದ ಮುಂದೆನಾದರೂ ಕೋವಿಡ್ ಮತ್ತಷ್ಟು ವ್ಯಾಪಿಸಿದರೆ ಇದಕ್ಕೆ ಕಾಂಗ್ರೆಸ್ಸೇ ಹೊಣೆಯಾಗಿ ಜನರ ಶಾಪಕ್ಕೆ ತುತ್ತಾಗಬೇಕಾಗುತ್ತದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್‍ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ದೇಶವೇ ಈಗ ಕೋವಿಡ್ ನ ಮೂರನೇ ಅಲೆಗೆ ತತ್ತರಿಸುತ್ತಿದೆ. ಕರ್ನಾಟಕದಲ್ಲಿಯೂ ಈ ಪ್ರಕರಣಗಳು ಈಗ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ತಾತ್ಕಾಲಿಕ ಲಾಕ್‍ಡೌನ್ ಮತ್ತು ಕಫ್ರ್ಯೂ ಸೇರಿದಂತೆ ಹಲವಾರು ಮುಂಜಾಗೃತಾ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ.
ಸಾರ್ವಜನಿಕರೂ ಇದಕ್ಕೆ ಸಹಕರಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಮುಖಂಡರು ಮಾತ್ರ ಇವುಗಳನ್ನೆಲ್ಲ ಗಾಳಿಗೆ ತೂರಿ ಸಹಸ್ರಾರು ಮಂದಿಯನ್ನು ಪಾದಯಾತ್ರೆಯಲ್ಲಿ ಸೇರಿಸಿ ವೈಭವೋಪೇತವಾಗಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿರುವುದರಿಂದ ಅಮಾಯಕರ ಆರೋಗ್ಯಕ್ಕೆ ಅಪಾಯ ತಂದೊಡ್ಡುವುದು ಆತಂಕಕಾರಿಯಾಗಿದೆ. ಈ ಕುರಿತು ಆ ಪಕ್ಷದ ಹಿರಿಯ ಮುಖಂಡರಿಗೆ ಪಾಪಪ್ರಜ್ಞಾಯೂ ಇಲ್ಲದಿರುವುದು ವಿಷಾದನೀಯ ಎಂದು ಪಾಟೀಲರು ತಿಳಿಸಿದ್ದಾರೆ.
ಎಲ್ಲಾ ಸುರಕ್ಷಿತ ನಿಯಮಗಳನ್ನು ಪಾಲಿಸಲಾಗುವುದು ಎಂದು ಪಾದಯಾತ್ರೆಗೂ ಮುಂಚೆ ಕಾಂಗ್ರೆಸ್ ಮುಖಂಡರು ಹಾದಿ ತಪ್ಪಿಸುವಂತೆ ಹೇಳಿಕೆ ನೀಡಿದ್ದರು. ಆದರೆ ಪ್ರಸ್ತುತ ಪಾದಯಾತ್ರೆಯಲ್ಲಿ ಇದು ಸ್ವಲ್ಪವೂ ಪಾಲನೆಯಾಗಿಲ್ಲ.
ಇವರು ಹೇಳುವುದು ಒಂದು -ಮಾಡುವುದು ಇನ್ನೊಂದು ಎಂಬಂತಾದರೆ ಪಾಪ ಅಮಾಯಕರ ಪ್ರಾಣದ ಜೊತೆಗೇ ಚೆಲ್ಲಾಟವಾಡಿದಂತಲ್ಲವೇ? ಈ ರೀತಿ ಹಟಕ್ಕೆ ಬಿದ್ದು ಮತ್ತಷ್ಟು ಬಿಕ್ಕಟ್ಟು ಸೃಷ್ಟಿಸಿದರೆ ಕಾಂಗ್ರೆಸ್ಸಿಗೆ ಲಾಭ ಎಂಬ ಲೆಕ್ಕಾಚಾರದಲ್ಲಿ ಅವರು ಇರಬಹುದು,ಆದರೆ ಇದರಿಂದ ರಾಜ್ಯದ ಹಿತಕ್ಕೆ ಸಂಚಕಾರ ತಂದಂತಾಗುವುದಿಲ್ಲವೇ? ಎಂದು ಅವರು ಕಾಂಗ್ರೆಸ್ ಮುಖಂಡರನ್ನು ಪ್ರಶ್ನಿಸಿದ್ದಾರೆ.

Articles You Might Like

Share This Article