ಈ ಬಾರಿಯಾದರೂ ಖರ್ಗೆ ಸಿಎಂ ಅಭ್ಯರ್ಥಿ ಎಂದು ಘೋಷಿಸಲಿ : ಕಾರಜೋಳ ಸವಾಲು

Social Share

ಬೆಂಗಳೂರು,ಅ.1- ಎಐಸಿಸಿ ಅಧ್ಯಕ್ಷ ಸ್ಥಾನ ಅಲಂಕರಿಸುವ ಹೊಸ್ತಿಲಲ್ಲಿರುವ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಈ ಬಾರಿಯಾದರೂ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಕಾಂಗ್ರೆಸ್ ಪಕ್ಷ ಘೋಷಣೆ ಮಾಡಲಿ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸವಾಲು ಹಾಕಿದ್ದಾರೆ.

ದೇಶ ಹಾಗೂ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅನೇಕ ವರ್ಷಗಳ ಕಾಲ ಆಡಳಿತ ನಡೆಸಿದೆ. ದಲಿತ ಸಮುದಾಯಕ್ಕೆ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದು ಸಾಕು. ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಲಿ. ಇದು ನಾನು ಆ ಪಕ್ಷಕ್ಕೆ ಹಾಕುವ ಸವಾಲು ಎಂದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಾಂಗ್ರೆಸ್ ಮೋಸ ಮಾಡಿದೆ. 11 ಬಾರಿ ಗೆದ್ದಿದ್ದ ಅವರು ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆಯನ್ನು ಹೊಂದಿದ್ದರು. ಆದರೂ ಅವರಿಗೆ ಅನ್ಯಾಯ ಮಾಡಿದೆ ಎಂದು ದೂರಿದರು.

60 ವರ್ಷ ಆಡಳಿತ ನಡೆಸಿರುವ ನೀವು ಕೇವಲ ದಲಿತರ ಮತಗಳು ಬೇಕು ಎಂದಾಗ ಅವರನ್ನು ನೆನಪಿಸಿಕೊಳ್ಳುತ್ತೀರಿ. ನಿಮ್ಮ ಈ ನಾಟಕ ಗೊತ್ತಾದ ಮೇಲೆ ಆ ಸಮುದಾಯ ಕಾಂಗ್ರೆಸ್‍ನಿಂದ ಬಿಜೆಪಿ ಕಡೆ ವಾಲುತ್ತಿದ್ದಾರೆ. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ನಾವು ಗೆದ್ದಿರುವ ಸ್ಥಾನಗಳೇ ಇದಕ್ಕೆ ಸಾಕ್ಷಿ ಎಂದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ ಜೋಡೋ ಯಾತ್ರೆಯಿಂದ ಕಾಂಗ್ರೆಸ್ ಅವಸಾನದ ಹಂತ ತಲುಪಿದೆ. ಅವರಿಗೆ ರಕ್ಷಣೆ ನಾವು ಕೊಡಲು ಬದ್ಧ ಅವರ ಯಾತ್ರೆ ಎಷ್ಟರ ಮಟ್ಟಿಗೆ ಕಾಂಗ್ರೆಸ್‍ಗೆ ಬಲ ಕೊಡುತ್ತದೆಯೋ ಗೊತ್ತಿಲ್ಲ . ಆದರೆ ಅವರಿಗೆ ರಕ್ಷಣೆ ಕೊಡುವುದು ನಮ್ಮ ಕೆಲಸ ಅದನ್ನು ಮಾಡುತ್ತೇವೆ ಎಂದು ಹೇಳಿದರು.

ರಾಹುಲ್ ಗಾಂಧಿಯವರ ಪಾದಯಾತ್ರೆ ಫ್ಲಕ್ಸ್‍ಲ್ಲಿ ಕನ್ನಡ ಬಳಸದಿರುವುದರಿಂದ ಫ್ಲೆಕ್ಸ್ ಹರಿದಿರಬಹುದು. ಕಾಂಗ್ರೆಸ್ ನಾಯಕರಿಗೆ ಬಿಜೆಪಿ ದೂರುವುದು ಬಿಟ್ಟರೆ ಬೇರೆ ಉದ್ಯೋಗ ಇಲ್ಲ. ಈ ಪಾದಯಾತ್ರೆಯಿಂದ ಬಿಜೆಪಿಗೆ ಯಾವ ಸಮಸ್ಯೆ ಇಲ್ಲ ಎಂದು ಕಾರಜೋಳ ಸ್ಪಷ್ಟಪಡಿಸಿದರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಟ್ಟಿಹಾಕಲು ರಾಹುಲ್ ಗಾಂಧಿ ಸಮರ್ಥರಲ್ಲ.

ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪುಡಾರಿಗಳು ಪೊಲೀಸರಿಗೆ ಬೆದರಿಸುತ್ತಿದ್ದಾರೆ. ಇನ್ನೂ ಆರು ತಿಂಗಳಿಗೆ ನಾವೇ ಅಧಿಕಾರಕ್ಕೆ ಬರುತ್ತೇವೆಂದು ಹೇಳುತ್ತಿದ್ದಾರೆ. ಯಾವುದೇ ಕಾರಣಕ್ಕೂ ಅವರು ಅಧಿಕಾರಕ್ಕೆ ಬರುವುದಿಲ್ಲ ಎಂದು ಭವಿಷ್ಯ ನುಡಿದರು.

ಪಾದಯಾತ್ರೆಗೆ ಬಂದವರೆಲ್ಲ ಕಾಂಗ್ರೆಸ್ ಕಾರ್ಯಕರ್ತರಲ್ಲ. ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅಂದರೆ 36. ಎರಡು ಮುಖ ಕೂಡುವುದಿಲ್ಲ ಹಾಗಾಗಿ ನಾನು ಅವರಿಗೆ 36 ಎಂದುಹೇಳುತ್ತೇನೆ. 36 ಯಾವತ್ತೂ ಸಹ ಮುಖ ಕೊಡುವುದಿಲ್ಲ ಇಬ್ಬರು ಸಹ ಸಿಎಂ ಕುರ್ಚಿಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಒಂದು ಕುರ್ಚಿಯಲ್ಲಿ ಇಬ್ಬರು ಕೂರಲು ಸಾಧ್ಯವಿಲ್ಲ. ಇಬ್ಬರ ಸಿದ್ಧಾಂತ ಬೇರೆ ಬೇರೆ ಇದೆ ಎಂದು ಹೇಳಿದರು.

ಕಿತ್ತೂರುರಾಣಿ ಚನ್ನಮ್ಮ ಜಯಂತಿ: ಬ್ರಿಟಿಷರ ವಿರುದ್ಧ ಕೆಚ್ಚೆದೆಯ ಹೋರಾಟ ನಡೆಸಿದ ರಾಣಿ ಕಿತ್ತೂರು ರಾಣಿ ಚೆನ್ನಮ್ಮ ದಿನಾಚರಣೆ ಹಿನ್ನೆಲೆಯಲ್ಲಿ ನಾಳೆ ಟೌನ್ ಹಾಲ್‍ನಿಂದ ವೀರ ಜ್ಯೋತಿ ಕಳಿಸಲಾಗುವುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಇದೇ ತಿಂಗಳ 23ರಿಂದ ಮೂರು ದಿನಗಳ ಕಾಲ ಚೆನ್ನಮ್ಮ ಜಯಂತಿಯನ್ನು ಆಚರಣೆ ಮಾಡಲಾಗುವುದು. ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಮಾಡಲಾಗುತ್ತಿದೆ. ಈ ಉತ್ಸವದಲ್ಲಿ ರಾಜ್ಯದ ಜನತೆ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲೆಯ ಉಸ್ತುವಾರಿ ಆಗಿರುವುದರಿಂದ ಜಿಲ್ಲಾಡಳಿತ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯನ್ನು ಜೋಡಿಸಿಕೊಂಡು ಮಾಡಲಾಗುತ್ತಿದೆ. 25 ನೇ ತಾರೀಖು ವಿಶಿಷ್ಟ ಕಾರ್ಯಕ್ರಮ ಮಾಡುತ್ತೇವೆ. ಜಿಲ್ಲೆಯಲ್ಲಿ ಇರುವ ಮಾಜಿ ಸೈನಿಕರನ್ನ ಕರೆಸಿ ಗೌರವ ಸಲ್ಲಿಸುವುದಾಗಿ ಕಾರಜೋಳ ತಿಳಿಸಿದರು.

Articles You Might Like

Share This Article