Monday, July 21, 2025
Homeರಾಜ್ಯಅಪಾಯಕಾರಿ ವೃಕ್ಷ, ಕೊಂಬೆ ತೆರವಿಗೆ ಸಚಿವ ಈಶ್ವರ ಖಂಡ್ರೆ ಸೂಚನೆ

ಅಪಾಯಕಾರಿ ವೃಕ್ಷ, ಕೊಂಬೆ ತೆರವಿಗೆ ಸಚಿವ ಈಶ್ವರ ಖಂಡ್ರೆ ಸೂಚನೆ

Minister Eshwar Khandre instructs to remove dangerous trees and branches

ಬೆಂಗಳೂರು, ಜೂ.20- ಗಾಳಿ, ಮಳೆಗೆ ಮರ ಹಾಗೂ ಕೊಂಬೆಗಳು ಬಿದ್ದು ಪ್ರಾಣಹಾನಿ, ಆಸ್ತಿ ಹಾನಿ ಆಗುತ್ತಿದ್ದು, ಮಳೆಗಾಲಕ್ಕೆ ಮೊದಲೇ ಅಪಾಯಕಾರಿ ವೃಕ್ಷ ಗುರುತಿಸಿ ಕೊಂಬೆಗಳನ್ನು ಕತ್ತರಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ವರಿಸರ ಸಚಿವ ಈಶ್ವರ ಬಿ.ಖಂಡ್ರೆ ಅರಣ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಬೆಂಗಳೂರಿನ ಕಂಟೋನ್ವೆಂಟ್ ಬಳಿ ಇಂದು ರಸ್ತೆ ಬದಿಯ ಮರದ ಸುತ್ತಲೂ ಹಾಕಲಾಗಿದ್ದ ಕಾಂಕ್ರೀಟ್ ತೆರವು ಮಾಡುವ ಮೂಲಕ ವೃಕ್ಷಗಳ ಸಂರಕ್ಷಣಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮರದ ಕೊಂಬೆ ಬಿದ್ದು ಗಾಯಗೊಂಡಿದ್ದ 29 ವರ್ಷದ ಅಕ್ಷಯ್ ಮೃತಪಟ್ಟಿರುವ ಬಗ್ಗೆ ತೀವ್ರ ಶೋಕ ವ್ಯಕ್ತಪಡಿಸಿದರು.

ಮಳೆ, ಗಾಳಿಗೆ ಟೊಳ್ಳು ಮರಗಳು ಮತ್ತು ಬೇರು ಕಚ್ಚದ ಮರಗಳು ಧರಾಶಾಯಿ ಆಗುತ್ತವೆ. ಇದಕ್ಕೆ ಕಾರಣ ಬೇರಿಗೆ ನೀರು ಇಳಿಯದಂತೆ ಹಾಕಲಾಗಿರುವ ಕಾಂಕ್ರೀಟ್, ಕಲ್ಲಿನ ಚಪ್ಪಡಿ, ಟೈಲ್ಸ್ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವೂ ತೀರ್ಪು ನೀಡಿದ್ದು, ಸರ್ಕಾರ ಈ ಸಂಬಂಧ ಅಧಿಕೃತ ಆದೇಶವನ್ನೇ ಹೊರಡಿಸಿದೆ ಎಂದರು.

ಮರದ ಸುತ್ತ ಇರುವ ಕಾಂಕ್ರೀಟ್ ತೆರವಿಗೆ ಬಿಬಿಎಂಪಿ ವಿಶೇಷ ಆಯುಕ್ತರು ನಿನ್ನೆ ಆದೇಶ ಮಾಡಿದ್ದು, ಇನ್ನು ಮುಂದೆ ರಸ್ತೆ ಬದಿ ಸಸಿ ನೆಡುವಾಗ ಒಂದು ಮೀಟರ್ ಸುತ್ತಳತೆಯಲ್ಲಿ ಮಣ್ಣು ಇರುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು, ಬಿಬಿಎಂಪಿ ಮತ್ತು ರಾಜ್ಯದ ಎಲ್ಲ ನಗರಗಳ ಸ್ಥಳೀಯ ಸಂಸ್ಥೆಗಳು ಮತ್ತು ಹೆದ್ದಾರಿ ಪ್ರಾಧಿಕಾರ. ತೋಟಗಾರಿಕೆ ಇಲಾಖೆ ಹಾಗೂ ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ವಿಭಾಗ ತಾನು ಈಗಾಗಲೇ ನೆಟ್ಟಿರುವ ಗಿಡ ಮರಗಳ ಸುತ್ತ ಇರುವ ಕಾಂಕ್ರೀಟ್, ಡಾಂಬರು ತೆರವಿಗೆ ಕ್ರಮ ವಹಿಸಬೇಕು ಎಂದು ಹೇಳಿದರು.

ವೃಕ್ಷ ಪ್ರಾಧಿಕಾರ ಸಭೆಗಳನ್ನು ನಿಯಮಿತವಾಗಿ ನಡೆಸಿ, ಅಪಾಯಕಾರಿ ಮರಗಳನ್ನು ಗುರುತಿಸಿ, ಅವುಗಳ ರೆಂಬೆ, ಕೊಂಬೆ ತೆರವಿಗೆ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ಒಬ್ಬ ಮನುಷ್ಯ ನೆಮ್ಮದಿಯಿಂದ ಉಸಿರಾಡಲು 7 ಮರ ಇರಬೇಕು ಎಂದು ತಜ್ಞರು ಹೇಳುತ್ತಾರೆ. ಆದರೆ ಇಂದು ಬೆಂಗಳೂರು ಕಾಂಕ್ರೀಟ್ ಕಾಡಾಗಿದ್ದು, ಇಲ್ಲಿ 7 ಜನರಿಗೆ 1 ಮರವೂ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಪ್ರತಿಯೊಬ್ಬರೂ ವೃಕ್ಷ ಸಂರಕ್ಷಣೆ ಮತ್ತು ಸಂವರ್ಧನೆಗೆ ಮುಂದಾಗಬೇಕು ಎಂದರು.

ಪ್ರತಿಯೊಬ್ಬರಿಗೂ ಆಮ್ಲ ಜನಕ ಬೇಕು, ಆದರೆ ತಮ್ಮ ಮನೆಯ ಮುಂದೆ ಗಿಡ ಇರಬಾರದು. ಇದರ ಎಲೆ ಉದುರಿದರೆ ಮನೆ ಮುಂದೆ ಕಸ ಆಗುತ್ತದೆ ಎನ್ನುತ್ತಾರೆ. ಇನ್ನು ಮನೆಯ ಸೌಂದರ್ಯಕ್ಕೆ ಅಥವಾ ಅಂಗಡಿಗಳ ಫಲಕ ಕಾಣುವುದಿಲ್ಲ ಎಂದು ಮರ ಕಡಿಯುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ವಿಷಾದಿಸಿದರು.

4000 ಕೋಟಿ ರೂ. ಮೌಲ್ಯದ ಅರಣ್ಯ ಒತ್ತುವರಿ ತೆರವು: ಬೆಂಗಳೂರು ನಗರ ಜಿಲ್ಲೆಯಲ್ಲಿ ಸುಮಾರು 2041 ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ. ಈ ಪೈಕಿ ಕಳೆದ 2 ವರ್ಷದಲ್ಲಿ ಸುಮಾರು 4000 ಕೋಟಿ ರೂ. ಬೆಲೆ ಬಾಳುವ 128 ಎಕರೆ ಅರಣ್ಯ ಭೂಮಿಯ ಒತ್ತುವರಿಯನ್ನು ತೆರವು ಮಾಡಿಸಲಾಗಿದೆ ಎಂದು ವಿವರಿಸಿದರು.

RELATED ARTICLES

Latest News