ಎಂ.ಬಿ.ಪಾಟೀಲ್‍ಗೆ ಕಾರಜೋಳ ತಿರುಗೇಟು

ಬೆಂಗಳೂರು/ಬಾಗಲಕೋಟೆ, ಜ.13- ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರು ಇಂದು ಮತ್ತೊಂದು ಪತ್ರಿಕಾಗೋಷ್ಠಿ ನಡೆಸಿ ತಮ್ಮ ಕಾಲದ ಮೇಕೆದಾಟು ಘಟನೆಗಳನ್ನು ಇತಿಹಾಸದ ರೂಪದಲ್ಲಿ ಬಿಂಬಿಸಿ ತಮ್ಮ ಅಧಿಕಾರಾವಧಿಯಲ್ಲಿ ಆಗಿರುವ ವಿಳಂಬವನ್ನು ಮರೆಮಾಚುವ ಪ್ರಯತ್ನ ಮಾಡಿದ್ದಾರೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವ್ಯಂಗ್ಯವಾಡಿದ್ದಾರೆ.

ಪ್ರಾರಂಭದಿಂದಲೂ ನಾನು ತಮ್ಮನ್ನು ಪ್ರಶ್ನಿಸುತ್ತಿರುವುದು ಜಲಸಂಪನ್ಮೂಲ ಸಚಿವರಾಗಿದ್ದಾಗ ತಾವು ಒಂದು ಡಿ.ಪಿ.ಆರ್. ಸಿದ್ಧಪಡಿಸಲು ಅನಗತ್ಯವಾಗಿ ಕಾಲಹರಣ ಮಾಡಲಾಯಿತು ಎಂಬುದರ ಕುರಿತೇ ಹೊರತು ತಾವು ಪಟ್ಟಿ ಮಾಡಿರುವ ಘಟನಾವಳಿಗಳು ಸರ್ಕಾರದ ಕಡತದಲ್ಲಿಯೇ ಇವೆ ಎಂದೂ ಹೇಳಿದ್ದಾರೆ.

ಒಂದು ಡಿ.ಪಿ.ಆರ್. ಸಿದ್ಧಪಡಿಸುವುದಕ್ಕಾಗಿ ಏಜೆನ್ಸಿ ಅಂತಿಮಗೊಳಿಸಲು, ತಾವು ನಾಲ್ಕು ವರ್ಷಗಳ ಕಾಲಹರಣ ಮಾಡಿದ್ದನ್ನು ತಾವೇ ಇಂದು ಒಪ್ಪಿಕೊಂಡಿದ್ದೀರಿ. ತಾವು ಸಭೆಗಳನ್ನು ನಡೆಸಿದ್ದು, ಯಾವುದೇ ಪರಿಣಾಮ ಬೀರಲಿಲ್ಲ ಎಂಬುದು ಸಹ ಇದರಿಂದ ವ್ಯಕ್ತವಾಗುತ್ತದೆ ಎಂದು ತಿಳಿಸಿದ್ದಾರೆ.

ಮೇಕೆದಾಟುವಿನಂತಹ ರಾಜ್ಯದ ಮಹತ್ವದ ಪ್ರತಿಷ್ಠಿತ ಯೋಜನೆಗೆ ಡಿ.ಪಿ.ಆರ್. ಸಿದ್ಧಪಡಿಸಲು ತಾವು ವ್ಯಯ ಮಾಡಿದ ಸಮಯ ವ್ಯರ್ಥವೆಂದು ತಮಗೇ ಅನ್ನಿಸುವುದಿಲ್ಲವೇ? ಇದು ವೃಥಾ ಕಾಲಹರಣವಲ್ಲವೇ? ಎಂದು ಪ್ರಶ್ನಿಸಿದರು.

ತಮ್ಮ ಕಾಲದಲ್ಲಿ ಏನು ನಡೆದಿದೆ ಎಂಬ ಘಟನಾವಳಿಗಳ ಇತಿಹಾಸದ ಕುರಿತು ಯಾರೂ ನಿಮ್ಮನ್ನು ಪ್ರಶ್ನಿಸಲ್ಲ. ಆ ಇತಿಹಾಸದ ಕುರಿತು ಹೇಳುವ ಅಗತ್ಯವೂ ಇಲ್ಲ. ತಾವೇ ಹೇಳಿದಂತೆ 4ಜಿ ಕೇಳಿದ್ದು, ದಿನಾಂಕ:10.09.2013ರಂದು 4ಜಿ ದೊರಕಿದ್ದು ದಿನಾಂಕ:25.02.2016ರಂದು. ಇದು ಇನ್ನಷ್ಟು ಕಾಲಹರಣವಲ್ಲವೇ ಎಂದು ಪ್ರಶ್ನಿಸಿದ್ದಾರೆ.