ಬೆಂಗಳೂರು,ಫೆ.15- ಗಣಿಗಾರಿಕೆಯಿಂದ ತೊಂದರೆಗೊಳಗಾದ ಪ್ರದೇಶಗಳ ಅಭಿವೃದ್ಧಿಗೆ ಸಂಗ್ರಹಿಸಲಾಗಿರುವ 19 ಸಾವಿರ ಕೋಟಿ ರೂ.ಗಳನ್ನು ಶೀಘ್ರವೇ ಉಸ್ತುವಾರಿ ಸಮಿತಿ(ಮಾನಿಟರಿಂಗ್ ಕಮಿಟಿ)ಯಿಂದ ಬಿಡುಗಡೆ ಮಾಡಿಸಿಕೊಂಡು ಅಭಿವೃದ್ಧಿಗೆ ಕಾರ್ಯಗಳಿಗೆ ಬಳಸಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್ ತಿಳಿಸಿದರು.
ವಿಧಾನಪರಿಷತ್‍ನಲ್ಲಿ ಸದಸ್ಯ ಕೆ.ಪಿ.ತಿಪ್ಪೇಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸಾಮಾಜಿಕ ಪರಿವರ್ತನಾ ಸಂಸ್ಥೆಯ ವರದಿ ಆಧರಿಸಿ ಸುಪ್ರೀಂಕೋರ್ಟ್ ಉಸ್ತುವಾರಿ ಸಮಿತಿಯನ್ನು ರಚಿಸಿದೆ. ಬಳ್ಳಾರಿ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ಗಣಿಗಾರಿಕೆಯಿಂದ ಹಾನಿಗೊಳಗಾದ ಪರಿಸರ ಪುನರುಜ್ಜೀವನಕ್ಕೆ ಸಮಗ್ರ ಯೋಜನೆ ರೂಪಿಸಿ 2018ರ ಅಕ್ಟೋಬರ್11ರಂದು ಸುಪ್ರೀಂಕೋರ್ಟ್‍ಗೆ ಸಲ್ಲಿಸಲಾಗಿದೆ.
ಇದರಲ್ಲಿ ಕುಡಿಯುವ ನೀರು, ನೈರ್ಮಲ್ಯ, ಗ್ರಾಮೀಣಾಭಿವೃದ್ಧಿ, ರಸ್ತೆ, ಶಿಕ್ಷಣ, ಆರೋಗ್ಯ ಸುಧಾರಣೆ ಸೇರಿ ಹಲವಾರು ಯೋಜನೆಗಳನ್ನು 24,996 ಕೋಟಿ ವೆಚ್ಚದಲ್ಲಿ ಪುನರುಜ್ಜೀವನಗೊಳಿಸುವ ಉದ್ದೇಶವಿದೆ. ಸುಪ್ರೀಂಕೋರ್ಟ್ ಸೂಚನೆ ಪ್ರಕಾರ ಅರಣ್ಯ ಇಲಾಖೆಯ ನಿವೃತ್ತ ಉನ್ನತ ಅಧಿಕಾರಿ ದೀಪಕ್ ಶರ್ಮ, ಯು.ವಿ.ಸಿಂಗ್ ಮತ್ತು ಗಣಿ ಮತ್ತು ಭೂ ಅಭಿವೃದ್ಧಿ ಇಲಾಖೆಯ ಹಾಲಿ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಉಸ್ತುವಾರಿ ಸಮಿತಿ ಇದೆ.
ಈ ಸಮಿತಿ ಗಣಿಗಾರಿಕೆಯಿಂದ ನೇರವಾಗಿ ಶುಲ್ಕ ವಸೂಲಿ ಮಾಡುವುದಿಲ್ಲ. ಬದಲಾಗಿ ಸಿ ದರ್ಜೆಯ ಅದಿರನ್ನು ಹರಾಜು ಹಾಕಲಿದೆ. ಎ, ಬಿ ದರ್ಜೆಯ ಅದಿರಿಗೆ ದಂಡ ವಿಸಿ ಆದಾಯ ಸಂಗ್ರಹಿಸಲಾಗಿದೆ.
ಸುಮಾರು 19 ಸಾವಿರ ಕೋಟಿ ಡಿಸೆಂಬರ್‍ವರೆಗೂ ಸಂಗ್ರಹವಾಗಿದೆ. ಅದನ್ನು ನ್ಯಾಯಾಲಯದ ಗಮನಕ್ಕೆ ತಂದು ಉಸ್ತುವಾರಿ ಸಮಿತಿಯಿಂದ ಬಿಡುಗಡೆ ಮಾಡಿಸಿಕೊಂಡು ಅಭಿವೃದ್ಧಿ ಯೋಜನೆಗಳನ್ನು ಮಾಡುತ್ತೇವೆ ಎಂದು ಹೇಳಿದರು.
