ಈಶ್ವರಪ್ಪರನ್ನು ಸಿಎಂ ಮಾಡುವಂತೆ ಹೈಕಮಾಂಡ್‍ಗೆ ಮನವಿ

ಬೆಂಗಳೂರು, ಜು.23- ಸಚಿವ ಈಶ್ವರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಹಿಂದುಳಿದ ವರ್ಗಗಳ ಮುಖಂಡರು ಬಿಜೆಪಿ ಹೈಕಮಾಂಡ್‍ಗೆ ಮನವಿ ಮಾಡಿದ್ದಾರೆ. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲು ನಮ್ಮ ಬೆಂಬಲವಿದೆ. ಅವರನ್ನು ಬದಲಾಯಿಸುವುದಾದರೆ ಯಡಿಯೂರಪ್ಪನವರ ಸಮಕಾಲೀನರಾದ ಹಾಗೂ ಹಿಂದುಳಿದ ವರ್ಗಗಳ ಮುಖಂಡರಾದ ಕೆ.ಎಸ್.ಈಶ್ವರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಹಿಂದುಳಿದ ವರ್ಗಗಳ ಸಂಘಟನೆಗಳ ಮುಖಂಡರು ಇಂದು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಆಗ್ರಹಿಸಿದರು.

ಕುರುಬ ಸಮಾಜದ ಮುಖಂಡರಾದ ಮುಕುಡಪ್ಪ, ಕೋಲಿ ಸಮಾಜದ ಮುಖಂಡರಾದ ತಿಪ್ಪಾರೆಡ್ಡಿ, ಸವಿತಾ ಸಮಾಜದ ಎಂ.ಬಿ.ಶಿವಪ್ಪ, ಮಾಲಿ ಸಮಾಜದ ಬಸವರಾಜ ಬಾಳೆಕಾಯಿ, ಯಾದವ ಸಮಾಜದ ಪ್ರಸನ್ನಕುಮಾರ್, ವಿಶ್ವಕರ್ಮ ಸಮುದಾಯದ ವಿಶ್ವನಾಥ್ ವಿಶ್ವಕರ್ಮ, ಈಡಿಗ ಸಮಾಜದ ಹುಚ್ಚಪ್ಪ ಬಸವರಾಜ್ ಸೇರಿದಂತೆ ವಿವಿಧ ಮುಖಂಡರು ಮಾತನಾಡಿ, ಈಶ್ವರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಬೇಕೆಂದು ಒಕ್ಕೊರಲ ಅಭಿಪ್ರಾಯ ವ್ಯಕ್ತಪಡಿಸಿದರು.

ಈಶ್ವರಪ್ಪ ಅವರು ಬಿಜೆಪಿಯಲ್ಲಿ ಅತ್ಯಂತ ಹಿರಿಯರು ಮತ್ತು ಪಕ್ಷನಿಷ್ಠರಾಗಿದ್ದಾರೆ. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಬಿಜೆಪಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಬಿಜೆಪಿ ಯುವ ಘಟಕದಿಂದ ಹಿಡಿದು ವಿವಿಧ ಮಜಲುಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ, ಉಪಮುಖ್ಯಮಂತ್ರಿಯಾಗಿ, ಪ್ರಸ್ತುತ ಸಚಿವರಾಗಿ, ಹಿಂದುಳಿದ ವರ್ಗಗಳ ಮುಖಂಡರಾಗಿರುವ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಅವರು ಹೇಳಿದರು.

2008 ರಿಂದ 2013ರ ವರೆಗೆ ಬಿಜೆಪಿ ಅಧಿಕಾರವಿದ್ದ ಸಂದರ್ಭದಲ್ಲಿ ಲಿಂಗಾಯಿತರು, ಒಕ್ಕಲಿಗರಿಗೆ ಮುಖ್ಯಮಂತ್ರಿಗಳ ಸ್ಥಾನ ಲಭಿಸಿದೆ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಲಿಂಗಾಯಿತರಿಗೆ ಅವಕಾಶ ಸಿಕ್ಕಿದೆ. ರಾಜ್ಯದ 31 ಜಿಲ್ಲೆಗಳಲ್ಲಿ ಕುರುಬ ಸಮುದಾಯ ಹೆಚ್ಚಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಹೈಕಮಾಂಡ್ ಸಮುದಾಯದ ಮುಖಂಡರಾದ ಈಶ್ವರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಮುಖಂಡರು ಒತ್ತಾಯಿಸಿದರು.

ಕುರುಬ ಸಮುದಾಯಕ್ಕೆ ಮೀಸಲಾತಿ ಹೋರಾಟದಲ್ಲಿ ಈಶ್ವರಪ್ಪ ಅವರು ಮುಂಚೂಣಿಯಲ್ಲಿದ್ದರು. ಕೊರೊನಾ ಹಿನ್ನೆಲೆಯಲ್ಲಿ ಹೋರಾಟವನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಮತ್ತೆ ಹೋರಾಟವನ್ನು ನಾವು ಪ್ರಾರಂಭ ಮಾಡುತ್ತೇವೆ ಎಂದು ತಿಳಿಸಿದರು.