ಪ್ರವಾಸಿ ತಾಣಗಳ ಅಭಿವೃದ್ಧಿಗಾಗಿ 2020ಕ್ಕೆ ಪ್ರವಾಸೋದ್ಯಮ ನೀತಿ ಜಾರಿ : ಸಿ.ಟಿ.ರವಿ
ತುಮಕೂರು, ಸೆ.27- ರಾಜ್ಯದ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ 2020ರಲ್ಲಿ ಪ್ರವಾಸೋದ್ಯಮ ನೀತಿಯನ್ನು ಜಾರಿಗೊಳಿಸಲಾಗುವುದೆಂದು ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಸಿ.ಟಿ.ರವಿ ತಿಳಿಸಿದರು. ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು,
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಜ್ಯದ ಪ್ರಮುಖ ಪ್ರವಾಸಿ ತಾಣಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಪಡಿಸುವ ಯೋಜನೆಯನ್ನು ತಯಾರಿಸಿ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲು ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಅಲ್ಪಾವಧಿ ಹಾಗೂ ದೀರ್ಘಾವಧಿ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
ಕೆಲವು ಪ್ರವಾಸಿ ಕ್ಷೇತ್ರಗಳನ್ನು ಖಾಸಗಿ ಸಹಭಾಗಿತ್ವದಲ್ಲಿ, ಕೆಲವು ಕ್ಷೇತ್ರಗಳನ್ನು ಸ್ವಯಂ ಸೇವಾ ಸಂಘಗಳ ಸಹಕಾರದಲ್ಲಿ ಹಾಗೂ ಕೆಲವು ಪ್ರವಾಸಿ ತಾಣಗಳನ್ನು ಸರ್ಕಾರಿ ಅನುದಾನ ಬಳಸಿ ಅಭಿವೃದ್ಧಿಪಡಿಸಲಾಗುವುದಲ್ಲದೆ ಜಿಲ್ಲೆಯಲ್ಲಿ ಗುರುತಿಸಿರುವ 28 ಪ್ರವಾಸಿ ತಾಣಗಳನ್ನು ಪ್ರವಾಸೋದ್ಯಮ ಇಲಾಖೆಯಿಂದ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದೆಂದರು.
ಕರ್ನಾಟಕದಲ್ಲಿ ಮಾತ್ರ ಅಂತರಾಷ್ಟ್ರೀಯ ಹಾಗೂ ಅಂತರರಾಜ್ಯ ಮಟ್ಟದಲ್ಲಿ ಗಮನ ಸೆಳೆಯಬಹುದಾದ 1500ಕ್ಕೂ ಹೆಚ್ಚು ಕೇಂದ್ರ ಹಾಗೂ ರಾಜ್ಯ ಪುರಾತತ್ವ ಕಟ್ಟಡಗಳು ಕಾಣಸಿಗುತ್ತದೆ. ಸಾಂಸ್ಕøತಿಕವಾಗಿ ಭಿನ್ನತೆಯಿಂದ ಕೂಡಿರುವ ರಾಜ್ಯವು ಭಾಷೆ ಮತ್ತು ಆಹಾರದಲ್ಲಿ ವೈವಿಧ್ಯತೆಯಿಂದ ಕೂಡಿದೆ. ಅಲ್ಲದೆ ಪ್ರಾದೇಶಿಕ ಉತ್ಸವಗಳ ಪರಂಪರೆಗಳು ಪ್ರವಾಸೋದ್ಯಮವನ್ನು ಸೆಳೆಯುತ್ತಿರುವುದು ಮತ್ತೊಂದು ವಿಶೇಷ. ರಾಜ್ಯದಲ್ಲಿರುವ ಪ್ರವಾಸಿ ತಾಣಗಳ ಅಭಿವೃದ್ಧಿಯಲ್ಲಿ ಸಾರ್ವಜನಿಕರ ಕೊಡುಗೆಯು ಮುಖ್ಯವಾಗಿದೆ ಎಂದು ತಿಳಿಸಿದರು.
ಪ್ರವಾಸೋದ್ಯಮ ಇಲಾಖೆಯಲ್ಲಿ ಶೇ. 80ಕ್ಕೂ ಅತಿ ಹೆಚ್ಚು ಹುದ್ದೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಲ್ಲಿ ಶೇ.61ರಷ್ಟು ಹುದ್ದೆಗಳು ಖಾಲಿಯಿದ್ದು, ಪ್ರಸ್ತುತ ನಿಯೋಜನೆ, ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿ ಸೇವೆ ಪಡೆಯಲಾಗುತ್ತಿದೆ. ಹಣಕಾಸು ಇಲಾಖೆ ಅನುಮೋದನೆ ನೀಡಿದಲ್ಲಿ ನೇರ ನೇಮಕಾತಿ ಮೂಲಕ ಅಥವಾ ಕೆಪಿಎಸ್ಸಿ ಮೂಲಕ ಭರ್ತಿ ಮಾಡಲು ಸಿದ್ಧರಿದ್ದೇವೆ. ಎಂದರು.
ಮಧುಗಿರಿ ಏಕಶಿಲಾ ಬೆಟ್ಟಕ್ಕೆ ಕೇಬಲ್ ಕಾರ್ ಅಳವಡಿಸುವ ಬಗ್ಗೆ ಪತ್ರಕರ್ತರೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇತ್ತೀಚೆಗಷ್ಟೇ ಪ್ರವಾಸೋದ್ಯಮ ಸಚಿವನಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಜಿಲ್ಲಾದ್ಯಂತ 2 ತಿಂಗಳ ಕಾಲ ಪರ್ಯಟನೆ ನಡೆಸಿ ಪ್ರವಾಸಿ ತಾಣಗಳ ಅಧ್ಯಯನ ಮಾಡಿದ ನಂತರ ಕೇಬಲ್ ಕಾರ್ ಅಳವಡಿಕೆ ಯೋಜನೆ ತಯಾರಿಸುವ ಬಗ್ಗೆ ಮುಂದಿನ ಆಯವ್ಯಯದಲ್ಲಿ ಮಂಡಿಸಬೇಕೆಂದು ಚಿಂತನೆ ನಡೆಸಲಾಗಿದೆ ಎಂದರು.
ಕಳೆದ 2009-10ರಿಂದ ಇಲ್ಲಿಯವರೆಗೂ ಜಿಲ್ಲೆಯಲ್ಲಿ 993 ಪ್ರವಾಸಿ ಟ್ಯಾಕ್ಸಿಗಳು ಮಂಜೂರಾಗಿದ್ದು, ಈ ಪೈಕಿ 880 ಟ್ಯಾಕ್ಸಿಗಳು ವಿತರಣೆಯಾಗಿವೆ. ಇಲಾಖೆಯಿಂದ ಟ್ಯಾಕ್ಸಿ ಪಡೆದು ಅದರಿಂದ ಆಗಿರುವ ಪ್ರಯೋಜನಗಳ ಬಗ್ಗೆ ಹಾಗೂ ಜಿಲ್ಲೆಯಲ್ಲಿ ಬೇಡಿಕೆ ಕುರಿತಂತೆ ಸರ್ವೆಯನ್ನು ಮಾಡಿಸಿ ವರದಿ ನೀಡಿ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸಚಿವರು ಸೂಚಿಸಿದರು. ಪ್ರವಾಸೋದ್ಯಮ ಇಲಾಖೆಯ ಕಾಮಗಾರಿಗಳನ್ನು ಅನುಷ್ಠಾನಗೊಳಿಸುತ್ತಿರುವ ಏಜೆನ್ಸಿಗಳು ಡಿಸೆಂಬರ್ ಒಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಅವರು ಏಜೆನ್ಸಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳಲ್ಲಿ ಕುಡಿಯುವ ನೀರು, ಶೌಚಾಲಯ ಸಂಪರ್ಕ ಸೇರಿದಂತೆ ,ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಸಂಬಂಧ ಅಲ್ಪಾವಧಿ ಹಾಗೂ ದೀರ್ಘಾವಧಿ ಸಮಗ್ರ ಯೋಜನೆಯನ್ನು ರೂಪಿಸಿ ವರದಿ ಕಳುಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿರುವ ಗ್ರಾಮಗಳ ಇತಿಹಾಸ, ಸಾಮಾಜಿಕ, ಆರ್ಥಿಕ ಸ್ಥಿತಿಗತಿ, ದೇವಾಲಯಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ವಿಕ್ಕಿಪೀಡಿಯಾ ಮಾದರಿಯಲ್ಲಿ ವೆಬ್ಸೈಟ್ನಲ್ಲಿ ಅಳವಡಿಸಲು ಯೋಜಿಸಲಾಗಿದೆ ಎಂದು ಸಿ.ಟಿ.ರವಿ ತಿಳಿಸಿದರು.
ಸಭೆಯಲ್ಲಿ ಶಾಸಕರಾದ ನಾಗೇಶ್, ಜ್ಯೋತಿಗಣೇಶ್, ವೀರಭದ್ರಯ್ಯ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕಿ ಜಾನಕಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್, ಜಿಲ್ಲಾಧಿಕಾರಿ ಡಾ|| ಕೆ. ರಾಕೇಶ್ಕುಮಾರ್, ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ, ಆಪಿನಕಟ್ಟೆ, ಜಾವೇದ್ ಕರಂಗಿ ಮತ್ತಿತರರ ಅಧಿಕಾರಿಗಳು ಹಾಜರಿದ್ದರು.
ಪ್ರಗತಿ ಪರಿಶೀಲನೆಗೂ ಮುನ್ನ ತುಮಕೂರು ತಾಲ್ಲೂಕು ಕೈದಾಳ ಗ್ರಾಮದಲ್ಲಿರುವ ಚನ್ನಕೇಶವ ಸ್ವಾಮಿ ದೇವಸ್ಥಾನಕ್ಕೆ ಭೇಟಿನೀಡಿ ಇಲಾಖೆಯಿಂದ ಕೈಗೊಂಡಿರುವ ಕಾಮಗಾರಿಗಳನ್ನು ಸಚಿವರು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಶಾಸಕ ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕ ಸುರೇಶ್ಗೌಡ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಮತ್ತಿತರರು ಹಾಜರಿದ್ದರು.