ಕಾಂಗ್ರೆಸ್ ನಾಯಕರು ಪ್ರತಿಭಟಿಸುವ ಬದಲು ಪ್ರವಾಹ ಪೀಡಿತ 10 ಗ್ರಾಮ ದತ್ತು ಪಡೆಯಲಿ :ಸಿ.ಟಿ.ರವಿ

ಬೆಂಗಳೂರು,ಸೆ.18-ಕಾಂಗ್ರೆಸ್ ನಾಯಕರು ಪ್ರತಿಭಟನೆ ಮಾಡುವ ಬದಲು ಪ್ರವಾಹ ಪೀಡಿತ ಪ್ರದೇಶಗಳ 10 ಗ್ರಾಮಗಳನ್ನು ದತ್ತು ಪಡೆಯಲಿ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಿಳಿಸಿದರು.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆ ಸಂತ್ರಸ್ತರಿಗೆ ಪರಿಹಾರ ದೊರಕಿಲ್ಲ ಎಂದು ಪ್ರತಿಭಟನೆ ಮಾಡುವ ಬದಲು ಅವರ ಅಭಿವೃದ್ದಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಲಿ. ರಾಜ್ಯ ಸರ್ಕಾರದ ಅಧಿಕಾರಿಗಳು ದೆಹಲಿಗೆ ತೆರಳಿದ್ದು, ಶೀಘ್ರದಲ್ಲೇ ಪರಿಹಾರ ಧನ ಬಿಡುಗಡೆಯಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ ಅವರು ಎಂದೂ ಅಭಿವೃದ್ದಿ ವಿಚಾರದಲ್ಲಿ ರಾಜಕೀಯ ಅಥವಾ ಪಕ್ಷಪಾತ ಮಾಡುವುದಿಲ್ಲ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ನೆರೆ ಸಂತ್ರಸ್ತರಿಗೆ 3,600 ರೂ. ಪರಿಹಾರ ನೀಡಲಾಗಿತ್ತು. ಈಗ ತಲಾ 10 ಸಾವಿರ ರೂ. ವಿತರಣೆ ಮಾಡಿದ್ದೇವೆ.

ಮನೆ ನಿರ್ಮಾಣಕ್ಕಾಗಿ ಮೊದಲ ಹಂತದಲ್ಲಿ ತಲಾ ಒಂದು ಲಕ್ಷ ರೂ. ವಿತರಿಸಲಾಗುತ್ತಿದೆ. ಒಟ್ಟಾರೆ ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ಬಿಡುಗಡೆಯಾಗಲಿದೆ ಎಂದರು. ಮರುಚಿಂತನೆ: ಸಂತರ, ಗಣ್ಯರ ಜಯಂತಿಗಳ ಪಟ್ಟಿ ಬೆಳೆಯುತ್ತಲೇ ಇದೆ. ಹೀಗಾಗಿ ಸದ್ಯದಲ್ಲೇ ಸಮಾಜದ ಪ್ರಮುಖರ ಸಭೆ ಕರೆದು ಜಯಂತಿ ಆಚರಣೆಗಳ ಬಗ್ಗೆ ಮರು ಚಿಂತನೆ ಮಾಡಲಾಗುವುದು. ಜಯಂತಿ ಆಚರಣೆಗಳಿಗೆ ಹೊಸ ರೂಪ ಕೊಡಲು ಉದ್ದೇಶಿಸಲಾಗಿದೆ ಎಂದರು.

ಜಯಂತಿಗಳು ಜಾತಿ ಜಯಂತಿಗಳಾಗಿ ಪರಿವರ್ತನೆಯಾಗುತ್ತಿವೆ ಆಗಾಗಬಾರದು ಎಂಬುದು ನಮ್ಮ ಉದ್ದೇಶ ಎಂದು ಹೇಳಿದರು. ಶಾಸಕಿ ಲಕ್ಷ್ಮಿಹೆಬ್ಬಾಳ್ಕರ್ ಅವರಿಗೆ ಇಡಿ ನೋಟಿಸ್ ಜಾರಿಯಾಗಿರುವುದರ ಬಗ್ಗೆ ಗಮನಸೆಳೆದಾಗ ಸಹವಾಸದಿಂದ ಸನ್ಯಾಸಿ ಕೆಟ್ಟ ಎಂದು ಮಾರ್ಮಿಕ ಉತ್ತರವನ್ನಷ್ಟೇ ನೀಡಿದರು.