ತುಮಕೂರು, ಜು.11- ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸಲು ಬಿಜೆಪಿ ಸರ್ಕಾರ ಬದ್ಧವಾಗಿದೆ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.
ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಮಕೂರು ನಾಲೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವುದರಿಂದ ನೀರು ಹರಿಸಲು ಆಗಿರಲಿಲ್ಲ, ಈಗ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಇಂದಿನಿಂದಲೇ ನೀರು ಹರಿಸಲಾಗುವುದು ಎಂದರು.
ಬುಗುಡನಹಳ್ಳಿ, ಮದಲೂರು ಸೇರಿದಂತೆ ಜಿಲ್ಲಾಯ ಎಲ್ಲ ಕೆರೆಗಳನ್ನು ತುಂಬಿಸುವಂತೆ ಸಚಿವ ಮಾಧುಸ್ವಾಮಿ, ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಪತ್ರ ಬರೆದಿದ್ದು, ನೀರು ಹರಿಸಲು ಕ್ರಮ ವಹಿಸಲಾಗಿದೆ ಎಂದರು. ಬುಗುಡನಹಳ್ಳಿ ನೀರು ಸಂಗ್ರಹಗಾರದಲ್ಲಿ ನೀರು ಖಾಲಿಯಾಗಿರುವ ಬಗ್ಗೆ ಸಿದ್ಧಗಂಗಾ ಮಠಾೀಶರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಪ್ರಶ್ನಿಸಿ ಕೆರೆಗಳಿಗೆ ನೀರು ಹರಿಸುವಂತೆ ಸಚಿವ ಗೋಪಾಲಯ್ಯ ಅವರಿಗೆ ಮನವಿ ಮಾಡಿದರು.
ಹೇಮಾವತಿ ಜಲಾಶಯ ಭರ್ತಿಯಾಗಿರುವುದರಿಂದ ನೀರು ಹರಿಸಲು ಸೂಚನೆ ನೀಡಲಾಗಿದೆ. ಮದಲೂರು, ದೇವರಾಯಪಟ್ಟಣ ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ಸ್ವಾಮೀಜಿಗಳಿಗೆ ತಿಳಿಸಿದರು.
ಜು.17ಕ್ಕೆ ಬಸವಣ್ಣ ಪ್ರತಿಮೆ ಅನಾವರಣ: ಸಚಿವ ಗೋಪಾಲಯ್ಯ ಅವರ ಸ್ವಕ್ಷೇತ್ರ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ನಲ್ಲಿ ಬಸವಣ್ಣ, ಡಾ. ಶ್ರೀ ಶಿವಕುಮಾರ ಸ್ವಾಮೀಜಿ, ಡಾ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಪ್ರತಿಮೆ ಅನಾವರಣ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ಜು.17ಕ್ಕೆ ಏರ್ಪಡಿಸಲಾಗಿದ್ದು, ಕಾರ್ಯಕ್ರಮಕ್ಕೆ ಸ್ವಾಮೀಜಿ ಅವರನ್ನು ಆಹ್ವಾನಿಸಲಾಗಿದೆ ಎಂದರು.
ಈ ವೇಳೆ ಕಲ್ಲಹಳ್ಳಿ ದೇವರಾಜು, ಮಾರೇಗೌಡ, ಗೋಪಾಲಕೃಷ್ಣ, ಹಿರೇಹಳ್ಳಿ ಗ್ರಾ.ಪಂ.ಅಧ್ಯಕ್ಷ ಸತೀಶ್ ಸೇರಿದಂತೆ ಇತರರಿದ್ದರು.